Thursday, 12th December 2024

ಸ್ವ ಸಂಘಗಳ ಅಭಿವೃದ್ಧಿಗೆ ಕೆನರಾ ಬ್ಯಾಂಕ್ ನಿಂದ ಸಾಲ ಸೌಲಭ್ಯ

ಗುಬ್ಬಿ: ಸ್ವ ಸಹಾಯ ಸಂಘಗಳ ಅಭಿವೃದ್ದಿಯಾಗಲು ಹಾಗೂ ಗ್ರಾಮೀಣ ಪ್ರದೇಶದ ಅಭಿ ವೃದ್ಧಿಯಾಗಲು ಕೆನರಾ ಬ್ಯಾಂಕ್‌ ಸಾಲ ಸೌಲಭ್ಯ ನೀಡುತ್ತಿದೆ ಎಂದು ಸಹಾಯಕ ಮಹಾ ಪ್ರಬಂದಕರಾದ ರವಿ.ಬಿ. ತಿಳಿಸಿದರು.
ಪಟ್ಟಣದ ಎಸ್.ಎಂ.ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಕೆನರಾ ಬ್ಯಾಂಕ್ ಗುಬ್ಬಿ ಶಾಖೆ, ಹಾಗೂ ಸಾಧನಾ ಎಜುಕೇಷನ್ ಅಂಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಸಹ ಯೋಗದೊಂದಿಗೆ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತ ನಾಡಿದರು.
ಕೆನರಾ ಬ್ಯಾಂಕ್ ಸಣ್ಣಕೈಗಾರಿಕೆ ಹಾಗೂ ಇತರೆ ವಿವಿಧ ಕ್ಷೇತ್ರಗಳಿಗೆ ಸಾಲ ನೀಡುತ್ತಿದೆ. ಇದರ ಉಪಯೋಗವನ್ನು ಮಹಿಳಾ ಸ್ವ-ಸಹಾಯ ಸಂಘಗಳು ಪಡೆದುಕೊಂಡು ಆದಾಯವನ್ನು ದ್ವಿಗುಣ ಮಾಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ .ಜಿ.ಕೆ.ಕುಲಕರ್ಣಿ ಮಾತನಾಡಿ, ಮಹಿಳಾ ಸಬಲೀಕರಣ, ಆರ್ಥಿಕ ಸಾಕ್ಷರತೆ ಹಾಗೆಯೇ ಹಣವನ್ನು ಉಳಿತಾಯ ಮಾಡುವ ಮೂಲಕ ಆರ್ಥಿಕವಾಗಿ ಸಫಲರಾಗಲು ತಿಳಿಸಿದರು.
ಸಾಧನಾ ಸಂಸ್ಥೆಯ ಕಾರ್ಯದರ್ಶಿ ವೀರೇಶ್.ವಿ.ಜಿ ಮಾತಾನಾಡಿ, ಸಂಸ್ಥೆಯು ಕಳೆದ ಸುಮಾರು ವರ್ಷಗಳಿಂದ ಮಹಿಳಾ ಸ್ವ-ಸಹಾಯ ಗುಂಪುಗಳ ರಚನೆ ಹಾಗೂ ಸಾಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ನಿರತವಾಗಿದ್ದು, ಎಲ್ಲಾ ಸ್ವ ಸಹಾಯ ಸಂಘಗಳು ಸಾಲವನ್ನು ಸದ್ಬಳಕೆ ಮಾಡಿಕೊಂಡು, ಸಾಲ ಮರುಪಾವತಿ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ನ ಹಿರಿಯ ಪ್ರಬಂಧಕಿ ಶಾಮಾಂಜಿ, ಚೇತನ್‌, ವಿದ್ಯಾವತಿ, ಸಾಧನ ಸಂಸ್ಥೆಯ ಸಿಬ್ಬಂದಿಗಳು ಇದ್ದರು.