Friday, 25th October 2024

ಗೊಲ್ಲರಹಳ್ಳಿ ಗ್ರಾಮದಲ್ಲಿ ಪಶು ಆರೋಗ್ಯ ಶಿಬಿರ

ಚಿಕ್ಕನಾಯಕನಹಳ್ಳಿ : ಕಸಬಾ ಹೋಬಳಿಯ ಗೊಲ್ಲರಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಕೀಯ ಸೇವಾ ಇಲಾಖೆ ಚಿಕ್ಕನಾಯಕನಹಳ್ಳಿ, ಇವರ ಸಂಯುಕ್ತ ಆಶ್ರಯದಲ್ಲಿ ಬರಡು ರಾಸು ಹಾಗು ಪಶುಆರೋಗ್ಯ ಶಿಬಿರ ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರೆ.ಮ. ನಾಗಭೂಷಣರವರು ಭಾಗವಹಿಸಿ ಸಮಗ್ರ ಹೈನು ಗಾರಿಕೆ ನಿರ್ವಹಣೆ ಕುರಿತು ಮಾತನಾಡಿದರು. ಶುದ್ಧ ಹಾಲಿನ ಉತ್ಪಾದನೆ, ದನದ ಕೊಟ್ಟಿಗೆ ನಿರ್ಮಾಣ ಮತ್ತು ನಿರ್ವಹಣೆ, ಕರುಗಳ ಪಾಲನೆ, ಸಾಂಕ್ರಾ ಮಿಕ ರೋಗಗಳ ನಿರ್ವಹಣೆ, ಲಾಭದಾಯಕ ಪಶುಪಾಲನೆಯಲ್ಲಿ ಹಸಿರು ಮೇವಿನ ಪಾತ್ರ, ಹೈನುರಾಸುಗಳಲ್ಲಿ ಕೆಚ್ಚಲು ಬಾವು ನಿರ್ವಹಣೆ ವಿಚಾರಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ವರ್ಷಕ್ಕೊಂದು ಕರು ಎಂಬ ಧ್ಯೇಯವನ್ನು ರೈತರು ಮನಸ್ಸಿನಲ್ಲಿ ಇಟ್ಟುಕೊಂಡು ಸರಿಯಾದ ನಿರ್ವಹಣೆ ಮಾಡಿದಾಗ ಮಾತ್ರ ಹೈನುಗಾರಿಕೆಯಲ್ಲಿ ಲಾಭವನ್ನು ನೋಡಬಹುದು. ಜಂತು ನಿವಾರಣ ಔಷಧಿಯನ್ನು ಸಕಾಲದಲ್ಲಿ ಕುಡಿಸುವುದು, ಸಕಾಲದಲ್ಲಿ ಲಸಿಕೆ ಹಾಕಿಸುವುದು ಮುಂತಾದ ಕ್ರಮಗಳನ್ನು ವೈಜ್ಞಾನಿಕವಾಗಿ ಅನುಸರಿಸುವುದರಿಂದ ಇಂದಿನ ಕರುವನ್ನು ನಾಳಿನ ಕಾಮಧೇನುವನ್ನಾಗಿ ಮಾಡ ಬಹುದು ಎಂದು ತಿಳಿಸಿದರು.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಕಾಲ ಕಾಲಕ್ಕೆ ಇಲಾಖೆಯು ನಿರ್ದಿಷ್ಟ ಪಡಿಸಿರುವ ಲಸಿಕೆಗಳನ್ನು ಹಾಕಿಸಿಕೊಂಡು ರೋಗಗಳನ್ನು ನಿಯಂತ್ರಣ ಮಾಡಬಹುದೆಂದು ತಿಳಿಸಿದರು. ಜಾನುವಾರು ವಿಮೆಯನ್ನು ಮಾಡಿಸಿ ಆಕಸ್ಮಿಕ ಮರಣಕ್ಕೀಡಾದಾಗ ಆರ್ಥಿಕ ನಷ್ಟ ಉಂಟಾಗುವುದನ್ನು ತಪ್ಪಿಸುವ ಮೂಲಕ ಈ ದೇಶದ ಪಶು ಸಂಪತ್ತನ್ನು ರಕ್ಷಿಸಬಹುದು ಎಂದು ತಿಳಿಸಿದರು.

ಸ್ಥಳೀಯವಾಗಿ ದೊರೆಯುವ ಜೋಳ, ಗೋವಿನ ಜೋಳ, ಸಜ್ಜೆ, ನವಣೆ, ಸಾವೆ, ರಾಗಿ, ಗೋಧಿ, ಗೋಧಿ ತೌಡು, ಅಕ್ಕಿ ತೌಡು, ಕಡಲೆ ಹೊಟ್ಟು, ಅವರೆ ಹೊಟ್ಟು, ತೊಗರಿ ಹೊಟ್ಟು, ಶೆಂಗಾ ಹಿಂಡಿ, ಸೂರ್ಯಕಾಂತಿ ಹಿಂಡಿ, ಹತ್ತಿಕಾಳು ಹಿಂಡಿ, ಸೋಯಾಬಿನ್ ಹಿಂಡಿ, ತೆಂಗಿನ ಹಿಂಡಿ, ಖನಿಜ/ಲವಣ ಮಿಶ್ರಣ, ಉಪ್ಪು ಇತ್ಯಾದಿಗಳನ್ನು ಉಪಯೋಗಿಸಿಕೊಂಡು ಕಡಿಮೆ ಖರ್ಚಿನಲ್ಲಿ ಪಶು ಆಹಾರವನ್ನು ತಯಾರಿಸಿಕೊಂಡು ಹೈನುಗಾರಿಕೆಯನ್ನು ಲಾಭ ದಾಯಕವಾಗಿ ಮಾಡಬಹುದು ಎಂದು ತಿಳಿಸಿದರು. ಮೇವಿನ ಸಮರ್ಪಕ ಬಳಕೆಯಲ್ಲಿ ಒಣಮೇವು ಪೌಷ್ಠಿಕರಣ (ಯೂರಿಯಾ ಉಪಚಾರ) , ಮೇವನ್ನು ಕತ್ತರಿಸಿ ಉಪಯೋಗಿಸುವುದು ಮತ್ತು ರಸಮೇವನ್ನು ತಯಾರಿಸಿ ಉಪಯೋಗಿಸುವುದು ಮುಂತಾದ ಕ್ರಮಗಳಿಂದ ಲಾಭದಾಯಕ ಹೈನುಗಾರಿಕೆಯನ್ನು ಮಾಡಬಹುದು ಎಂದು ತಿಳಿಸುತ್ತಾ ದುಡಿಮೆಯ ನಂಬಿ ಬದುಕಿ ಅದರಲ್ಲಿ ಬೆಳಕನ್ನು ಕಾಣಬೇಕು ಎಂದು ತಿಳಿಸಿದರು.

ಶಿಬಿರದಲ್ಲಿ ಶ್ರೀ ಚಂದ್ರಶೇಖರ್ ಹೆಚ್.ಎಸ್, ಕಿರಿಯ ಪಶುವೈದ್ಯಕೀಯ ಪರೀಕ್ಷಕರು ಪ್ರಾ.ಪ.ಚಿ ಬರಗೂರುರವರನೇತೃತ್ವದಲ್ಲಿ ಗ್ರಾಮದ ೩೩ದನ ಹಾಗು ೧೬೩ ಕುರಿ/ಮೇಕೆಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಲಾಯಿತು. ೦೭ ಕರುಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಿ ಐವರ್‌ಮೆಕ್ಟಿನ್ ಇಂಜೆಕ್ಷನ್ ನೀಡಲಾಯಿತು ಹಾಗು ಖನಿಜ, ಲವಣ ಮಿಶ್ರಿತ ಟಾನಿಕ್‌ಅನ್ನು ನೀಡಲಾಯಿತು. ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರೆ.ಮ.ನಾಗಭೂಷಣ ರವರು ೦೫ ಬರಡು ರಾಸುಗಳಿಗೆ ಚಿಕಿತ್ಸೆ ಮತ್ತು ೦೪ ಜಾನುವಾರುಗಳ ಗರ್ಭಪರಿಕ್ಷೆಯನ್ನುನಡೆಸಿದರು. ಕಾರ್ಯಕ್ರಮದಲ್ಲಿ ಸಿಬ್ಬಂಧಿಗಳಾದ ಅತಾವುಲ್ಲಾ, ದಯಾನಂದ, ಕುಮಾರಸ್ವಾಮಿ, ಅಭಿಷೇಕ ಉಪಸ್ಥಿತರಿದ್ದರು.