Wednesday, 11th December 2024

Chickballapur News: ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಬಾರದು: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚನೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ ಪರಿಭಾವಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳನ್ನು ಈಗಾಗಲೆ ಕೈಗೊಳ್ಳುತ್ತಿರುವ ರೈತರ ಜಮೀನು ಜಂಟಿ ಸಮೀಕ್ಷೆ ಆಗಿ ತೀರ್ಮಾನ ಆಗುವವರೆಗೂ ಅವರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಮಾಡಬಾರದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ” ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಭಾವಿತ ಅರಣ್ಯ ಪ್ರದೇಶದ ಬಗ್ಗೆ ಸ್ಥಳೀಯವಾಗಿ ರೈತರಿಂದ ದೂರುಗಳಿವೆ. ಹಲವು ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಮಾಲಿಕತ್ವದ ದಾಖಲೆಗಳನ್ನು ಹೊಂದಿದ್ದರೂ ಸಹ ಪಹಣಿಯಲ್ಲಿ ಪರಿಭಾವಿತ ಅರಣ್ಯ ಪ್ರದೇಶವೆಂದು ನಮೂದಾಗಿದೆ. ಈ ಕುರಿತು ಜಿಲ್ಲೆಯಾದ್ಯಂತ ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಜಂಟಿ ಸಮೀಕ್ಷೆಯ ವರದಿಗಳು ಬಂದ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಯಾವುದೇ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆ ಮಾಡುವುದಾಗಲಿ ಅಥವಾ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಇದನ್ನೂ ಓದಿ: Chickballapur Muncipality Election: ಕುತೂಹಲ ಮೂಡಿಸಿದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ

ಜಿಲ್ಲಾ ಜಾಗೃತಿ ಸಮಿತಿಯಲ್ಲಿ ದಾಖಲಾಗಿರುವ ದೂರು ಅರ್ಜಿಗಳ ವಿಷಯಗಳಿಗೆ ಸಂಬಂಧಿಸಿದಂತೆ ಗೌರವಾನ್ವಿತ ಯಾವುದೇ ನ್ಯಾಯಾಲಯಗಳಲ್ಲಿ ಪ್ರಕರಣ ಬಹು ವರ್ಷಗಳಿಂದ ಬಾಕಿ ಇದ್ದರೆ ಅಂತಹ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಲು ಸಂಬಂಧ ಪಟ್ಟ ಸರ್ಕಾರಿ ವಕೀಲರು ಹಾಗೂ ಸಕ್ಷಮದ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಿಡ್ಲಘಟ್ಟ ತಾಲೂಕಿನ ಧಡಂಘಟ್ಟ ಗ್ರಾಮದ ಸ್ಮಶಾನಕ್ಕೆ ಸರ್ವೆ ನಂ-37 ರಲ್ಲಿ 26 ಗುಂಟೆ ಮಂಜೂರಾಗಿದೆ. ಈ ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಸರ್ಕಾರಿ ಖರಾಬು ಜಾಗದಲ್ಲಿ ರಸ್ತೆಯನ್ನು ಮಂಜೂರು ಮಾಡಿ 2 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಗುಡಿಬಂಡೆ ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದ ಸರ್ವೆ ನಂ 66 ರ ನಿವೇಶ ಹಂಚಿಕೆ ಕುರಿತು ಮಾನ್ಯ ಘನ ನ್ಯಾಯಾ ಲಯ “ಕರ್ನಾಟಕ ಸ್ಟೇಟ್ ಅಪ್ಲಿಯೇಟ್ ಟ್ರಬ್ಯುನಲ್” ನ ಆದೇಶದಂತೆ “ಗ್ರಾಮ ಸಭೆಯನ್ನು ತುರ್ತು ನಡೆಸಿ ಗ್ರಾಮಸ್ಥರ ಕೊರಂ ತೀರ್ಮಾನದಂತೆ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು.

ನಿವೇಶನ ರಹಿತರನ್ನು ಗುರುತಿಸಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಫಲಾನುಭವಿಗಳನ್ನು ಆಯ್ಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದ ರೆಡ್ಡಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಟಿ.ಮಂಜುನಾಥ, ರತ್ನಮ್ಮ, ಎಂ.ವೇಣು, ನಾರಾಯಣಸ್ವಾಮಿ, ನರೇಂದ್ರ, ಮುನಿವೆಂಕಟಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.