Friday, 20th September 2024

Chickballapur News: ಧರ್ಮಾಚರಣೆಯೇ ಅಂತರಂಗದ ಗೆಲುವು- ಧರ್ಮಾಧಿಕಾರಿ ಎಂ.ಆರ್.ಜಯರಾಮ್

ಚಿಂತಾಮಣಿ: ಮಾನವರಾಗಿ ಹುಟ್ಟಿದ ಮೇಲೆ ಧರ್ಮದ ಆಚರಣೆಯನ್ನು ಸದಾಕಾಲ ಮಾಡಬೇಕು. ಧರ್ಮದ ಆಚರಣೆ ಕಷ್ಟವೆನಿಸಬಹುದು ಆದರೆ ಧರ್ಮಾಚರಣೆಯೇ ಅಂತರಂಗದ ಗೆಲುವು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್(Dr M R Jayaram) ಅಭಿಪ್ರಾಯಪಟ್ಟರು.

ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದ ನಾದಸುಧಾರಸ ವೇದಿಕೆಯಲ್ಲಿ ಹಮ್ಮಿಕೊಳ್ಳ ಲಾಗಿದ್ದ ಆತ್ಮಬೋಧಾಮೃತ ಪ್ರವಚನವನ್ನು ನೀಡುತ್ತಾ ಮಾತನಾಡಿದರು.

ಬಾಹ್ಯದ ಹುಡುಕಾಟ ಸಾಕುಮಾಡಿ ಅಂತರಂಗದ ಶೋಧನೆಯನ್ನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸುವುದೇ ಸದ್ಗುರು ಕೈವಾರದ ತಾತಯ್ಯನವರು ಬೋಧಿಸಿರುವ ಆತ್ಮಬೋಧಾಮೃತ. ಪರಮಾತ್ಮನ ಚರಣಗಳು ಸ್ಥಿರವಾಗಿ ಹೃದಯದಲ್ಲಿ ನಿಲ್ಲುವಹಾಗೆ ಬಂಧಿಸುವುದೇ ಮೋಕ್ಷ ಎಂದಿದ್ದಾರೆ ತಾತಯ್ಯನವರು. ಮೊದಲು ಭಕ್ತನಾಗಿ ಗುರು ಕೃಪೆಯಿಂದ ಪರಮಾತ್ಮನಲ್ಲಿ ಶರಣಾಗಬೇಕು. ನವವಿಧ ಭಕ್ತಿಗಳಲ್ಲಿ ಮನಸ್ಸನ್ನು ಮಾಗಿಸಬೇಕು. ಮಾಗಿದ ಮನಸ್ಸಿ ನಿಂದ ಸ್ಥಿರವಾಗಿ ಏಕಾಗ್ರತೆಯಿಂದ ಪರಮಾತ್ಮನ ಪಾದವನ್ನು ಹೃದಯದಲ್ಲಿ ಕಟ್ಟಿ ಹಾಕಬೇಕು ಎಂದರು.

ಅತ್ಯಂತ ಪ್ರಾಚೀನವಾದ ಆತ್ಮಚಿಂತನೆ ಸಾಮಾನ್ಯವಾದುದಲ್ಲ. ಜ್ಞಾನವನ್ನು ಪಡೆದು ಬುದ್ಧಿಯಿಂದ ಚಿಂತನೆ ಮಾಡುವ ಕಾರಣ ಅನಂತಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಠ ಜೀವಿ. ಈ ಮಾನವನು ಆತ್ಮಚಿಂತನೆಯನ್ನು ನಡೆಸಿ, ಮಾಯೆಯ ಪೊರೆಯನ್ನು ಕಳಚಿದಾಗ ಮಾತ್ರ ಮೋಕ್ಷದ ಹಾದಿಯು ಕಾಣುತ್ತದೆ. ಮಾಯೆಯ ಪ್ರಾಬಲ್ಯಕ್ಕೆ ಸಿಲುಕದೆ ಸಾಗಬೇಕಾದರೆ ಆತ್ಮಬೋಧನೆಯ ಅಗತ್ಯತೆಯಿದೆ. ಇದೊಂದು ಸಾಧನಾ ಪ್ರಕ್ರಿಯೆ. ಮಾನವರು ಅನಿತ್ಯ ವಾದ ಬಯಕೆಗಳ ಸಾಗರದಲ್ಲಿ ಮುಳುಗಿ, ನಿತ್ಯವಾದ ಆತ್ಮನನ್ನು ಮರೆಯುತ್ತಿದ್ದಾರೆ ಎಂದರು.

ಶಿಷ್ಯನಿಗೆ ಅಂತರಂಗದ ಗಗನಜ್ಯೋತಿಯನ್ನು ತೋರಿಸಿಕೊಡುವ ಸಿದ್ಧಿಪುರುಷನೇ ನಿಜವಾದ ಯೋಗಗುರುಗಳು. ಗುರು ಧ್ಯಾನಮಾರ್ಗದಿಂದ ಅಂತರAಗವನ್ನು ಪರಿಶುದ್ಧಗೊಳಿಸುತ್ತಾನೆ. ಭಯಪಡಬೇಡವೆಂದು ಅಭಯವನ್ನು ನೀಡುತ್ತಾನೆ. ಬ್ರಹ್ಮ ಬರೆದಿರುವ ಹಣೆಬರಹವನ್ನು ಪೂರ್ಣವಾಗಿ ಅಳಿಸಿಹಾಕಿ, ಸ್ಫುಟವಾಗಿ ಬರೆದು ಭದ್ರಪಡಿಸು ತ್ತಾನೆ. ದೇಹ ಶೋಧನೆಯ ಮಾರ್ಗವನ್ನು ತೋರಿಸಿಕೊಟ್ಟು ಮನಸ್ಸನ್ನು ಸಹಸ್ರಕಮಲ ಮಂಡಲವನ್ನು ಸೇರಿಸುತ್ತಾನೆ ಎಂದು ಕೈವಾರ ತಾತಯ್ಯನವರು ಹೇಳಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ಶ್ರೀರಾಮಭವತಾರಕ ಮಂತ್ರ ಪಠಣೆಯನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು. ಮಹಾಮಂಗಳಾರತಿ ಬೆಳಗಲಾಯಿತು. ಭಕ್ತರಿಗೆ ತೀರ್ಥಪ್ರಸಾದ ವನ್ನು ವಿತರಿಸಲಾಯಿತು.

ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಯೋಗಿನಾರೇಯಣ ಟ್ರಸ್ಟ್ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಸದಸ್ಯರುಗಳಾದ ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ ಹಾಗೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ: Chickballapur News: ಬಾಗೇಪಲ್ಲಿ ಶಾಲಾ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಶಾಲೆ