ಬೆಂಗಳೂರು: ಶ್ರಮಿಕರಿಗೆ ಅಪಮಾನ ಮಾಡಿರುವ ಆರೋಪದ ಮೇಲೆ ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ವಿರುದ್ಧ ತುಮಕೂರು ಚಿಕ್ಕನಾಯಕನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿರ್ಮಾಪಕ, ನಿರ್ದೇಶಕ, ತೀರ್ಪುಗಾರರಾದ ನಟ ರಮೇಶ್ ಅರವಿಂದ್, ನಟಿ ಪ್ರೇಮಾ, ಸ್ಪರ್ಧಿ, ನಿರೂಪಕಿ ಅನುಶ್ರೀ ಹಾಗೂ ಇತರರ ವಿರುದ್ಧ ಚಿಕ್ಕನಾಯಕನಹಳ್ಳಿ ಪಟ್ಟಣದ ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್ ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚಿಗೆ ಆರಂಭವಾದ ಈ ರಿಯಾಲಿಟಿ ಶೋ ತನ್ನ ವಿಶೇಷತೆಗಳಿಂದ ಪ್ರೇಕ್ಷಕರ ಮನಗೆದ್ದಿದ್ದು, ಟಿಆರ್‌ಪಿಯಲ್ಲೂ ಉತ್ತಮ ಸ್ಥಾನ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ವಾರಾಂತ್ಯ ಪ್ರಸಾರವಾದ ಈ ಸಂಚಿಕೆ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿದೆ. ಆದರೆ ಸ್ಪರ್ಧಿಯೊಬ್ಬರು ಬಳಸಿದ ಒಂದು ಪದದಿಂದ ಶ್ರಮಿಕರಿಗೆ ನೋವಾಗಿದೆ.
ದೃಶ್ಯವೊಂದರ ನಟನೆಯಲ್ಲಿ ‘ಮ್ಯಾಕನಿಕ್‌ನನ್ನು ಮದುವೆಯಾದರೆ ಗ್ರೀಸ್ ತಿಂದುಕೊಂಡು ಬದುಕಲಾಗದು…’ ಎಂಬ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಈ ಮಾತಿನಿಂದ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವಾಗಿದೆ. ಮೆಕ್ಯಾನಿಕ್ ಸಮುದಾಯ ಹಗಲಿರುಳು ಬೆವರು ಸುರಿಸಿ ದುಡಿಯು ತ್ತಾರೆ. ಹೀಗಾಗಿ ಶ್ರಮಿಕ ವರ್ಗದ ದುಡಿಮೆಯ ಬಗ್ಗೆ, ವೃತ್ತಿಯ ಬಗ್ಗೆ ಹೀಗೆ ತಿರಸ್ಕಾರದ, ಕುಹಕದ ಮತ್ತು ನಿಂದನಾತ್ಮಕ ಮಾತುಗಳು ಸರಿಯಲ್ಲ.
ಈ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ಫ್ರೆಂಡ್ಸ್ ದ್ವಿಚಕ್ರ ವಾಹನ ವರ್ಕ್ ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ದೂರು ದಾಖಲಿಸಿದ್ದಾರೆ.