ಬಾಗೇಪಲ್ಲಿ: ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ಪ್ರಗತಿಪರ ರೈತ ಪಿ.ಈಶ್ವರರೆಡ್ಡಿ ನವಣೆ, ಸಾಮು, ರಾಗಿ, ಭತ್ತ, ಮುಸುಕಿನ ಜೋಳ, ನೆಲಗಡಲೆ, ಬೀಟ್ ರೂಟ್, ಹೂಕೋಸು, ಸೇವಂತಿಗೆ, ಚೆಂಡುಹೂವು ಸೇರಿದಂತೆ ವಿವಿಧ ತರಕಾರಿ ಹಾಗೂ ಹೂವನ್ನು ಬೆಳೆಯುತ್ತಿದ್ದಾರೆ.
ಈಶ್ವರರೆಡ್ಡಿ ಅವರಿಗೆ 6 ಎಕರೆ ಜಮೀನು ಇದ್ದು ಸಾವಯವ ಗೊಬ್ಬರ ಬಳಕೆ ಮಾಡಿ ವಿವಿಧ ತಳಿಯ ಕೃಷಿ ಹಾಗೂ ತರಕಾರಿ ಬೆಳೆಯುತ್ತಾರೆ. ಜಿಲ್ಲಾ ಪ್ರಗತಿ ಪರ ರೈತ ಎನಿಸಿದ್ದಾರೆ. ಯಲ್ಲಂಪಲ್ಲಿ, ಆಚೇಪಲ್ಲಿ, ಮಿಟ್ಟೇಮರಿ,ಗೂಳೂರು ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳ ರೈತರು ಆಗಮಿಸಿ ಕೃಷಿಯ ಮಾಹಿತಿ ಪಡೆದು ಅನುಕೂಲ ಪಡೆಯುತ್ತಿದ್ದಾರೆ.
೨ ಎಕರೆ ಮುಸುಕಿನಜೋಳ, ತಲಾ ಒಂದು ಎಕರೆಯಲ್ಲಿ ಬೀಟ್‌ರೂಟ್, ಹೂಕೋಸು, ನೆಲಗಡಲೆ, ಟೊಮೆಟೊ, ಭತ್ತ, ರಾಗಿ, ಸಾಮು, ನವಣೆ, ಸೂರ್ಯಕಾಂತಿ ಸೇರಿದಂತೆ ಇತರೆ ತಳಿಯ ಕೃಷಿ ಹಾಗೂ ತರಕಾರಿ ಬೆಳೆದಿದ್ದಾರೆ. ಅರ್ಧ ಎಕರೆಯಲ್ಲಿ ಸೇವಂತಿಗೆ ಹಾಗೂ ಚೆಂಡು ಹೂವು ಬೆಳೆದಿದ್ದಾರೆ.
ಕುರಿ, ಮೇಕೆ ಸೀಮೆಹಸು, ನಾಟಿಹಸು ಹಾಗೂ ಹೈಬ್ರಿಡ್ ತಳಿಯ ಮೇಕೆಗಳನ್ನು ಸಾಕಿದ್ದಾರೆ. ತೆಂಗಿನ ಮರ 90, ಹುಣಸೆ ಮರ 95, ಮಾವಿನ ಮರ 80, ಹಲಸಿನ ಮರ 10 ಹಾಗೂ 4 ನುಗ್ಗೆ ಗಿಡ ಬೆಳೆಸಿದ್ದಾರೆ. ಕೃಷಿ ಶೆಡ್ ನಿರ್ಮಾಣ ಮಾಡಿದ್ದಾರೆ. ಕೃಷಿ ಹೊಂಡವೂ ಇದೆ. ಕೊಳವೆಬಾವಿ ಜೊತೆಗೆ, ಮಳೆ ನೀರನ್ನು ಸಂಗ್ರಹ ಮಾಡುತ್ತಾರೆ. ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.
ಕೃಷಿಯನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಅವರು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಭೇಟಿ ನೀಡಿ ಅಲ್ಲಿನ ರೈತರಿಂದ ಮಾಹಿತಿ ಪಡೆದಿದ್ದಾರೆ.
ಬೆಳೆಗಳ ಕಸ, ತ್ಯಾಜ್ಯ ಸಂಗ್ರಹಿಸಿ ಸಾವಯವ ತಿಪ್ಪೆಗುಂಡಿ ಮಾಡಿದ್ದಾರೆ. ಬೆಂಗಳೂರಿನ ಕೃಷಿ ವಿಶ್ವವಿಶ್ವವಿದ್ಯಾಲಯ ದಿಂದ ೨೦೨೨ರಲ್ಲಿ ನಡೆದ ಕೃಷಿ ಮೇಳದಲ್ಲಿ ‘ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ’ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ ಪಡೆದಿದ್ದಾರೆ.
ರೈತ ಪಿ.ಈಶ್ವರರೆಡ್ಡಿ ಬೆಳೆದಿರುವ ವಿವಿಧ ತಳಿಯ ಕೃಷಿ ಹಾಗೂ ತರಕಾರಿ ಮಿಶ್ರ ಬೆಳೆ ರೈತರಿಗೆ ಮಾದರಿ. ಇವರ ತೋಟಕ್ಕೆ ಆಗಮಿಸಿ, ಬೆಳೆ ವೀಕ್ಷಣೆ ಮಾಡಿದ್ದೇವೆ ಎಂದು ಚೊಕ್ಕಂಪಲ್ಲಿಯ ರೈತ ಕಾಮರೆಡ್ಡಿ ತಿಳಿಸಿದರು.
ಕೃಷಿಯನ್ನೇ ನಂಬಿದ್ದೇನೆ. ಕೃಷಿ ಕೈ ಬಿಟ್ಟಿಲ್ಲ. ಮಿಶ್ರ ಬೆಳೆಗಳಿಂದ ಉತ್ತಮ ಇಳುವರಿ ಬಂದಿದೆ. ವಾರ್ಷಿಕವಾಗಿ ?೮ ರಿಂದ ?೧೦ ಲಕ್ಷ ಸಂಪಾದನೆ ಆಗುತ್ತದೆ. 4 ಲಕ್ಷ ಖರ್ಚಾಗುತ್ತದೆ ಉಳಿದದ್ದು ಲಾಭ ಎಂದು ಪಿ.ಈಶ್ವರರೆಡ್ಡಿ ‘ಪತ್ರಿಕೆ’ಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: Chikkaballapur_Dasara: ವೈದ್ಯ ಡಾ.ಬಿ.ವಿ.ಮಂಜುನಾಥ್ ಮನೆಯಲ್ಲಿ ೧೬ನೇ ವರ್ಷದ ದಸರಾ ಗೊಂಬೆಪೂಜೆ ಆರಾಧನೆ