Saturday, 26th October 2024

ಮುಂಜಾನೆಯೇ ಬಸ್ ಅವ್ಯಸ್ಥೆ ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿಗಳು

ಸಮರ್ಪಕ ಸಾರಿಗೆ ವ್ಯವಸ್ಥೆಗೆ ಆಗ್ರಹಿಸಿ ೨ ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ

ಚಿಕ್ಕಬಳ್ಳಾಪುರ : ಗುರುವಾರ ಮುಂಚಾನೆ ನಗರದ ಬಸ್ ನಿಲ್ದಾಣದ ತುಂಬೆಲ್ಲಾ ವಿದ್ಯಾರ್ಥಿಗಳ ದಂಡು.ಕೆಎಸ್‌ಆರ್‌ಟಿಸಿ ಬಸ್‌ಗಳ ಅಸಮರ್ಪಕ ಸಂಚಾರ,ಕಂಡಕ್ಟರ್‌ಗಳ ಧೋರಣೆ ಖಂಡಿಸಿ ನೂರಾರು ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ಘೋಷಣೆ ಕೂಗಿದರು.ವಿದ್ಯಾರ್ಥಿಳ ಪ್ರತಿಭಟನೆಗೆ ಬೆಚ್ಚಿದ ಸಿಬ್ಬಂದಿ ಕೆಲಕಾಲ ಸಂಚಾರ ನಿಲ್ಲಿಸಬೇಕಾಯಿತು.

ಹೌದು ಇದು ನಡೆದದ್ದು ಬೇರೆಲ್ಲೂ ಅಲ್ಲ ಪ್ರಭಾವಿ ಸಚಿವ ಡಾ.ಕೆ.ಸುಧಾಕರ್ ತವರು ಕ್ಷೇತ್ರ ಚಿಕ್ಕಬಳ್ಳಾಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಎಂಬುದು ಪ್ರಮುಖ ಸಂಗತಿ.

ಶಿಕ್ಷಣ ಕ್ಷೇತ್ರವಾಗಿರುವ ಚಿಕ್ಕಬಳ್ಳಾಪುರಕ್ಕೆ ಜ್ಞಾನಾರ್ಜನೆಗಾಗಿ ಜಿಲ್ಲೆ, ಹೊರಜಿಲ್ಲೆಗಳಿಂದ ನೂರಾರು ವಿದ್ಯಾರ್ಥಿಗಳು ನಿತ್ಯವೂ ಸರಕಾರಿ ಸಾರಿಗೆ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಕೆಎಸ್‌ಆರ್‌ಟಿಸಿ ಇವರಿಂದ ಸಾವಿರಾರು ರೂಪಾಯಿ ಹಣ ಪಡೆದು ಬಸ್‌ಪಾಸ್ ವಿತರಿಸಿದೆ.

ಇದಕ್ಕೆ ತಕ್ಕಂತೆ ಬಸ್‌ಗಳನ್ನು ಸಂಬಂಧಪಟ್ಟ ಮಾರ್ಗಗಳಲ್ಲಿ ಸಂಚರಿಸುವಂತೆ ನೋಡಿಕೊಂಡಿಲ್ಲ. ಬೆಳಗ್ಗೆ ಮತ್ತು ಸಂಜೆ ಸಕಾಲಕ್ಕೆ ಸಮರ್ಪಕವಾಗಿ ಬಸ್ ಸಂಚಾರ ಇಲ್ಲವೆಂದರೆ ವಿದ್ಯಾರ್ಥಿಗಳು ಏನು ಮಾಡಬೇಕು? ಖಾಸಗಿ ಬಸ್‌ಗಳಲ್ಲಿ ಕಾಸುಕೊಟ್ಟು ನಿತ್ಯವೂ ಸಂಚರಿಸುವುದು ಖಾಯಂ ಆಗಿದೆ ? ಇದಕ್ಕೆ ಯಾರನ್ನೂ ದೂರಬೇಕು ? ನಾಗಾರ್ಜುನ ಕಾಲೇಜಿನಿಂದ ಚಿಕ್ಕಬಳ್ಳಾಪುರಕ್ಕೆ ೧೭ ರೂಪಾಯಿ ಇದ್ದರೆ ೨೮ರೂಪಾಯಿ ಟಿಕೆಟ್ ಪಡೆಯುವುದು ಏತಕ್ಕಾಗಿ?ಎಲ್ಲಾ ಬಸ್‌ಗಳೂ ಮೇಲ್ಸೇತುವೆ ಮೇಲೆ ಸಂಚರಿಸುವುದಾದರೆ ಪಾಸ್ ಯಾಕೆ ನೀಡಬೇಕಿತ್ತು? ಹೀಗೆ ಪ್ರಶ್ನೆಗಳ ಸರಮಾಲೆಯನ್ನೇ ವಿದ್ಯಾರ್ಥಿಗಳು ಮಾಧ್ಯಮ ಮತ್ತು ಪೊಲೀಸ್ ಅಕಾರಿಗಳ ಮುಂದಿಟ್ಟರು.

ವಿದ್ಯಾರ್ಥಿಗಳ ಸಮಸ್ಯೆ ಅರಿಯದ ಕೆಲವು ಬಸ್ ಕಂಡಕ್ಟರ್, ಡ್ರೈವರ‍್ಗಳು ವಿದ್ಯಾರ್ಥಿಗಳ ಜತೆ ಮಾತಿನ ಚಕಮಕಿ ನಡೆಸಿದಾದ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿತ್ತು.ಈವೇಳೆಗೆ ಆಗಮಿಸಿದ ಪೊಲೀಸರು, ಟ್ರಾಫಿಕ್ ಕಂಟ್ರೋಲರ್‌ಗಳ ಜತೆ ಮಾತನಾಡಿ ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು.ದಯವಿಟ್ಟು ಪ್ರತಿಭಟನೆ ಕೈಬಿಡಿ ಎಂದು ಮನವೊಲಿಸಿದ ಕಾರಣ ಅನಿವಾರ್ಯವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

ಇಷ್ಟಾದರೂ ಕೂಡ ವಿಭಾಗೀಯ ಸಂಚಾರ ನಿಯಂತ್ರಕರಾಗಲಿ, ಇವರ ಕೆಳಗಿನ ಹಂತದ ಅಕಾರಿಗಳಾಗಲಿ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಸಮಸ್ಯೆ ಆಲಿಸದಿದ್ದುದು ಮಾತ್ರ ಕೆ.ಎಸ್‌ಆರ್‌ಟಿಸಿ ವಿಭಾಗದ ಕಾರ್ಯತತ್ಪರತೆಯನ್ನು ಎತ್ತಿ ತೋರುತ್ತಿತ್ತು.
ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆಯಿಂದಾಗಿ ದೂರದೂರುಗಳಿಗೆ ಹೋಗಬೇಕಾಗಿದ್ದ ಸಾರ್ವಜನಿಕರು ಪರದಾಡುವಂತಾಗಿ ಇಲಾಖೆಯ ನಡೆಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯಗಳು ಸಾಮಾನ್ಯವೆಂಬತಿದ್ದವು.