Sunday, 24th November 2024

Chickballapur: ಕ್ರೀಡೆಗಳಲ್ಲಿ ಭಾಗಿಯಾಗಿ ಉತ್ತಮ ಪ್ರದರ್ಶನ ತೋರಿದರೆ ಉಜ್ವಲ ಭವಿಷ್ಯ ಕಾಣಬಹುದು

chickballapur

ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ನೀಡುವ ಮಹತ್ವವನ್ನು ಕ್ರೀಡೆಗೂ ನೀಡಬೇಕು : ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮರಿಸ್ವಾಮಿ

ಚಿಕ್ಕಬಳ್ಳಾಪುರ : ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಿಂದಲೂ ಮಕ್ಕಳಿಗೆ ಉಜ್ವಲ ಭವಿಷ್ಯ ಕೊಡಲು ವಿಫುಲ ಅವಕಾಶಗಳಿವೆ ಎಂಬುದನ್ನು ಅರಿತು ಪೋಷಕರು ಲಿಂಗತಾರತಮ್ಯ ಮಾಡದೆ ಮಕ್ಕಳಿಗೆ ಅವರಿಷ್ಟದ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಮರಿಸ್ವಾಮಿ ತಿಳಿಸಿದರು.

ನಗರಹೊರವಲಯ ನಾಗಾರ್ಜುನ ಕಾಲೇಜು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ,ಜಿಲ್ಲಾಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ಶಿಕ್ಷಣ ) ಹಾಗೂ ನಾಗಾರ್ಜುನ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಶುಕ್ರವಾರ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ೨೦೨೪ಕ್ಕೆ ಚಾಲನೆ ನೀಡಿ ಮಾತನಾಡಿದರು.

ಶೈಕ್ಷಣಿಕವಾಗಿ ಉತ್ತಮ ದಾಖಲೆ ಹೊಂದಿರುವ ಯಾವುದೇ ವಿದ್ಯಾರ್ಥಿಗಳು ಶಿಕ್ಷಣಕ್ಕೆ ನೀಡುವಷ್ಟೇ ಒತ್ತನ್ನು ಕ್ರೀಡಾಚಟವಟಿಕೆಗಳಿಗೂ ಅವರು ನೀಡಿರುತ್ತಾರೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ದೇಹಾರೋಗ್ಯ ಉತ್ತಮವಾಗಿರಬೇಕಾದರೆ ಕ್ರೀಡಾಸಕ್ತಿಯ ಜೀವನ ಶೈಲಿ ಮುಖ್ಯ. ಶೈಕ್ಷಣಿಕ ಸಾಧನೆ ಬಲಗೊಳ್ಳಬೇಕಾದರೆ ಮಾನಸಿಕ ಆರೋಗ್ಯ ಉತ್ತಮವಾಗಿರಬೇಕು.ನಿತ್ಯವೂ ನಮ್ಮ ಆಹಾರದಂತೆ, ನಿದ್ದೆಯಂತೆ, ಕನಸಿನ0ತೆ ನಮಗಿಷ್ಟದ ಆಟೋಟಗಳಲ್ಲಿ, ಕ್ರೀಡಾಕೂಟಗಳಲ್ಲಿ ಸಕ್ರಿಯರಾಗಿ ಭಾಗವಹಿಸುವುದು ಮುಖ್ಯ ಎಂದರು.

ಪೋಷಕರು ತಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಕಟ್ಟಿಕೊಡುವ ಕನಸ ಕಾಣುವುದು ತಪ್ಪಲ್ಲ. ಮಕ್ಕಳನ್ನು ಬರೀ ಓದಿಗೆ ಸೀಮಿತ ಮಾಡುವುದು ತಪ್ಪು. ಪ್ರಾಥಮಿಕ ಶಾಲಾ ಶಿಕ್ಷಣದಿಂದಲೇ ಶಿಕ್ಷಣಕ್ಕೆ ನೀಡುವಷ್ಟೇ ಒತ್ತು ಮತ್ತು ಪ್ರೋತ್ಸಾಹವನ್ನು ಕ್ರೀಡೆಗಳಲ್ಲಿ ಭಾಗಿಯಾಗುವುದಕ್ಕೂ ನೀಡಿದಾಗ ಮಾತ್ರವೇ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ನಿಮ್ಮ ಮಕ್ಕಳು ತೆಂಡೂಲ್ಕರ್, ಸಾನಿಯಾ ಮಿರ್ಜಾ, ಪಿ.ವಿ.ಸಿಂಧು,ವಿನೀಷ್ ಪೊಗಟ್,ಅಭಿನವ್ ಬಿಂದ್ರಾ,ವಿರಾಟ್‌ಕೋಹ್ಲಿ ರೀತಿ ಸಾಧಕರ ಸಾಲಿನಲ್ಲಿ ನಿಂತು ದೇಶಕ್ಕೆ ಕೀರ್ತಿ ತರಲು ಸಾಧ್ಯ ಎಂದರು.

ನಾಗಾರ್ಜುನ ಕಾಲೇಜಿನ ಪ್ರಾಂಶುಪಾಲ ದುಪಾಟಿ ಮುರಳೀಧರ್ ಚೌದರಿ ಮಾತನಾಡಿ ನಮ್ಮ ಕಾಲೇಜಿನ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಗೆ ಒಳಪಟ್ಟಂತೆ ಜಿಲ್ಲಾ ಮಟ್ಟದ ೨೦೨೪ನೇ ಸಾಲಿನ ಕ್ರೀಡಾಕೂಟ ಆಯೋಜನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರಿವುದು ತುಂಬಾ ಸಂತೋಷದ ಸಂಗತಿಯಾಗಿದೆ.ಈ ಕ್ರೀಡಾಕೂಟ ಎರಡು ದಿನಗಳ ಕಾಲ ನಡೆಯಲಿದ್ದು ಇದರಲ್ಲಿ ಭಾಗವಹಿಸಿರುವ ಎಲ್ಲಾ ಕಾಲೇಜಿನ ಪ್ರಾಂಶುಪಾಲರು,ದೈಹಿಕ ಶಿಕ್ಷಣ ನಿರ್ದೇಶಕರು, ಕ್ರೀಡಾಪಟುಗಳಿಗೆ ಬೇಕಾದ ಮೂಲಭೂತ ಸೌಲಭ್ಯವನ್ನು ಒದಗಿಸಲು ನಾಗಾರ್ಜುನ ಕಾಲೇಜು ಆಡಳಿತ ಮಂಡಳಿ ಸದಾ ಸಿದ್ಧವಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.

ಜಿಲ್ಲಾ ಮಟ್ಟದ ಪದವಿಪೂರ್ವ ಹಂತದ ೨೦೨೪ರ ಕ್ರೀಡಾಕೂಟದಲ್ಲಿ ಬಾಗೇಪಲ್ಲಿ,ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಗುಡಿಬಂಡೆ ತಾಲೂಕುಗಳಿಂದ ಸುಮಾರು ೮೦೦ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ವಿವಿಧ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಲು ಭಾಗಿಯಾಗಿದ್ದಾರೆ.ಪದವಿ ಪೂರ್ವ ಹಂತದಲ್ಲಿ ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರು, ಶಿಕ್ಷಕರು ಎಲ್ಲರೂ ಕೂಡ ಓದಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗುವುದನ್ನು ಇಷ್ಟಪಡುವುದಿಲ್ಲ. ಇದೊಂದು ತಪ್ಪು ಕಲ್ಪನೆಯಾಗಿದೆ.ದೈಹಿಕವಾಗಿ ಸದೃಡವಾಗಿದ್ದರೆ ಮಾತ್ರ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ. ಮಾನಸಿಕ ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಶೈಕ್ಷಣಿಕ ಸಾಧನೆ ಉತ್ತಮವಾಗಿರಲಿದೆ. ಇದನ್ನು ಮನಗಂಡಿರುವ ನಾಗಾರ್ಜುನ ಕಾಲೇಜು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಇಲಾಖೆಯ ಮಾರ್ಗದರ್ಶದಲ್ಲಿ ನಡೆಸುತ್ತಿದೆ.ಇದು ನಮ್ಮ ಸಂಸ್ಥೆಗೆ ಒದಗಿ ಬಂದಿರುವ ಸುವರ್ಣ ಅವಕಾಶವಾಗಿದೆ ಎಂದರು.

ಕ್ರೀಡಾಕೂಟವನ್ನು ಬಲೂನು ಹಾರಿಸುವ ಮೂಲಕ ಉಪನಿರ್ದೆಶಕರು ಉದ್ಘಾಟಿಸಿದರೆ,ನಾಗಾರ್ಜುನ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ತಂದು ವೇದಿಕೆಯಲ್ಲಿ ಪ್ರದರ್ಶಿಸಿ ಕ್ರೀಡಾಕೂಟಕ್ಕೆ ಶಕ್ತಿಯನ್ನು ತುಂಬಿದರು.

ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸತ್ಯೇಂದ್ರ,ನಾಗಾರ್ಜುನ ಕಾಲೇಜು ಪ್ರಾಂಶುಪಾಲ ದುಪಾಟಿ ಮುರಳೀಧರ್ ಚೌದರಿ, ಮಂಚೇನಹಳ್ಳಿ ಪ್ರಾಂಶುಪಾಲ ಮುನಿರಾಜು, ಎಂ.ಜಿ.ಶ್ರೀನಿವಾಸ್,ನಾಗಾರ್ಜುನ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಭಟ್,ದೈಹಿಕ ಶಿಕ್ಷಕರ ಸಂಘದ ರಾಜ್ಯ ಖಜಾಂಚಿ ಬಾಲರಾಜು,ಅಕ್ಷರ ಪಿಯು ಕಾಲೇಜು ಪ್ರಾಂಶುಪಾಲ ಪ್ರಕಾಶ್, ಪ್ರಕೃತಿ ಪಿಯು ಕಾಲೇಜು ಪ್ರಾಂಶುಪಾಲ ಮುನಿಕೃಷ್ಣ,ವರದಾದ್ರಿ ಪ್ರಾಂಶುಪಾಲ ಸುರೇಶ್, ಎಕ್ಸ್ಪರ್ಟ್ ಕಾಲೇಜು ಪ್ರಾಂಶುಪಾಲ ಶಿವಪ್ಪ, ಗಿಡ್ನಹಳ್ಳಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಾರುತಿ ಮತ್ತಿತರರು ಇದ್ದರು.