Thursday, 12th December 2024

ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ, ನಾನು ತಲೆ ತಗ್ಗಿಸುವಂತೆ ಮಾಡಬೇಡಿ: ಬಿ.ವೈ.ವಿಜಯೇಂದ್ರ

ಮೈಸೂರು: ‘ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು. ನಾನು ತಲೆ ತಗ್ಗಿಸುವಂತೆ ಮಾಡಬೇಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೋರಿದರು.

ಭಾನುವಾರ ಆಯೋಜಿಸಿದ್ದ ವೀರಶೈವ-ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಸಮಾಜದವರು ತಲೆ ತಗ್ಗಿಸುವಂತೆ ನಾನು ನಡೆದುಕೊಳ್ಳುವುದಿಲ್ಲ. ವಿಜಯೇಂದ್ರಗೆ ಬೆಂಬಲ ಕೊಟ್ಟಿದ್ದು ಸಾರ್ಥಕವಾಯಿತು ಎಂದು ಎಲ್ಲರೂ ಹೆಮ್ಮೆಯಿಂದ ಮಾತನಾಡುವಂತೆ ರಾಜಕಾರಣ ಮಾಡುತ್ತೇನೆ. ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದಾದ್ಯಂತ ಸಮಾಜಕ್ಕೆ ಶಕ್ತಿ ತುಂಬುತ್ತೇನೆ’ ಎಂದು ಭರವಸೆ ನೀಡಿದರು.

ಹುಬ್ಬಳ್ಳಿಯಲ್ಲಿ ನಡೆದಂತಹ ಘಟನೆ ಕಂಡಾಗ ನಮ್ಮೆಲ್ಲರಿಗೂ ದುಃಖವಾಗಬೇಕು, ಸಿಟ್ಟು ಬರಬೇಕು. ಬೆಂಕಿ ಬಿದ್ದಿರುವುದು ಪಕ್ಕದ ಮನೆಗಲ್ಲವೇ ಎಂದು ಸುಮ್ಮನಿದ್ದರೆ, ಸಮಯ ಮೀರಿದರೆ ಬೆಂಕಿ‌ಯನ್ನು ನಂದಿಸಲಾಗದು. ಹೀಗಾಗಿ ಎಚ್ಚೆತ್ತುಕೊಂಡು ಜಾಗೃತರಾಗಬೇಕು’ ಎಂದು ತಿಳಿಸಿದರು.

‘ನೇಹಾ ಕೊಲೆ ಪ್ರಕರಣದಲ್ಲಿ ಹಗುರವಾಗಿ ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿಯ ಮಾನಸಿಕ ಸ್ಥಿತಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾವ ಸಮಾಜದ ಬಗ್ಗೆಯೂ ಅವರಿಗೆ ಗೌರವ ಇಲ್ಲ. ಗ್ಯಾರಂಟಿಯೇ ಅಭಿವೃದ್ಧಿಯೇ? ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ’ ಎಂದು ವಾಗ್ದಾಳಿ ನಡೆಸಿದರು.

ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಜಾಸ್ತಿ ಕಿತ್ತುಕೊಳ್ಳುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಸ್ವತಃ ಮುಖ್ಯಮಂತ್ರಿಯೇ ಮೈಸೂರಿಗೆ ಆಗಾಗ ಬಂದು ಠಿಕಾಣಿ ಹೂಡುತ್ತಿದ್ದರೂ ಬಿಜೆಪಿ ಅಭ್ಯರ್ಥಿ ಯದುವೀರ್‌ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದನ್ನು ತಡೆಯಲು ಆಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.