ಚಿಕ್ಕಬಳ್ಳಾಪುರ: ರೈತರಿಗೆ ಉತ್ತಮ ಗುಣಮಟ್ಟದ ಕಂಪನಿಗಳ ರಾಸಾಯನಿಕಗಳ ಪೂರೈಕೆ ಮಾಡಬೇಕು.ಕಳಪೆ ಗುಣಮಟ್ಟದ ಔಷಧಿ ಪೂರೈಕೆ ಮಾಡುತ್ತಿರುವ ಕಂಪನಿಗಳಿಗೆ ನೀಡುತ್ತಿರುವ ಸಬ್ಸೀಡಿ ಕಡಿತ ಮಾಡಬೇಕು. ರೈತರೇ ಖರೀದಿಸುವ ವೇಳೆ ಈ ಪ್ರೋತ್ಸಾಹಧನ ನೀಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಅಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿದ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ ರೈತರಿಗೆ ನೆರವಾಗುತ್ತೇವೆ ಎನ್ನುತ್ತಾ, ಸಹಾಯ ಧನದ ರೂಪದಲ್ಲಿ ಸರಕಾರ ಕಂಪನಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಕಡಿತ ಮಾಡಬೇಕು. ಕಾರಣ ಈ ರಾಸಾಯನಿಕಗಳು, ಗೊಬ್ಬರ ಕಳಪೆ ಗುಣಮಟ್ಟದಿಂದ ಕೂಡಿವೆ. ೨೫ ಕೆ.ಜಿ ತೂಕದ ಹನಿ ನೀರಾವರಿ ಮೂಲಕ ಬಿಡುವ ರಾಸಾಯನಿಕ ಚೀಲದ ಬೆಲೆ ೨೮೮೦ ರೂಪಾಯಿ ಇದ್ದರೆ, ಖಾಸಗಿ ಅಂಗಡಿಗಳಿ0ದ ರೈತರೇ ನೇರವಾಗಿ ಖರೀದಿ ಮಾಡಿದರೆ ೨೮೨೦ ರೂಪಾಯಿಗೆ ದೊರೆಯುತ್ತಿದೆ. ಇದು ಕಂಪನಿಗಳ ಹಗಲು ದರೋಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಈ ಬಗ್ಗೆ ಪರಿಶೀಲನೆ ಮಾಡಿ ಈಗ ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ಒದಗಿಸುತ್ತಿರುವ ಗೊಬ್ಬರ ರಸಾಯನಿಕಗಳ ಗುಣಮಟ್ಟದ ಪರೀಕ್ಷೆ ಮಾಡಬೇಕು.ತಪ್ಪು ಮಾಡುತ್ತಿರುವ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು.ರೈತರಿಗೆ ಗುಣಮಟ್ಟದ ರಸಗೊಬ್ಬರ, ರಸಾಯನಿಕ, ಔಷದಿ ಪೂರೈಕೆಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ ಮುಖಂಡರು, ತಪ್ಪಿದಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದರು.
ಈ ವೇಳೆ ಕರ್ನಾಟಕ ರಾಜ್ಯ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜಿನಪ್ಪ, ನೆಲಮಾಕನಹಳ್ಳಿ ಗೋಪಾಲ್, ಉಪಾಧ್ಯಕ್ಷ ಕೊಳವನಹಳ್ಳಿ ಅಶ್ವತ್ಥಪ್ಪ, ಬೊಮ್ಮನಹಳ್ಳಿ ಗ್ರಾಮ ಘಟಕದ ಅಶ್ವತ್ಥಪ್ಪ,ಕಾರ್ಯಧ್ಯಕ್ಷ ಜಾತವಾರ ಮುನಿರಾಜು, ಗಂಗಾಧರ್, ನಾರಾಯಣಸ್ವಾಮಿ, ಮುನಿರಾಜು, ನಾಗರಾಜು, ಇದ್ದರು.