Friday, 22nd November 2024

Chickballapur Muncipality Election: ಕುತೂಹಲ ಮೂಡಿಸಿದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ

ಎಂಎಲ್‌ಸಿ ಮತ ಅನೂರ್ಜಿತಗೊಳಿಸಿ ಹೈಕೋರ್ಟ್ ಮಧ್ಯಂತರ ತಡೆ : ಮುಂದೇನು ಎಂಬುದರತ್ತ ಎಲ್ಲರ ಚಿತ್ತ

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ: ಇಂದು ನಡೆಯಲಿರುವ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ನಗರಾಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ಮಾಡು ತ್ತಿರುವ ನಡುವೆ ಎಂಎಲ್‌ಸಿ ಮತ ಅನೂರ್ಜಿತಗೊಳಿಸಿ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಬಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಏನಿದು ತಡೆ?
ನಗರಸಭೆಯ ಮಾಜಿ ಆಧ್ಯಕ್ಷ ಆನಂದಬಾಬುರೆಡ್ಡಿ ನಗರಸಭೆ ಚುನಾವಣೆಯ ಮತದಾರರ ಪಟ್ಟಿಗೆ ಇಲ್ಲಿನ ನಿವಾಸಿ ಗಳಲ್ಲದ ಎಂಎಲ್‌ಸಿಗಳನ್ನು ದುರುದ್ದೇಶದಿಂದ ಬಿಎಲ್‌ಒಗಳ ಮೇಲೆ ಒತ್ತಡ ಹೇರಿ ಕಾಂಗ್ರೆಸ್ ಮುಖಂಡರು ಸೇರಿಸಿ‌ ದ್ದಾರೆ. ಇವರನ್ನು ಅನೂರ್ಜಿತಗೊಳಿಸಿ ನಿಸ್ಪಕ್ಷಪಾತವಾಗಿ ಅರ್ಹರಿಗೆ ಮಾತ್ರ ಮತದಾನ ಮಾಡುವ ಅವಕಾಶ ಮಾಡಿ ಕೊಡಿ ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದರು. ಇವರ ಅರ್ಜಿಯನ್ನು ಮಾನ್ಯ ಮಾಡಿರುವ ಉಚ್ಚ ನ್ಯಾಯಾಲಯ ಮದ್ಯಂತರ ತಡೆ ನೀಡಿದೆ. ಈ ಆದೇಶದಲ್ಲಿ ಎಂಎಲ್‌ಸಿಗಳ ಮತವು ರಿಟ್ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತವೆ ಎಂದು ಹೇಳಿದೆ.

ಇದು ಬಿಜೆಪಿಗೆ ಸಂತೋಷ ತಂದಿದ್ದರೆ ಕಾಂಗ್ರೆಸ್‌ಗೆ ಇರಿಸು ಮುರುಸು ಉಂಟು ಮಾಡಿದೆ. 31 ಸದಸ್ಯ ಬಲದ ನಗರ ಸಭೆಯಲ್ಲಿ ಕಾಂಗ್ರೆಸ್-16 ಬಿಜೆಪಿಯ-9 ಪಕ್ಷೇತರರು-4, ಜೆಡಿಎಸ್-2 ಇದ್ದಾರೆ. ಇವರೊಟ್ಟಿಗೆ ಹೊಸದಾಗಿ ಇಬ್ಬರು ಎಂಎಲ್‌ಸಿಗಳನ್ನು ಸೇರಿಸಿದ್ದು ವಿವಾದ ಹುಟ್ಟು ಹಾಕಿತ್ತು.ಇವರನ್ನೂ ಸೇರಿ ನಗರಸಭೆ ಅಧಿಕೃತ ಮತದಾರರ ಪಟ್ಟಿಯಲ್ಲಿ 35 ಮಂದಿ ಮತದಾನ ಮಾಡಬಹುದು.

ಸದ್ಯದ ಮಟ್ಟಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಣದಲ್ಲಿ 19 ಮಂದಿಯಿದ್ದರೆ, ಕಾಂಗ್ರೆಸ್ ಬಣದಲ್ಲಿ-16 ಮಂದಿ ಯಿದ್ದಾರೆ. ಈಗಿರುವ ಲೆಕ್ಕಾಚಾರ ನೋಡಿದರೆ ಮೈತ್ರಿ ಪಕ್ಷದ ಬೆಂಬಲಿತರೇ ಅಧಿಕಾರಕ್ಕೇರುವುದು ಖಚಿತ ಎನ್ನುವ ವಿಶ್ವಾಸ ದಲ್ಲಿದ್ದರೂ, ಬಿಜೆಪಿ ಬೆಂಬಲಿಸಿರುವ ಕಾಂಗ್ರೆಸ್‌ನ 6 ಮಂದಿಯಲ್ಲಿ ಮೂವರು ಮರಳಿ ಗೂಡಿಗೆ ವಾಪಸಾ ಗುವ ಸೂಚನೆಗಳಿವೆ ಎನ್ನಲಾಗುತ್ತಿದೆ. ಇದೇ ನಿಜವಾದರೆ ಜೆಡಿಎಸ್‌ನ ಇಬ್ಬರು, ಕಾಂಗ್ರೆಸ್‌ನ 3 ಮಂದಿ ಒಟ್ಟು 5 ಸದಸ್ಯರ ಬಲ ಕಾಂಗ್ರೆಸ್‌ಗೆ ಬರಲಿದೆ. ಕೋರ್ಟ್ ಆದೇಶದಲ್ಲಿ ಎಂಎಲ್‌ಸಿಗಳ ಮತಗಳು ಅನೂರ್ಜಿತ ಆದರೂ ಕಾಂಗ್ರೆಸ್ ಅಧಿಕಾರಕ್ಕೇರಲಿದೆ.

ಇದರ ನಡುವೆ ಜೆಡಿಎಸ್ ತನ್ನ ಇಬ್ಬರು ಸದಸ್ಯರಿಗೆ ವಿಫ್ ಜಾರಿ ಮಾಡಿದ್ದು ಉಲ್ಲಂಘಿಸಿದರೆ ಪಕ್ಷದಿಂದ ಉಚ್ಚಾಟಿ ಸುವ ಎಚ್ಚರಿಕೆ ನೀಡಿದೆ. ಕಾಂಗ್ರೆಸ್ ಕೂಡ ತನ್ನಸದಸ್ಯರಿಗೆ ವಿಫ್ ಜಾರಿ ಮಾಡಿದೆ.

ಏನೇ ಆಗಲಿ ಇಂದು ನಡೆಯುವ ಚುನಾವಣೆ ತೀವ್ರ ಕುತೂಹಲಕ್ಕೆ ಕೆರಳಿಸಿರುವಂತೆ ಎರಡೂ ಪಕ್ಷಗಳಿಗೆ ಅಗ್ನಿದಿವ್ಯ ಹೊತ್ತಂತಾಗಿದೆ. ಏನೆಲ್ಲಾ ಅಡೆ ತಡೆಗಳನ್ನು ದಾಟಿ ಬಿಜೆಪಿ ಜೆಡಿಎಸ್ ಮೈತ್ರಿ ಅಧಿಕಾರಕ್ಕೇರಿದರೆ ಅದು ಚಾಣಾಕ್ಷ ಗೆಲುವಾಗಲಿದೆ. ಚಾಣಾಕ್ಷ ಗೆಲುವಿಗೆ ತಡೆಯೊಡ್ಡಿ ತಾನು ಅಧಿಕಾರಕ್ಕೇರಿದ್ದೇ ಆದರೆ ಕಾಂಗ್ರೆಸ್‌ಗೆ ಈ ಗೆಲುವು ಪ್ರಯಾಸದ ಗೆಲುವಾಗಲಿದೆ.