Saturday, 14th December 2024

ಬಿಜೆಪಿ ರಾಜ್ಯಾಧ್ಯಕ್ಷನಾಗಿ 15ರಂದು ಬಿ.ವೈ ವಿಜಯೇಂದ್ರ ಅಧಿಕಾರ ಸ್ವೀಕಾರ

B Y Vijayendra

ತುಮಕೂರು: ನ.15 ನೇ ತಾರೀಖಿನಂದು ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬೆಳಿಗ್ಗೆ ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ಸ್ವೀಕಾರ ಮಾಡುತ್ತಿದ್ದೇನೆ ಎಂದು ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಬಿಜೆಪಿ ವರಿಷ್ಠರಾದ ಜೆ.ಪಿ ನಡ್ಡಾ, ಅಮಿತ್ ಶಾ, ಸಂತೋಷ್ ಸೇರಿದಂತೆ ಎಲ್ಲರೂ ಚರ್ಚೆ ಮಾಡಿ ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿ ದ್ದಾರೆ.‌ ಅಧಿಕಾರ ವಹಿಸಿಕೊಳ್ಳುವ ಮುನ್ನ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೆಯಲು ಬಂದಿದ್ದೇನೆ. ತಂದೆ ಯಡಿಯೂರಪ್ಪನವರು ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ಶಿವಕುಮಾರ ಸ್ಚಾಮೀಜಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು ಎಂದರು.

ನಳಿನ್ ಕುಮಾರ್ ಕಟೀಲ್ ಅವರು ಯಶಸ್ವಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟಿದರು. ನಮ್ಮ ಪಕ್ಷದ ಹಿರಿಯ ಮುಖಂಡರಾದ ಬಿ ಎಸ್​ ಯಡಿಯೂರಪ್ಪ, ಬಸವರಾಜ​ ಬೊಮ್ಮಾಯಿ, ಈಶ್ವರಪ್ಪ, ಸದಾನಂದ ಗೌಡ, ಕಾರಜೋಳ, ಯತ್ನಾಳ್​, ಸೋಮಣ್ಣ ಸೇರಿದಂತೆ ಎಲ್ಲಾ ಹಿರಿಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ ಮಾಡುತ್ತಿದ್ದೇನೆ. ರಾಷ್ಟ್ರೀಯ ನಾಯಕರಿಗೆ ಚುನಾವಣೆ ಇರುವುದರಿಂದ ಬರುತ್ತಿಲ್ಲ. ‌ಕೇಂದ್ರದ ವೀಕ್ಷಕರು ಬರಲಿದ್ದಾರೆ. ಶುಕ್ರವಾರದೊಳಗೆ ಬಿಜೆಪಿ ಪಕ್ಷದ ಶಾಸಕಾಂಗ ಸಭೆ ಕರೆಯಲಿದ್ದೇವೆ ಎಂದು ತಿಳಿಸಿದರು.

ಯಡಿಯೂರಪ್ಪ ಸೈಡ್ ಲೈನ್ ವಿಚಾರವಾಗಿ ಮಾತನಾಡಿ, ಯಾರನ್ನು ಸೈಡ್ ಲೈನ್ ಮಾಡಿಲ್ಲ, ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿರಬಹುದು. ಎಲ್ಲವನ್ನು ಬದಿಗಿಟ್ಟು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.