ಚಿಕ್ಕಬಳ್ಳಾಪುರ : ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಡುವಿನ ಟಿಕೆಟ್ ಕಗ್ಗಂಟು ದಿನಕ್ಕೊಂದೊ೦ದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಯಾರಿ ನಡೆಸಿದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ಆರ್‌ಎಲ್‌ಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಮ್‌ಪಲ್ಲಿ ಅಮಾನುಲ್ಲಾ ಅವರೇ ಆ ಅಚ್ಚರಿಯ ಅಭ್ಯರ್ಥಿಯಾಗಿದ್ದು ಅವರನ್ನೇ ಕಣಕ್ಕಳಿಸುವ ಸಾಧ್ಯತೆಯಿದೆ ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ನಿವಾಸಿಯಾಗಿರುವ ವೇಮ್‌ಪಲ್ಲಿ ಅಮಾನುಲ್ಲಾ ಖಾನ್ ಅವರ ಆರ್‌ಎಲ್‌ಜೆಪಿ ಪಕ್ಷವು ಎನ್.ಡಿ.ಎ ಬೆಂಬಲಿತ ಪಕ್ಷವಾಗಿದೆ.ಇದೇ ಪಕ್ಷದಿಂದ ಕೇಂದ್ರದಲ್ಲಿ ಸಚಿವರಾಗಿರುವ ಪಶುಪತಿರಾವ್ ಅವರ ಬೆಂಬಲದೊ0ದಿಗೆ ಟಿಕೆಟ್ ಪಡೆಯುವ ಸಾಧ್ಯತೆಯಿದೆ ಎಂದು ಅಮಾನುಲ್ಲಾ ಹೇಳಿಕೊಳ್ಳುತ್ತಿದ್ದಾರೆ ಎಂಬುದು ಅವರ ಅಭಿಮಾನಿ ಬಳಗದವರ ಮಾತಾಗಿದೆ.
ಪ್ರಸ್ತುತ ಯಲಹಂಕ ಶಾಸಕ ವಿಶ್ವನಾಥ್ ಅವರ ಪುತ್ರ ಅಲೋಕ್ ವಿಶ್ವನಾಥ್ ಅವರಿಗೆ ಹೈಮಾಂಡ್ ಮಣೆ ಹಾಕಿದರೆ ಮಾಜಿ ಸಚಿವ ಡಾ.ಕೆ. ಸುಧಾಕರ್ ಮುನಿಸಿಕೊಳ್ಳುವ ಸಾಧ್ಯತೆಯಿದೆ.ಡಾ.ಕೆ. ಸುಧಾಕರ್ ಅವರಿಗೆ ಟಿಕೆಟ್ ನೀಡಿದರೆ ಎಸ್.ಆರ್. ವಿಶ್ವನಾಥ್ ಮುನಿಸಿಕೊಳ್ಳುವ ಸಂಭವ ಹೆಚ್ಚಿದೆ. ಇದರಿಂದ ಪಾರಾಗಬೇಕಾದರೆ ಮೂರನೇ ವ್ಯಕ್ತಿಗೆ ಟಿಕೆಟ್ ನೀಡುವುದು ಪಕ್ಷದ ನಾಯಕರಿಗೆ ಅನಿವಾರ್ಯವಾಗಲಿದೆ.
ಇದೇ ಕಾರಣಕ್ಕಾಗಿಯೇ ಮಂಡ್ಯ ಸಂಸದೆ ಸುಮಲತಾ ಅವರಿಗೆ ಚಿಕ್ಕಬಳ್ಳಾಪುರದ ಟಿಕೆಟ್ ನೀಡುವ ಚೆರ್ಚೆ ಮುನ್ನೆಲೆಗೆ ಬಂದಿತ್ತು. ಇದೇ ಹಾದಿಯಲ್ಲಿ ಸಿ.ಟಿರವಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಹೆಸರು ತೇಲಿ ಬಂದಿತ್ತು.
ಇವೆಲ್ಲದರ ನಡುವೆ ಇತ್ತೀಚಿನ ದಿನಗಳಲ್ಲಿ ಸಮಾಜಸೇವಕ ವೇಮ್‌ಪಲ್ಲಿ ಅಮಾನುಲ್ಲ ಅವರ ಹೆಸರು ಹೈಕಮಾಂಡ್ ಮಟ್ಟದಲ್ಲಿ ಬಲವಾಗಿ ಕೇಳಿಬರುತ್ತಿದ್ದು ಅಚ್ಚರಿಯ ಅಭ್ಯರ್ಥಿಯಾಗಿ ಕ್ಷೇತ್ರಕ್ಕೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.ಇದೇ ನಿಜವಾಗುವುದಾದರೆ ಘಟಾನುಘಟಿ ನಾಯಕರನ್ನು ಹಿಂದೆ ತಳ್ಳಿ ಕ್ಷೇತ್ರಕ್ಕೆ ಹೊಸ ಮುಖವಾದ ಅಮಾನುಲ್ಲಾ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ.ಇದು ಪಕ್ಷದ ಸ್ಥಳೀಯ ರಾಜ್ಯ ಮುಖಂಡರಿಗೆ ಅಷ್ಟೇ ಅಲ್ಲದೆ,ಕಾರ್ಯಕರ್ತರಿಗೂ ಆಚ್ಚರಿಯನ್ನು ತರಬಹುದು.
ಈ ಎಲ್ಲಾ ಅಂತೆಕಂತೆಗಳಿಗೆ ಅಚ್ಚರಿಯ ಸಂಗತಿಗಳಿಗೆ ಬಿಜೆಪಿ ಹೈಮಾಂಡ್ ಶೀಘ್ರವೇ ಬ್ರೇಕ್ ಹಾಕಬೇಕಿದೆ.ಸಮರ್ಥ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಬೇಕಿದೆ.ಇದಾಗಲಿ ಎನ್ನುವುದೇ ಪತ್ರಿಕೆಯ ಕಳಕಳಿಯಾಗಿದೆ.