Tuesday, 15th October 2024

ಕೆನರಾ ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ದೂರು

ಚಿಕ್ಕಬಳ್ಳಾಪುರ: ನಿಯಮ ಬಾಹಿರವಾಗಿ ಹಣ ವರ್ಗಾವಣೆ ಆರೋಪದ ಮೇಲೆ ತಾಲ್ಲೂಕಿನ ನಾಯನಹಳ್ಳಿಯ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಬಿ.ವಿ. ಅಂಜನಿಬಾಯಿ ವಿರುದ್ಧ ಕೆನರಾ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಎಚ್.ವೈ. ಸಂಜಯ್ ಕುಮಾರ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

೨೦೧೪ರ ನ.೨೬ರಿಂದ ೨೦೧೭ರ ಜು.೧೯ರವರೆಗೆ ಅಂಜನಿಬಾಯಿ ಕೆಲಸ ನಿರ್ವಹಿಸಿದ್ದಾರೆ. ನಂತರ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಅವರು ನಾಯಕನಹಳ್ಳಿಯಲ್ಲಿ ವ್ಯವಸ್ಥಾಪಕಿಯಾಗಿದ್ದ ಅವಧಿಯಲ್ಲಿ ಚೆಕ್‌ಗಳ ಕಲೆಕ್ಷನ್‌ಗಾಗಿ ಇಟ್ಟಿರುವ ಖಾತೆಯಿಂದ ೧೯.೫೮ ಲಕ್ಷ  ಹಣವನ್ನು ೧೪ ಜನ ಫಲಾನುಭವಿಗಳಿಗೆ ನೀಡಿಲ್ಲ. ಅಲ್ಲದೆ ನಾಯನಹಳ್ಳಿ ಶಾಖೆಯಿಂದ ಉಗನವಾಡಿ ಕ್ರಾಸ್ ಶಾಖೆಗೆ ಈ ಸಬ್ಸಿಡಿ ಹಣವನ್ನು ಹಾಗೂ ಗ್ರಾಹಕರ ಅನುಮೋದನೆ ಇಲ್ಲದೆ ಇತರೆ ಗ್ರಾಹಕರ ಖಾತೆಯಲ್ಲಿನ ಹಣವನ್ನು ನಿಯಮ ಬಾಹಿರವಾಗಿ ವರ್ಗಾಯಿಸಿದ್ದಾರೆ.

ಹಣ ವರ್ಗಾವಣೆಯು ಬ್ಯಾಂಕಿನ ನಿಯಮಾವಳಿಗೆ ವಿರುದ್ಧವಾಗಿದೆ. ಅವರು ಮಾಡಿರುವ ಈ ಅಕ್ರಮ ವ್ಯವಹಾರದಿಂದ ಬ್ಯಾಂಕಿಗೆ  ೩೯.೩೦ ಲಕ್ಷ ನಷ್ಟವಾಗಿದೆ. ಆದ್ದರಿಂದ ಬಿ.ವಿ. ಅಂಜನಿಬಾಯಿ ಹಾಗೂ  ವ್ಯವಹಾರದಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಿದ್ದಾರೆ.