Friday, 22nd November 2024

Chickballappur News: ಭ್ರಷ್ಟ ಕಾಂಗ್ರೆಸ್ ಮುಕ್ತ ಗೊಳಿಸಿ ಬಿಜೆಪಿ ಗೆಲ್ಲಿಸಲು ಸದಸ್ಯತ್ವ ಮಾಡಿಸಿ-ಸಿ.ಮುನಿರಾಜು ಕರೆ

ಬಾಗೇಪಲ್ಲಿ : ಭ್ರಷ್ಟ ಕಾಂಗ್ರೆಸ್ ಪಕ್ಷದಿಂದ ಬಾಗೇಪಲ್ಲಿ ಕ್ಷೇತ್ರವನ್ನು ಮುಕ್ತಗೊಳಿಸಿ ಅಭಿವೃದ್ದಿಯತ್ತ ಕೊಂಡೋಯ್ಯ ಬೇಕಾದರೆ ಬಿಜೆಪಿ ಅಭ್ಯರ್ಥಿ ಇಲ್ಲಿ ಶಾಸಕರಾಗಬೇಕು. ಅದ್ದಕ್ಕಾಗಿ 50 ಸಾವಿರ ಸದಸ್ಯತ್ವ ಗುರಿ ಮುಟ್ಟಬೇಕಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಕಾರ್ಯಕರ್ತರಿಗೆ ಕರೆ ನೀಡಿದರು.

ಬಾಗೇಪಲ್ಲಿ ಪಟ್ಟಣದ ಹೊರವಲಯದ ಟಿ.ಬಿ.ಕ್ರಾಸ್‌ನಲ್ಲಿರುವ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಗೃಹ ಕಚೇರಿ ಆವರಣದಲ್ಲಿ ಅಯೋಜಿಸಿದ್ದ ಬಾಗೇಪಲ್ಲಿ ಮತ್ತು ಗುಡಿಬಂಡೆ ಮಂಡಲ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ, ಹಗರಣಗಳು ತಾಂಡವವಾಡುತ್ತಿದ್ದು, ಬಡವರಿಗೆ ಸಿಗಬೇಕಾಗಿರುವ ಸೌಲಭ್ಯಗಳು, ಅನುಧಾನ ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರ ಜೇಬುಗೆ ಸೇರುತ್ತಿವೆ. ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ 14 ಸೈಟುಗಳನ್ನು ಪಡೆದುಕೊಂಡು ಮುಡಾ ಹಗರಣದಲ್ಲಿ ಬಾಗಿಯಾಗಿ ಭ್ರಷ್ಟಾಚಾರದಲ್ಲಿ  ತೊಡಗಿ ನ್ಯಾಯಾಲಯದ ತನಿಖೆ ಎದುರುಸುತ್ತಿದ್ದಾರೆ, ಬಾಗೇಪಲ್ಲಿರುವ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಬಡವರ ಜಮೀನು ಗಳನ್ನು ಕಸಿದುಕೊಂಡಿರುವ, ಅಕ್ರಮವಾಗಿ ಸರ್ಕಾರ ಜಮೀನು ಪಡೆದಿರುವ ಭೂಹಗರಣಗಳ ಬಗ್ಗೆ ಅತೀ ಶೀಘ್ರದಲ್ಲಿ ತನಿಖೆ ನಡೆಯಲಿದ್ದು ಶಾಸಕರ ಭ್ರಷ್ಟಾಚಾರಗಳು ಬೆಳಕಿಗೆ ಬಂದು ಅಸಲಿ ಮುಖವಾಡ ಕ್ಷೇತ್ರದ ಜನತೆಗೆ ಗೊತ್ತಾಗ ಲಿದೆ. ಅದ್ದರಿಂದ ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ಶಾಸಕರ ಭ್ರಷ್ಟ ಆಡಳಿತಕ್ಕೆ ಅಂತ್ಯ ಕಾಣಿಸಿ ಭ್ರಷ್ಟಾಚಾರ ಮುಕ್ತ ಬಾಗೇಪಲ್ಲಿಗಾಗಿ ಬಿಜೆಪಿ ಕಾರ್ಯಕರ್ತರ ಪಡೆ ಸಿದ್ದವಾಗಬೇಕಾಗಿದೆ.

ಬಾಗೇಪಲ್ಲಿ ಕ್ಷೇತ್ರದ ಅಭ್ಯರ್ಥಿ ಅಯ್ಕೆ ವಿಚಾರದಲ್ಲಿ ಬಿಜೆಪಿ ಪಕ್ಷ ಯಾವುದೇ ರೀತಿಯ ಮೈತ್ರಿ ಒಪ್ಪಂದ ಮಾಡಿ ಕೊಂಡಿಲ್ಲ, ಬಿಜೆಪಿ ಪಕ್ಷ ಯಾವ ಅಭ್ಯರ್ಥಿಯನ್ನು ಅಂತಿಮ ಮಾಡಿಲ್ಲ ಕಾರ್ಯಕರ್ತರು ಯಾವುದೆ ಕಾರಣಕ್ಕೂ ಗೊಂದಲಕ್ಕೆ ಗುರಿಯಾಗದೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೊಂದಣಿ ಮಾಡಿಸಿ ಪಕ್ಷ ಕಟ್ಟುವನ್ನು ಕೆಲಸವನ್ನು ಮತ್ತಷ್ಟು ಚುರುಕಿಗೊಳಿಸಿದರೆ ಗೆಲುವು ನಮ್ಮದೆ. 2023ರ ವಿದಾನಸಭೆಯಲ್ಲಿ 63 ಸಾವಿರ, 2024ರ ಲೋಕಸಭೆಯಲ್ಲಿ 78 ಸಾವಿರ ಮತಗಳನ್ನು ಪಡೆದುಡೊಂಡಿರುವ  ಬಿಜೆಪಿ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 1 ಲಕ್ಷ ಮತಗಳನ್ನು ಪಡೆದುಕೊಂಡು ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.

ಅಧಿಕಾರಿಗಳಿಗೆ ಎಚ್ಚರಿಕೆ: ಬಾಗೇಪಲ್ಲಿ ಮತ್ತು ಗುಡಿಬಂಡೆ, ಚೇಳೂರು ತಾಲೂಕು ವ್ಯಾಪ್ತಿಯಲ್ಲಿರುವ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸರ್ಕಾರಿ ಅಧಿಕಾರಿಗಳು ಈಗಾಗಲೇ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿ ವಿನಾಕಾರಣ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು ಅಧಿಕಾರಿಗಳು ತಮ್ಮ ಸ್ವಾಮಿ ನಿಷ್ಠೆ ಚಾಲಿಯನ್ನು ಬಿಡದಿದ್ದರೆ ಕಚೇರಿಗಳ ಮುಂದೆ ಜಮಾಯಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ದಲಿತ ಮುಖಂಡ ಚಿನ್ನಪೂಜಪ್ಪ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಭಾರತ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಿ ದ್ದಾರೆ ಹೊರತು ಅಂಬೇಡ್ಕರ್ ಪೋಟೊವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ 60 ವರ್ಷಗಳ ಅಡಳಿತದಲ್ಲಿ ಕೊಡುಗೆ ಶೂನ್ಯವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಮೃತಪಟ್ಟ ಸಮಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅವರ ಶವ ಸಂಸ್ಕಾರಕ್ಕೂ ದೆಹಲಿಯಲ್ಲಿ ಅವಕಾಶ ಕಲ್ಪಿಸದೆ ಅವಮಾನ ಮಾಡಿದೆ. ಬಿಜೆಪಿ ಪಕ್ಷದ ಸದಸ್ಯತ್ವ ಪಡೆಯಬೇಡಿ ಎಂಬ ಕಾಂಗ್ರೆಸ್ ಪಕ್ಷದ ಕರೆಗೆ ದಲಿತರು ಯಾರು ಕಿವಿಗೂಡದೆ ಅಂಬೇಡ್ಕರ್‌ಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿರುವ ಬಿಜೆಪಿಯ ಸದಸ್ಯತ್ವವನ್ನು ಎಲ್ಲರೂ ಪಡೆದುಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷರಾದ ಆರ್.ಪ್ರತಾಪ್, ಗುಡಿಬಂಡೆ ಗಂಗಿರೆಡ್ಡಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ವೆಂಕಟೇಶ್, ಮುಖಂಡರಾದ ಎಂ.ಬಿ.ಲಕ್ಷ್ಮೀನರಸಿಂಹಯ್ಯ, ತಟ್ಟಪಲ್ಲಿ ಮದ್ದಿರೆಡ್ಡಿ, ಪಿ.ಎಸ್. ವೆಂಕಟರೆಡ್ಡಿ, ಕೊಂಡಿರೆಡ್ಡಿಪಲ್ಲಿ ಮಂಜುನಾಥ, ವೆಂಕಟೇಶ್, ಪ್ರತಾಪ್‌ರೆಡ್ಡಿ, ರಂಗಾರೆಡ್ಡಿ, ಗಂಗರಾಜು, ವಕೀಲ ಮಂಜುನಾಥ್ ಮತ್ತಿತರರು ಇದ್ದರು.