Sunday, 24th November 2024

Chikkaballapur News: ಸಚಿವರೊಂದಿಗೆ ಸಂಧಾನ ಸಫಲ: ಬೇಡಿಕೆ ಈಡೇರಿಸಲು ತಾತ್ವಿಕ ಒಪ್ಪಿಗೆ

ಪ್ರತಿಭಟನೆ ವಾಪಸ್ ಪಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೌಕರರು

ಚಿಕ್ಕಬಳ್ಳಾಪುರ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ  ಮುಂದಾಗಿ ಕಳೆದ ೭ ದಿನಗಳಿಂದ ಹೋರಾಟ ಮಾಡುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್‌ರಾಜ್ ಇಲಾಖೆ ನೌಕರರ ಪ್ರತಿಭಟನೆ ಗುರುವಾರಕ್ಕೆ ಅಂತ್ಯವಾಗಿದ್ದು ಸಚಿವರೊಂದಿಗೆ ನಡೆಸಿದ ಸಂಧಾನ ಸಫಲವಾಗಿದೆ.

ಅಂತೂ ಇಂತೂ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಂದೆ  ಏಕಕಾಲದಲ್ಲಿ ನಡೆಯುತ್ತಿರುವ  ಅನಿರ್ದಿಷ್ಟ ಹೋರಾಟಕ್ಕೆ ಗುರುವಾರ ತೆರೆಬಿದ್ದಿದೆ.

ಗ್ರಾಮೀಣಾಬೀವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಯಾಂಕ್‌ಖರ್ಗೆ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಬೇಡಿಕೆಗಳನ್ನು ನೌಕರರು ಮಂಡಿಸಿದ್ದು ಇದಕ್ಕೆ ಅತ್ಯುತ್ತಮವಾಗಿ ಸ್ಪಂದನೆ ನೀಡಿದ್ದಾರೆ. ಆದ್ದರಿಂದ ನೌಕರರು ಮತ್ತು ಸಿಬ್ಬಂದಿಗಳ, ಗ್ರಾಮ ಪಂಚಾಯತ್ ಸದಸ್ಯರ  ಬಗ್ಗೆ ಕಾಳಜಿ ವಹಿಸಿರುವ ನಿಟ್ಟಿನಲ್ಲಿ ಕೋರಿಕೆ ಮೇರೆಗೆ ಸದರಿ ಅನಿರ್ದಿಷ್ಟ  ಹೋರಾಟವನ್ನು  ಈ ಕೆಳಗಿನಂತೆ ತೀರ್ಮಾನಿಸಿ  ಹಿಂಪಡೆಯಲಾಗಿದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದ ಕಾರಣ ಜಿಲ್ಲೆಯಲ್ಲಿ ಕೂಡ ವಾಪಸ್ಸು ಪಡೆಯಲಾಗಿದೆ ಎಂದು ಜಿಲ್ಲಾಧ್ಯಕ್ಷ ಮೋಹನ್‌ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರದಿಂದಲೇ ಅಂದರೆ ದಿನಾಂಕ ೧೧ರಿಂದ ಎಲ್ಲರು ಯಥಾವತ್ತಾಗಿ ಗ್ರಾಮ ಪಂಚಾಯಿತಿ ಕೆಲಸ ಗಳಿಗೆ ಹಾಜರಾಗಬೇಕು. ಹೋರಾಟದ ಅವಧಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹಾಜರಾತಿ ಕೊಡುವುದು. ಹೋರಾಟದ ಅವಧಿಯಲ್ಲಿ ನೌಕರರ ವಿರುದ್ಧ ಮಾಡಿದ ಎಲ್ಲಾ ಆದೇಶಗಳನ್ನು ಹಿಂಪಡೆಯುವುದು. ಮುಂದು ವರೆದು ಎಲ್ಲಾ ವೃಂದ ಸಂಘಗಳ ರಾಜ್ಯಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಪ್ಲಾನ್ ಎ ಮತ್ತು ಬಿ ಮುಕ್ತಾಯವಾಗಿದ್ದು, ಪ್ಲಾನ್ ಸಿ ಯನ್ನು, ಸರ್ಕಾರ ಮತ್ತು ಇಲಾಖೆಯ  ನಡೆ ಗಮನಿಸಿಕೊಂಡು ತಮ್ಮೆಲ್ಲರ ಜೊತೆ ಚರ್ಚಿಸಿ  ಸೂಕ್ತ ರೂಪರೇಷವನ್ನು ಕೂಡ ಮುಂದಿನ ದಿನಗಳಲ್ಲಿ  ತಯಾರಿಸಲಾಗುವುದು.ಎಲ್ಲಾ ವೃಂದ ಸಂಘಗಳ ಪ್ರಮುಖ  ಬೇಡಿಕೆ ಈಡೇರಿಸಿದ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನಾ ಸಮಾರಂಭವನ್ನು ರಾಜ್ಯದ ಎಲ್ಲಾ ಅಧಿಕಾರಿಗಳು  ನೌಕರರು, ಸಿಬ್ಬಂದಿ ವರ್ಗ,ಹಾಗೂ ಸದಸ್ಯರನ್ನು ಸೇರಿಸಿ ರಾಜ್ಯ ಮಟ್ಟದಲ್ಲಿ ಅದ್ಧೂರಿಯಾಗಿ ಮಾಡುವುದು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದಿದ್ದಾರೆ.

ಜಿಲ್ಲಾ ಹೋರಾಟಕ್ಕೆ ಬೆಂಬಲಕೊಟ್ಟ ಎಲ್ಲಾ ಅಧಿಕಾರಿ, ನೌಕರವರ್ಗಕ್ಕೆ,ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸ್ಪಂದಿಸಿದ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.