Friday, 20th September 2024

Chickballapur News: ಶಾಸಕರು ರಾಜಕೀಯ ಮಾಡಬೇಕು, ಆದರೆ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು- ಕೆ.ವಿ.ನವೀನ್‌ಕಿರಣ್

ಚಿಕ್ಕಬಳ್ಳಾಪುರ: ಕೆ.ವಿ.ನವೀನ್‌ಕಿರಣ್ ಮಾತನಾಡಿ ಸಿ.ವಿ.ವೆಂಕಟರಾಯಪ್ಪ ಅವರ ಗರಡಿಯಲ್ಲಿ ಪಳಗಿರುವ ನಾವು ಚಿಕ್ಕಬಳ್ಳಾಪುರ ಕ್ಷೇತ್ರದ ರಾಜಕಾರಣದಲ್ಲಿ ಇತ್ತೀಚೆಗೆ ಬಳಕೆಯಾಗುತ್ತಿರುವ ಭಾಷೆ ನೋಡಿದರೆ ಸಾರ್ವಜನಿಕ ಜೀವನ ದಲ್ಲಿ ಗುರುತಿಸಿಕೊಳ್ಳುವುದಕ್ಕೆ ಬೇಸರವಾಗುತ್ತದೆ. ಯಾರೇ ಆಗಲಿ ಜನಪ್ರತಿನಿಧಿಗಳ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಮುನ್ನ ಈ ಸಮಾಜಕ್ಕೆ ನನ್ನ ಕಾಣಿಕೆ ಏನಿದೆ ಎಂದು ಅರಿತು ಮಾತನಾಡುವುದು ಒಳಿತು. ಕಾಂಗ್ರೆಸ್‌ನ ಕೆಲ ಮುಖಂಡರು ಮಾತನಾಡಿರುವ ರೀತಿಗೆ ನಮ್ಮ ಖಂಡನೆಯಿದೆ. ನಾವೆಲ್ಲಾ ಸೇರಿ ಮುಂದಿನ ದಿನಗಳಲ್ಲಿ ಇದಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಕೆ.ವಿ.ನಾಗರಾಜ್ ಮಾತನಾಡಿ ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ಮುಖಂಡರ ಸುದ್ದಿಗೋಷ್ಟಿಯಲ್ಲಿ ಕೆಲವರು ಆಡಿದ ಮಾತುಗಳಿಗೆ ಖಂಡನೆ ವ್ಯಕ್ತಪಡಿಸಲು ಬಯಸುತ್ತೇನೆ. 4 ದಶಕಗಳಿಗೂ ಮೀರಿ ರಾಜಕೀಯದಲ್ಲಿದ್ದೇನೆ. ಇಷ್ಟು ಹೊಲಸು ಪದಗಳ ಬಳಕೆ ಸುದ್ದಿಗೋಷ್ಟಿಯಲ್ಲಿ ಎಂದು ಬಳಸಿಲ್ಲ. ಆರೋಗ್ಯಕರವಾದ ವಿರೋಧ ವ್ಯಕ್ತಪಡಿಸಿದ್ದೇವೆ ವಿನಃ ವೈಯಕ್ತಿಕ ತೇಜೋವಧಗೆ ಇಳಿದಿಲ್ಲ. ನಮಗೂ ಎಲ್ಲ ಸಮುದಾಯದ ಬೆಂಬಲ ಇದೆ.ಹಕ್ಕುಚ್ಯುತಿ ಆದಾಗ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಅತಿರೇಕದ ಮಾತುಗಳನ್ನು ತಡೆಯಬೇಕಾದ ಕಾಂಗ್ರೆಸ್ ಮುಖಂಡರು ಅದನ್ನು ಮಾಡದೆ ಪ್ರೋತ್ಸಾಹ ನೀಡಿರುವುದು ಸರಿಯಲ್ಲ. ಇನ್ನಾದರೂ ಸರಿಯೇ ತಪ್ಪು ಪದಗಳನ್ನು ಬಳಿಸಿ ಸಂಸದರ ತೇಜೋವಧೆ ಮಾಡಿರುವ ವ್ಯಕ್ತಿಯ ಬಳಿ ಬಹಿರಂಗವಾಗಿ ಕ್ಷಮಾಪಣೆ ಕೇಳಿಸಬೇಕು. ಇಲ್ಲವಾದಲ್ಲಿ ಈ ನೆಲದ ಕಾನೂನಿನಂತೆ ಆತನಿಗೆ ತಕ್ಕ ಶಿಕ್ಷೆ ಕೊಡಿಸಲಾಗುವುದು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಕುಂಟಹಳ್ಳಿ ಮುನಿಯಪ್ಪ ಮಾತನಾಡಿ 8 ಲಕ್ಷ ಮತದಾರರ ಪ್ರತಿನಿಧಿಯನ್ನು ಏಕವಚನ ದಲ್ಲಿ ಸಂಬೋಧಿಸಿ ಮಾತನಾಡುವುದು ಯಾರೇ ಆಗಲಿ ತಪ್ಪು. ಕೊರೋನಾ ಚುನಾವಣೆಯಲ್ಲಿ ಸುಧಾಕರ್ ತಪ್ಪು ಮಾಡಿದ್ದರೆ ಕಾನೂನಿನಲ್ಲಿ ಏನೇನು ಆಗಬೇಕೋ ಅದಾಗುತ್ತದೆ. ಆರೋಪ ಸಾಬೀತಾಗದ ಹೊರತು ಯಾರನ್ನೇ ಆಗಲಿ ಅಪರಾಧಿ ಎಂದು ಹೇಳುವುದು ತಪ್ಪು. ನಮ್ಮ ನಾಯಕ ಡಾ.ಕೆ.ಸುಧಾಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುವ ಯಾರೇ ಆಗಲಿ ಅವರಿಗೆ ತಕ್ಕ ಪರಿಣಾಮ ಎದುರಿಸಲು ಸಿದ್ಧವಾಗಬೇಕು. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಎಲ್ಲರಿಗೂ ಒಂದೇ.ಅದರ ಅಡಿಯಲ್ಲಿಯೇ ಗುಣಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ ಚಿಕ್ಕಬಳ್ಳಾಪುರ ಬೆಂಗಳೂರು ಉಪನಗರವಾಗಿ ಬೆಳೆಯುವಲ್ಲಿ ನಮ್ಮ ನಾಯಕರ ಕೊಡಗೆ ಏನಿದೆ ಎಂಬುದು ಜನತೆಗೆ ಗೊತ್ತಿದೆ.೨೦೨೩ರಲ್ಲಿ ನಾವು ಸೋತಿದ್ದೇವೆ. ಆದರೆ ಗೆದ್ದನಂತರ ಶಾಸಕರು ಆಡಿದ ವಿರೋಧದ ಮಾತುಗಳಿಂದಲೇ ಎಂಪಿ ಚುನಾವಣೆಯಲ್ಲಿ ಮತದಾರರು ಆಶೀರ್ವಾದ ಮಾಡಿರು ವುದು ಗೊತ್ತೇ ಇದೆ. ಟೀಕೆ ಮಾಡಿ ವೈಯಕ್ತಿಕ ಟೀಕೆಗೆ ಇಳಿಯುವುದು ತಪ್ಪು.ನಮಗೂ ಹತ್ತಾರು ಸುದ್ದಿಗೋಷ್ಟಿ ಮಾಡಬಹುದು. ಆದರೆ ಎಲ್ಲಾ ಸಮುದಾಯದವರು ಒಟ್ಟಿಗೆ ಸೇರಿ ಮಾಡುತ್ತಿದ್ದೇವೆ. ಟೀಕೆ ಮಾಡಿರುವ ವ್ಯಕ್ತಿ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮಾಡಿ ತಪ್ಪನ್ನು ಖಂಡಿಸುವ ಕೆಲಸ ಮಾಡುತ್ತೇವೆ ಎಂದರು.

ನಗರಸಭಾ ನಿಯೋಜಿತ ಉಪಾಧ್ಯಕ್ಷ ನಾಗರಾಜ್ ಮಾತನಾಡಿ ನಗರಸಭೆಯಲ್ಲಿ ಅಧಿಕಾರ ಕಳೆದುಕೊಂಡ ಹತಾಶೆ ಯಲ್ಲಿ ಶಾಸಕರು ನಮ್ಮ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. ನಾನು ಯಾವತ್ತು, ಯಾವ ಕೆಲಸಕ್ಕೆ ನಿಮ್ಮ ಬಳಿ ಬಂದಿದ್ದೇನೆ? ಈ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ, ಇಲ್ಲವೇ ನಿಮ್ಮ ಮೇಲೆ ಪ್ರಕರಣ ದಾಖಲಿಸಬೇಕಾಗುತ್ತದೆ. ಈ ವಿಚಾರದಲ್ಲಿ ನಗರಸಭೆ ಆವರಣದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಮತ್ತೊಮ್ಮೆ ಪಂಥಾಹ್ವಾನ ನೀಡಿದರು. ನಾನು ಸುಳ್ಳು ಹೇಳಿದ್ದರೆ ನನ್ನ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ. ನೀವು ಸುಳ್ಳು ಹೇಳಿದ್ದರೆ ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಹೇಳಿದರು.

ನಗರಸಭಾ ನಿಯೋಜಿತ ಅಧ್ಯಕ್ಷ ಗಜೇಂದ್ರ ಮಾತನಾಡಿ ಶಾಸಕ ಪ್ರದೀಪ್ ಈಶ್ವರ್ ನೀವು ನನಗೆ ಮತ ಹಾಕಿಲ್ಲ, ನಗರಸಭಾ ಚುನಾವಣೆಯಲ್ಲಿ ಅಧ್ಯಕ್ಷನನ್ನಾಗಿ ಮಾಡಲು ಗುಲಗಂಜಿಯಷ್ಟು ಪಾತ್ರ ವಹಿಸಿಲ್ಲ, ನಿಮ್ಮ ಮಾತನ್ನು ನಾನ್ಯಾಕೆ ಕೇಳಬೇಕು? ನೆನೆಪಿಟ್ಟುಕೊಳ್ಳಿ ನಮ್ಮ ನಾಯಕರು ಸಂಸದ ಡಾ.ಕೆ.ಸುಧಾಕರ್ ಮಾತ್ರ. ನಾನು ಅವರ ಮಾತನ್ನು ಕೇಳುತ್ತೇನೆ ವಿನಃ ನೆನ್ನೆ ಮೊನ್ನೆ ಬಂದ ನಿಮ್ಮ ಮಾತಲ್ಲ. ಜನತೆಗೆ ತಪ್ಪು ಮಾಹಿತಿ ನೀಡುವುದು ಬಿಡಬೇಕು. ಮೊನ್ನೆಯೇ ಹೇಳಿದ್ದೆ. ನಿಮ್ಮ ಚಾಳಿ ಹೀಗೆಯೇ ಮುಂದುವರೆದರೆ ನಗರದ ನಿವಾಸಿಗಳಿಂದ ದಂಗೆಯೆದ್ದು ಪ್ರತಿಭಟನೆ ಎದುರಿಸಬೇಕಾಗುತ್ತದೆ.ನಿಮ್ಮ ಚೇಲಾಗಳಿಗೆ ಒಂದು ಎಚ್ಚರಿಕೆ ನಮ್ಮ ನಾಯಕರ ಬಗ್ಗೆ  ಮಾತನಾಡುವ ಮುನ್ನ ನಿಮ್ಮ ತಂದೆ ತಾಯಿಗಳಿಗೆ ಊಟ ಹಾಕಿ .ನಗರ ಸಭೆಯಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಮಾಡಿ ರಿಪೋರ್ಟ್ ಕಾರ್ಡ್ ಇಟ್ಟು ಚುನಾವಣೆಯಲ್ಲಿ ಮತ ಕೇಳುತ್ತೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ಜೆಡಿಎಸ್, ಬಿಜೆಪಿ ಮುಖಂಡರು ಇದ್ದರು.

ಇದನ್ನೂ ಓದಿ: Chickballapur News: ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು -ಬಿಇಒ ವೆಂಕಟೇಶಪ್ಪ