Wednesday, 23rd October 2024

Chikkaballapur News: ಒಳಮೀಸಲಾತಿಗೆ ಆಗ್ರಹಿಸಿ ಜಿಲ್ಲಾಡಳಿತ ಎದುರು ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ

ಚಿಕ್ಕಬಳ್ಳಾಪುರ : ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರಕಾರ ಈ ಕೂಡಲೇ ಒಳಮೀಸಲಾತಿ ಜಾರಿ ಮಾಡಿ ನುಡಿದಂತೆ ನಡೆಯಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಪಟ್ರೇನಹಳ್ಳಿ ಕೃಷ್ಣ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಎದುರು ಬುಧವಾರ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟಗಳ ಸಹಯೋಗದಲ್ಲಿ ನಡೆದ ಒಳಮೀಸಲಾತಿ ಜಾರಿ ಸಂಬ0ಧದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಅಧಕ್ಷರಾಗಿದ್ದ ಪರಮೇಶ್ವರ್ ಅವರು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹಾಕಿದಂತೆ ಸರಕಾರ ಅಧಿಕಾರಕ್ಕೆ ಬಂದಿದೆ.ಈಗ ಇರುವ ಸದಾವಕಾಶವನ್ನು ಬಳಸಿಕೊಂಡು ಒಳಮೀಸಲು ಜಾರಿಗೆ ಮುಖ್ಯಮಂತ್ರಿಗಳ ಮನ ಒಲಿಸಲು ಮುಂದಾಗಬೇಕು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಇದರ ನೇತೃತ್ವ ವಹಿಸಿ ಇದೇ ಸರಕಾರದ ಅವಧಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಮಾದಿಗ ಸಮುದಾಯದ ನ್ಯಾಯಯುತ ಹಕ್ಕನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕು.ಅಲ್ಲಿಯವರೆಗೆ ಹೊಸ ನೇಮಕಾತಿಗಳಿಗೆ ತಡೆ ನೀಡಬೇಕು.ಈಗ ತುಂಬಿಕೊಳ್ಳುತ್ತಿರುವ ಹುದ್ದೆಗಳಿಗೂ ಒಳಮೀಸಲಾತಿ ಕಲ್ಪಿಸಿಕೊಡ ಬೇಕು ಎಂದು ಮನವಿ ಮಾಡಿದರು.

ದಲಿತ ಸಮುದಾಯಗಳಲ್ಲೇ ಮಾದಿಗ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೭ ನರ್ಷಗಳು ಕಳೆದರೂ ಕೂಡ ಭಾರತವು ನಾನಾ ಕ್ಷೇತ್ರಗಳಲ್ಲಿ ಗುರುತರ ಸಾಧನೆ ಮಾಡಿದ್ದರೂ, ನಮ್ಮ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಲಹೀನವಾಗಿದ್ದು ಸಮಾಜದ ಮುಖ್ಯವಾಹಿಯಿಂದ ದೂರವೇ ಉಳಿದಿದೆ.೪ ದಶಕಗಳಿಗೂ ಹೆಚ್ಚಿನ ಕಾಲದಿಂದ ದಲಿತ ಸಮುದಾಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಿ ಎಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ನ್ಯಾಯ ಮರೀಚಿಕೆಯಾಗಿತ್ತು.ಸುಪ್ರಿಂ ತೀರ್ಪು ನಮಗೆ ಜೀವದಾನ ನೀಡಿದೆ ಎಂದರು.

ಆದರೆ ಈ ತೀರ್ಪು ಬರುವ ಮುನ್ನವೇ  ನಮ್ಮ ಪಕ್ಷ ಅಧಿಕಾರಕ್ಕೆ  ಬಂದರೆ ಒಳಮೀಸಲಾತಿ ಜಾರಿ ಮಾಡಿಯೇ ತೀರುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು.ಇದರಂತೆ ಸುಪ್ರಿಂ ಕೋರ್ಟ್ ತೀರ್ಪು ನೀಡಿ ಸರಕಾರಕ್ಕೆ ರಹದಾರಿ ನಿರ್ಮಿಸಿ ಕೊಟ್ಟಿದೆ. ಈ ತೀರ್ಪು ಬಂದಾಗ ಪ್ರತಿಕ್ರಯಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಳಮೀಸಲು ಕಲ್ಪಿಸಲು ಸರಕಾರ ಸಿದ್ಧವಿದೆ ಎಂದಿದ್ದರು.ಸರಕಾರಕ್ಕೆ ಈಗ ಎಲ್ಲಾ ಅವಕಾಶಗಳು ಮುಕ್ತವಾಗಿದ್ದರೂ ಜಾರಿ ಮಾಡದೆ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ಕೂಡಲೇ ಒಳಮೀಸಲು ಜಾರಿ ಮಾಡಿ ನುಡಿದಂತೆ ನಡೆಯಬೇಕು. ಕಾಂಗ್ರೆಸ್ ಪಕ್ಷ ಮಾದಿಗರ ಪರವಾಗಿದೆ ಎಂದು ಹೇಳಬೇಕಿದೆ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಚಿಂತಾಮಣಿಯ ಅಮರ್ ಮಾತನಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಕೂಡಲೇ ಒಳಮೀಸಲಾತಿ ಜಾರಿ ಮಾಡಿ ಸಾಮಾಜಿಕ ನ್ಯಾಯದ ಹರಿಕಾರ ಎನಿಸಿಕೊಳ್ಳಬೇಕು. ಇಲ್ಲವಾದಲ್ಲಿ  ಮುಂಬರುವ ಯಾವುದೇ ಚುನಾವಣೆಗಳಲ್ಲಿ ನಮ್ಮ ಸಮುದಾಯ ಪಕ್ಷವನ್ನು ಬೆಂಬಲಿಸಲು ಚಿಂತಿಸಲಿದೆ. ನಮ್ಮ ಸಮುದಾಯ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲಿ ಎಂದು ಹಗಲಿ ಇರುಳು ಕೆಲಸ ಮಾಡಿದೆ. ನಮ್ಮ ಒಗ್ಗಟ್ಟಿನ ಕಾರಣವಾಗಿಯೇ ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬಂದಿದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಅರ್ಥ ಮಾಡಿಕೊಂಡು ಕೂಡಲೇ ಒಳಮೀಸಲು ಜಾರಿ ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಬಾಲಕುಂಟಹಳ್ಳಿ ಗಂಗಾಧರ್,ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ವಿ.ರಾಮಪ್ಪ, ಮಾಜಿ ಜಿಲ್ಲಾಧ್ಯಕ್ಷ ಪೆದ್ದಣ್ಣ, ಮುರಳಿ ಮೋಹನ್,ಸುರೇಶ್,ವೀಣಾರಾಮು, ಪಿ.ಎಂ,ನರಸಿAಹಯ್ಯ, ಗೌರಿಬದನೂರು ಗಂಗಾಧರ್, ಲಾಯರ್ ಹೆಚ್‌ಎಲ್‌ವಿ ವೆಂಕಟೇಶ್,ಕೃಷ್ಣಪ್ಪ ಚಿಂತಾಮಣಿ,ಹಳ್ಳಿ ಮಕ್ಕಳ ಸಂಘದ ವೆಂಕಟೋಣಪ್ಪ, ಶಿಡ್ಲಘಟ್ಟ ಜೀವಿಕ ಮುನಿಯಪ್ಪ, ಹೆಚ್.ಎಂ.ಜಗದೀಶ್, ಕು0ದಗುರ್ಕಿ ಮುನೀಂದ್ರ ಮತ್ತಿತರರು ಇದ್ದರು.