Friday, 22nd November 2024

Tumkur News: ಇಂಗ್ಲೀಷ್ ಪ್ರಭಾವದಿಂದ ಹಿಂದಿ ಭಾಷೆಗೆ ಹಿನ್ನಡೆ

ಚಿಕ್ಕನಾಯಕನಹಳ್ಳಿ : ಇಂಗ್ಲೀಷ್ ಪ್ರಭಾವದಿಂದ ಹಿಂದಿ ಭಾಷೆಗೆ ಹಿನ್ನಡೆಯಾಗಿದೆ. ಇಂಗ್ಲೀಷ್ ಭಾಷೆಯನ್ನು ಸಾರಾ ಸಗಟಾಗಿ ತಿರಸ್ಕರಿಸಲಾಗದ ಪರಿಸ್ಥಿತಿಯನ್ನು ನಾವು ತಲುಪಿದ್ದೇವೆ ಹಾಗಾಗಿ ಪರ್ಯಾಯವಾಗಿ ಭಾರತೀಯ ಭಾಷೆ ಗಳನ್ನು ಪೋಷಿಸಬೇಕಾದ ಅನಿವಾರ್ಯ ಎದುರಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶು ಪಾಲ ಮಂಜುನಾಥ್ ಹೇಳಿದರು.

ನಗರದ ತೀನಂಶ್ರೀ ಭವನದಲ್ಲಿ ಶನಿವಾರ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಜಿಲ್ಲಾ ಸಮ್ಮೇಳನ, ಕಾರ್ಯಾಗಾರ, ಹಾಗು ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂಗ್ಲೀಷ್ ಭಾಷೆಯ ಸ್ಥಾನವನ್ನು ಹಿಂದಿಯು ಸಮರ್ಥವಾಗಿ ತುಂಬುತ್ತದೆ. ಹಿಂದಿಯನ್ನು ಅನ್ನದ ಭಾಷೆಯನ್ನಾಗಿ ನಾವು ಸ್ವೀಕರಿಸಬೇಕು. ಬಹುಭಾಷ ಜ್ಞಾನ ಭಾರತೀಯರಲ್ಲಿ ಸಹಜವಾಗಿ ಇರುವಂತಹುದು. ಮಕ್ಕಳಿಗೆ ನಮ್ಮ ಮಾತೃ ಭಾಷೆಯ ಜೊತೆಗೆ ತಾಳ್ಮೆಯಿಂದ ಹಿಂದಿಯ ಭಾಷೆಯ ಜ್ಞಾನದ ಅರಿವು ಮೂಡಿಸಿ ಅವರಿಗೆ ಅಗತ್ಯ ಮಾಹಿತಿ ನೀಡಬೇಕು. ಭಾಷೆ ಉಳಿಸುವಲ್ಲಿ ಇದು ಕೂಡ ಮಹತ್ವದ್ದು ಎಂದರು.

ನಾನೊಬ್ಬ ಹಿಂದಿ ಮನುಷ್ಯ
ಹಿರಿಯ ಸಾಹಿತಿ ಎಂ.ವಿ.ನಾಗರಾಜರಾವ್ ಮಾತನಾಡಿ ಭಾರತದ ಅರ್ಧದಷ್ಟು ಜನರು ಹಿಂದಿ ಭಾಷೆ ಮಾತನಾಡು ತ್ತಾರೆ. ೩೫ ಕೋಟಿಗೂ ಅಧಿಕ ಜನರಿಗೆ ಹಿಂದಿ ಭಾಷೆಯ ಪರಿಚಯವಿದೆ. ಹಿಂದಿ ಭಾಷೆಯ ಬೋಧಕನಾಗಿ ನಾನು ೨೦ ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದು ಅನೇಕ ಕಥೆ ಕಾದಂಬರಿಗಳನ್ನು ಕನ್ನಡದಿಂದ ಹಿಂದಿಗೆ, ಹಿಂದಿಯಿ0ದ ಕನ್ನಡಕ್ಕೆ ಅನುವಾದ ಮಾಡಿದ್ದೇನೆ ನಾನೊಬ್ಬ ಹಿಂದಿ ಮನುಷ್ಯನೆಂದು ಹಮ್ಮೆಯಿಂದ ಹೇಳಿಕೊಂಡರು.

ಕಸಾಪ ಅಧ್ಯಕ್ಷ ರವಿಕುಮಾರ್ ಕಟ್ಟೆಮನೆ ಮಾತನಾಡಿ ಉದ್ಯೋಗ ವರ್ಗದ ಗ್ರಹಿಕೆಯ ಆಧಾರದ ಮೇಲೆ ಭಾಷೆ ಕಲಿಯಲಾಗುತ್ತದೆ. ಅನೇಕರಿಗೆ ಹಿಂದಿಯೇ ಸಂಪರ್ಕ ಭಾಷೆಯಾಗಿದೆ. ಸಂಪರ್ಕ ಸಾಧಿಸಲು ಹಾಗು ನಮ್ಮಗಳ ಬೆಳವಣಿಗೆಗೆ ಭಾಷೆ ಪ್ರಮುಖ ಪಾತ್ರವಹಿಸುತ್ತದೆ. ಹಿಂದಿ ಭಾಷೆ ಕೇವಲ ಆಯ್ಕೆಯಾಗಿರಲಿ. ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಆಚರಣೆ ಮಾಡುವ ನಡೆ ಸರಿಯಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಹಿಂದಿ ಶಿಕ್ಷಕರಿಲ್ಲ
೬ ಮತ್ತು ೭ ನೇ ತರಗತಿ ಇರುವ ತಾಲ್ಲೂಕಿನ ಸರಕಾರಿ ಶಾಲೆಗಳಲ್ಲಿ ಹಿಂದಿ ಶಿಕ್ಷಕರಿಲ್ಲದೆ ಪರದಾಡುವಂತಾಗಿದೆ. ಪ್ರೌಢ ಶಾಲೆಯಿಂದ ಅವರಿಗೆ ಪ್ರಥಮವಾಗಿ ಹಿಂದಿ ಭಾಷೆಯನ್ನು ಕಲಿಸಬೇಕಾದ ದುರದೃಷ್ಟಕರ ಪರಿಸ್ಥಿತಿ ನಿರ್ಮಾಣ ವಾಗಿದೆ. ದೈಹಿಕ ಶಿಕ್ಷಕರು ಮತ್ತು ಹಿಂದಿ ಶಿಕ್ಷಕರ ಕೊರತೆ ತಾಲ್ಲೂಕಿನಲ್ಲಿದೆ ಎಂದರು.

ಗಂಗಾಧರಯ್ಯನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಪ್ರೌಢಶಾಲೆ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಅಭಿನಂದನಾ ಭಾಷಣ ಮಾಡಿದರು. ಪ್ರೌಢಶಾಲೆ ಹಿಂದಿ ಶಿಕ್ಷಕರ ಜಿಲ್ಲಾಧ್ಯಕ್ಷೆ ಲೀಲಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ, ಪುಸ್ತಕ ಬಿಡುಗಡೆ, ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಧರ್ಮಸ್ಥಳ ಯೋಜನಾಧಿಕಾರಿ ಪ್ರೇಮಾನಂದ್, ಮುಖಂಡ ರಾದ ಬ್ರಹ್ಮಾನಂದ್, ರಾಧ, ವಿಜಯರಾಘವೇಂದ್ರ, ಶಿಕ್ಷಕರಾದ ಗುರುರಾಜನಾಯ್ಡು, ಅರುಣ್ ಹಾಗು ಇತರರಿದ್ದರು.