Saturday, 9th November 2024

MP Dr K Sudhakar: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 1ಲಕ್ಷ ಸದಸ್ಯತ್ವದ ಗುರಿ: ಸಂಸದ ಡಾ.ಕೆ.ಸುಧಾಕರ್

ಬಿಜೆಪಿ ಯೋಜನೆಗಳಿಗೆ ಹೆಸರು ಪಡೆದುಕೊಳ್ಳುತ್ತಿರುವ ಕಾಂಗ್ರೆಸ್, ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಗೆ ನೀರಿಲ್ಲ

ಚಿಕ್ಕಬಳ್ಳಾಪುರ : ಬಿಜೆಪಿ ಸದಸ್ಯತ್ವ ಅಭಿಯಾನದಡಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಜನರ ಹೆಸರು ನೋಂದಾಯಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು. ಬಿಜೆಪಿ ಸರಕಾರ ರೂಪಿಸಿ ರುವ ಯೋಜನೆಗಳಿಗೆ ಕಾಂಗ್ರೆಸ್ ತನ್ನ ಹೆಸರು ಹಾಕಿಕೊಳ್ಳುತ್ತಿದೆ.ಎತ್ತಿನಹೊಳೆ ಯೋಜನೆ ಬಯಲು ಸೀಮೆ ಜಿಲ್ಲೆ ಗೆಂದಿದ್ದರೂ ಚಿಕ್ಕಬಳ್ಳಾಪುರ ಕೋಲಾರಕ್ಕೆ ನೀರು ಹರಿಸಿಲ್ಲದಿರುವುದು ಬೇಸರ ಮೂಡಿಸಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಒಂದು ಪಕ್ಷಕ್ಕೆ ಆಧಾರಸ್ತಂಭ ಎಂದರೆ ಅದು ಸಕ್ರಿಯ ಕಾರ್ಯಕರ್ತರು. ಬಿಜೆಪಿ ಇಡೀ ಜಗತ್ತಿನಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷ. ಸುಮಾರು ೨೦ ಕೋಟಿ ಸದಸ್ಯರು ಈ ಪಕ್ಷದಲ್ಲಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ೨.೧೦ ಲಕ್ಷ ಮತದಾರರಿದ್ದಾರೆ.ಎಲ್ಲಾ ಮತದಾರರನ್ನು ಈಗಲೇ ಬಿಜೆಪಿಯ ಕುಟುಂಬದ ಸದಸ್ಯರನ್ನಾಗಿ ಮಾಡಲು ಇದು ಸುವರ್ಣಾವಕಾಶ.ಇದನ್ನು ಸಮರ್ಥವಾಗಿ ಬಳಸಿಕೊಂಡು ಹೆಚ್ಚಿನ ಸದಸ್ಯತ್ವ ಮಾಡಿಸುವ ಮೂಲಕ ಮೋದಿ ಅವರ ಕೈ ಬಲಪಡಿಸೋಣ  ಎಂದರು.

ಬಿಜೆಪಿ ಸದಸ್ಯತ್ವ ಅಭಿಯಾನದಡಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 1 ಲಕ್ಷ ಜನರ ಹೆಸರನ್ನು ಪಕ್ಷಕ್ಕೆ ನೋಂದಾಯಿಸ ಬೇಕು ಎಂಬ ಗುರಿಯನ್ನು ನಾನು ನೀಡುತ್ತಿದ್ದು, ಎಲ್ಲ ಕಾರ್ಯಕರ್ತರು ಇದಕ್ಕಾಗಿ ಶ್ರಮಿಸಬೇಕು. ಒಂದು ಬೂತ್ ವ್ಯಾಪ್ತಿಯಲ್ಲಿ ಶೇ.೫೦ ರಷ್ಟು ಜನರನ್ನು ಸದಸ್ಯರನ್ನಾಗಿಸಿದರೆ, ಮುಂದಿನ ಚುನಾವಣೆಗೆ ಅನುಕೂಲವಾಗುತ್ತದೆ ಎಂದರು.

ಟೇಪ್ ಕತ್ತರಿಸುವ ಕಾಂಗ್ರೆಸ್

ಕೃಷಿ ಸಮ್ಮಾನ್, ಫಸಲ್ ಭೀಮಾ, ಜಲಜೀವನ್ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆ ಗಳಿಂದಾಗಿ ಬಿಜೆಪಿ ಮೇಲೆ ಜನರಿಗೆ ಹೆಚ್ಚು ವಿಶ್ವಾಸ ಮೂಡಿದೆ. ಇತ್ತೀಚೆಗೆ 121 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳನ್ನು ಜಿಲ್ಲೆಗೆ ನೀಡಲಾಗಿದೆ. ಆದರೆ ಬಿಜೆಪಿ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ನಾಯಕರು ಟೇಪ್ ಕತ್ತರಿಸಿ ಹೆಸರು ಪಡೆದುಕೊಳ್ಳುತ್ತಿದ್ದಾರೆ. ಆರೋಗ್ಯ ಸಚಿವರು ಈ ಕಡೆಗೆ ಬಂದಿದ್ದರೆ, ನಮ್ಮಲ್ಲಿ ಮೆಡಿಕಲ್ ಕಾಲೇಜು ಹೇಗೆ ನಿರ್ಮಿಸಲಾಗಿದೆ ಎಂದು ತೋರಿಸುತ್ತಿದ್ದೆ ಎಂದರು.

ಅಭಿವೃದ್ದಿಯಲ್ಲಿ ರಾಜಕೀಯ ಮಾಡಬಾರದು
ಜಿಲ್ಲೆಯಲ್ಲಿ ಮೇಗಾ ಡೇರಿ ಮಾತ್ರ ಆಗಿದೆ. ಆದರೆ ಪ್ಯಾಕೆಟ್, ಪನೀರ್ ಘಟಕ ಆಗಿಲ್ಲ. ಐಸ್‌ಕ್ರೀಮ್ ಘಟಕವನ್ನು ಚಿಂತಾಮಣಿಗೆ ತೆಗೆದುಕೊಂಡು ಹೋಗಲಾಗಿದೆ. ಮೆಗಾ ಡೇರಿಯಲ್ಲಿ ಪ್ರತಿ ನಿತ್ಯ ೫ ಲಕ್ಷ ಲೀಟರ್ ಹಾಲು ಉತ್ಪಾದನೆ ಯಾಗುತ್ತಿದೆ. ಉತ್ಪಾದನೆ ಹೆಚ್ಚಳವಾದರೆ ಅದಕ್ಕೆ ಯಾವುದೇ ಸೌಲಭ್ಯವಿಲ್ಲ. ರಾಜಕೀಯ ದೃಷ್ಟಿಕೋನದಿಂದ ಎಲ್ಲವನ್ನೂ ನೋಡುತ್ತಿರುವುದರಿಂದ ಹೀಗಾಗಿದೆ. ರೈತರಿಗೆ ಬೇರೆ ಕಡೆ ಮಾರುಕಟ್ಟೆಗೆ ಜಾಗ ಮಂಜೂರು ಮಾಡಲಾ ಗಿದೆ. ರೇಷ್ಮೆ ಹೈಟೆಕ್ ಮಾರುಕಟ್ಟೆ ಯೋಜನೆಯನ್ನು ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದು, ಅದಕ್ಕಾಗಿ ಕಾಂಗ್ರೆಸ್ ನಾಯಕರು ಹೆಸರು ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಎತ್ತಿನಹೊಳೆ ಯೋಜನೆಗೆ ಹಣ ನೀಡಿದ್ದು ಬಿಜೆಪಿ

ಎತ್ತಿನಹೊಳೆ ಯೋಜನೆಯಡಿ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರಕ್ಕೆ ನೀರು ಬಂದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ 9200 ಕೋಟಿ ರೂ. ಅನುದಾನವನ್ನು ಯೋಜನೆಗೆ ನೀಡಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ನಾಯಕರು ಒಂದೇ ಒಂದು ಮಾತು ಹೇಳಿಲ್ಲ. ಮನಸ್ಸು ಮಾಡಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಯೋಜನೆ ಉದ್ಘಾಟನೆ ಮಾಡಬಹುದಿತ್ತು. ಬೇಕಿದ್ದರೆ ಇದರ ಕೀರ್ತಿಯನ್ನು ಕಾಂಗ್ರೆಸ್ ಸರ್ಕಾರ ಪಡೆದುಕೊಳ್ಳಲಿ. ಆದರೆ ಎರಡನೇ ಹಂತದ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಲಿ. ಜೊತೆಗೆ ವಿನ್ಯಾಸ ಮಾಡಿದಂತೆಯೇ ಯೋಜನೆಯನ್ನು ಅನುಷ್ಠಾನ ಮಾಡಲಿ ಎಂದು ಒತ್ತಾಯಿಸಿದರು.

ವಾಮಮಾರ್ಗ ಕಾಂಗ್ರೆಸ್ ಗುಣ
ನಗರಸಭೆ ಸೇರಿ ಯಾವುದೇ ಚುನಾವಣೆಯಿರಲಿ ಕಾಂಗ್ರೆಸ್ ವಾಮಮಾರ್ಗದ ಮೂಲಕವೇ ಗೆಲ್ಲಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಬಿಜೆಪಿ ಕಾರ್ಯಕರ್ತರ ವಿರುದ್ಧ ದ್ವೇಷ ಸಾಧಿಸಿದರೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸಭೆಯಲ್ಲಿ ಕೆ.ವಿ.ನಾಗರಾಜ್, ಮರಳುಕುಂಟೆ ಕೃಷ್ಣಮೂರ್ತಿ, ಚಿಕ್ಕಕಾಡಿಗೇನಹಳ್ಳಿ ಕೃಷ್ಣಮೂರ್ತಿ, ಆವುಲ ಕೊಂಡರಾಯಪ್ಪ, ಹರಿಸ್ಥಳ ಹರೀಶ್,ಎಂಎಫ್‌ಸಿ ನಾರಾಯಣಸ್ವಾಮಿ,ಚನ್ನಕೇಶರೆಡ್ಡಿ,ಕೊಂಡೇನಹಳ್ಳಿ ಮುರಳೀಧರ್, ನರಸಿಂಹಮೂರ್ತಿ,ಲೀಲಾವತಿ ಶ್ರೀನಿವಾಸ್,ಅನು ಆನಂದ್,ಎ.ಬಿ. ಬೈರೇಗೌಡ, ಗೋವಿಂದರೆಡ್ಡಿ, ಮಂಚನಬಲೆ ಶ್ರೀಧರ್ ಮತ್ತಿತರರು ಇದ್ದರು.