ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ: 42.88 ಹೆ.ಪ್ರದೇಶಗಳ ಬೆಳೆ ನಷ್ಟ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಿಂಗಾರು ಪ್ರಬಲವಾಗಿದ್ದು ಕಳೆದ ಒಂದು ವಾರದಿಂದ ಸತತವಾಗಿ ಮೆಳೆ ಸುರಿಯು ತ್ತಿದೆ. ಇದರಿಂದಾಗಿ ಜನಜಾನುವಾರುಗಳ ಜೀವಕ್ಕೆ ಸಂಚಕಾರ ಉಂಟಾಗಿದೆ. ಮಳೆಯಾಶ್ರಿತ ತೋಟಗಾರಿಕೆ, ವಾಣಿಜ್ಯ ಎಲ್ಲಾ ರೀತಿಯ ಬೆಳೆಗಳೂ ಹಾನಿಗೆ ಒಳಗಾಗಿದ್ದು ಇದರ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸುವ ಮೂಲಕ ನಷ್ಟವುಂಟಾದ ರೈತರಿಗೆ ನ್ಯಾಯ ಸಿಗುವಂತೆ ಮಾಡಲು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ” ಮಳೆ ಹಾನಿಯ ವಿವರವನ್ನು ಪಡೆದು ನಂತರ ಮಾತ ನಾಡಿದರು.
ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅ.೧ ರಿಂದ ೨೧ರವರೆಗೆ ೪೨.೮೮ ಹೆಕ್ಟೇರ್ ಪ್ರದೇಶಗಳ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಸೋಮವಾರ ಮಂಗಳವಾರ ಬಿದ್ದ ಬಾರಿ ಮಳೆಗೆ ಹಾನಿಯಾಗಿರುವ ಬೆಳೆ ಮಾಹಿತಿಯನ್ನು ತ್ವರಿತವಾಗಿ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸಮೀಕ್ಷೆ ಮಾಡಿ ಪರಿಹಾರ ತಂತ್ರಾಂಶದಲ್ಲಿ ಮಾಹಿತಿ ನಮೂಧಿಸುವ ಮೂಲಕ ಪರಿಹಾರ ಕ್ರಮಕ್ಕೆ ತುರ್ತಾಗಿ ಸ್ಪಂಧಿಸಲು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಳೆದ ೭ ದಿನಗಳಿಂದ ಜಿಲ್ಲೆಯಲ್ಲಿ ೮೭ ಮಿ.ಮೀಟರ್ ಮಳೆಯಾಗಿದೆ. ವಾಡಿಕೆ ಪ್ರಕಾರ ಕಳೆದ ೭ ದಿನಗಳಲ್ಲಿ ೨೫ ಮಿ.ಮೀಟರ್ ಮಳೆ ಆಗಬೇಕಾಗಿತ್ತು. ಕಳೆದ ರಾತ್ರಿ ಬಿದ್ದ ಮಳೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಜಕ್ಕಲಮಡಗು, ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆ ಕೊಡಿ ಹೋಗುತ್ತಿವೆ.
ಬಾಗೇಪಲ್ಲಿಯ ಚಿತ್ರಾವತಿ ಜಲಾಶಯ ಬಹುತೇಕ ಪೂರ್ಣಗೊಂಡಿದ್ದು, ಒಂದೆರಡು ದಿನಗಳಲ್ಲಿ ಕೊಡಿ ಹೋಗುವ ಸಾಧ್ಯತೆ ಇದೆ. ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಪ್ರಮಾಣ ಜಾಸ್ತಿ ಆಗಲಿದೆ. ಉತ್ತರ ಪಿನಾಕಿನಿ ನದಿಯು ಉಕ್ಕಿ ಹರಿಯುತ್ತಿದೆ.
ಬಹುತೇಕ ಜಿಲ್ಲೆಯ ಕೆರೆಗಳು, ಕುಂಟೆಗಳು ತುಂಬಿ ಹರಿಯುತ್ತಿವೆ. ನೀರು ಹರಿಯುವ ತಾಣಗಳಲ್ಲಿ, ಕೋಡಿ ಪ್ರದೇಶ ಗಳಲ್ಲಿ, ನದಿ ಪಾತ್ರ ಪ್ರದೇಶಗಳಲ್ಲಿ ಸಾರ್ವಜನಿಕರು, ಮಕ್ಕಳು ಈಜಾಡಲು, ಆಟವಾಡಲು ಹಾಗೂ ಮೀನು ಹಿಡಿಯಲು ಮುಂದಾಗುವ ಸಾಧ್ಯತೆಗಳಿರುತ್ತವೆ. ಅಂತಹ ಕಡೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು.
ತಮ್ಮ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಈ ರೀತಿ ಆಗುವ ಸಾಧ್ಯತೆ ಇದೆ ಮುಂಜಾಗ್ರತೆಯಿಂದ ಸ್ಥಳಗಳನ್ನು ಗುರ್ತಿಸಿ ಅಗತ್ಯ ಕ್ರಮಗಳನ್ನು ತಹಸೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಕ್ರಮ ತೆಗೆದುಕೊಳ್ಳ ಬೇಕು. ಜಿಲ್ಲಾಡಳಿತದ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕಾರ್ಯ ಕೇಂದ್ರ ಸ್ಥಳಗಳಲ್ಲಿ ಇದ್ದು ೨೪ಘಿ೭ ಕಾರ್ಯ ನಿರ್ವಹಿಸಬೇಕು. ಮಳೆ ಹಾನಿ ಅವಗಡಗಳನ್ನು ತಡೆಗಟ್ಟಲು ಸಹಾಯವಾಣಿ ಕೇಂದ್ರಗಳನ್ನು ತೆರೆದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸಬೇಕು. ಮಳೆಯಿಂದ ಹಾನಿಗೊಳಗಾದ ಮನೆಗಳ ಮಾಲಿಕರಿಗೆ ಹಾಗೂ ಬೆಳೆ ಹಾನಿಗೆ ಒಳಗಾದ ಸಂತ್ರಸ್ತ ರೈತರಿಗೆ ಪರಿಹಾರ ನೀಡಲು ತ್ವರಿತ ಕ್ರಮವಹಿಸ ಬೇಕು ಎಂದು ಸೂಚನೆ ನೀಡಿದರು.
ಅ. ರಿಂದ ಈ ವರೆಗೆ ಗೌರಿಬಿದನೂರು ತಾಲ್ಲೂಕಿನಲ್ಲಿ ೧೫ ಮನೆಗಳಿಗೆ ಹಾನಿಯಾಗಿದ್ದು, ೫ ಮನೆಗಳಿಗೆ ಪರಿಹಾರ ನೀಡಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ೧೦ ಮನೆಗಳು ಹಾನಿಯಾಗಿದ್ದು, ೫ ಮನೆಗಳ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ ೮ ಮನೆಗಳಿಗೆ ಹಾನಿಯಾಗಿದ್ದು, ೫ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ಚಿಂತಾಮಣಿ ತಾಲ್ಲೂಕಿನಲ್ಲಿ ೦೪, ಚೇಳೂರು ತಾಲ್ಲೂಕಿನಲ್ಲಿ ೦೪, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೦೪ ಮನೆಗಳು ಹಾನಿಯಾಗಿದೆ.
ಗುಡಿಬಂಡೆ ತಾಲ್ಲೂಕಿನಲ್ಲಿ ೧೨ ಮನೆಗಳು ಹಾನಿಯಾಗಿದ್ದು, ೭ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ.ನೆನ್ನೆ ಬಿದ್ದ ಮಳೆ ಹಾನಿ ಮತ್ತು ಮುಂದೆ ಬೀಳುವ ಮಳೆಯ ಹಾನಿ ಬಗ್ಗೆ ತ್ವರಿತವಾಗಿ ಕಲೋಚಿತವಾಗಿ ಪರಿಶೀಲಿಸಿ ತುರ್ತು ಪರಿಹಾರವನ್ನು ನೀಡುವ ಕೆಲಸ ತ್ವರಿತವಾಗಿ ಆಗಬೇಕು. ಕಲ್ಲು ಮತ್ತು ಮಣ್ಣಿನಿಂದ ನಿರ್ಮಿಸಿರುವ ಕಚ್ಚಾ ಮನೆ ಳನ್ನು ಗುರ್ತಿಸಿ ಅಂತಹ ಮನೆಗಳ ಜನರನ್ನು ಸರ್ಕಾರದ ಸಮುದಾಯ ಭವನಗಳ ಕಟ್ಟಡಗಳಿಗೆ ಅಥವಾ ಇತರ ಕಟ್ಟಡಗಳಿಗೆ ತಾತ್ಕಲಿಕವಾಗಿ ಸ್ಥಳಾಂತರಿಸಿ ಅಗತ್ಯ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಬೇಕು.
ಸೋರುತ್ತಿರುವ ಶಾಲೆಗಳು, ಕಾಲೇಜುಗಳು, ಅಂಗನವಾಡಿಗಳಲ್ಲಿ ಪಾಠ, ಪ್ರವಚನಗಳನ್ನು ನಡೆಸಬಾರದು, ಮೇಲಾಧಿ ಕಾರಿಗಳಿಗೆ ಈ ಕುರಿತು ವರದಿ ಮಾಡಬೇಕು. ಪೋಷಕರು, ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಿ ನೀರು ಹರಿಯುವ ತಾಣಗಳಿಗೆ ಆಟವಾಡಲು ಹೋಗದಂತೆ ತಿಳಿಸಬೇಕು ಜೊತೆಗೆ ಈ ಬಗ್ಗೆ ನಿಗಾ ಇಡಬೇಕು ಎಂದು ತಿಳಿಸಿದರು.
ಅಕ್ಟೊಬರ್ ೧ರಿಂದ ಈ ವರಗೆ ಮಳೆಯಿಂದ ಯಾವುದೇ ರೀತಿಯ ಜನರ ಪ್ರಾಣ ಹಾನಿ ಆಗಿಲ್ಲ. ೩ ಜಾನುವಾರುಗಳ ಪ್ರಾಣಹಾನಿಯಾಗಿದ್ದು ಕೂಡಲೆ ಆ ಜಾನುವಾರು ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು. ಸಾರ್ವಜನಿಕರು ಸುರಕ್ಷತಾ ಕ್ರಮಗಳೊಂದಿಗೆ ಸುರಕ್ಷಿತ ಸ್ಥಳಗಳಲ್ಲಿರಬೇಕು. ಮಳೆ ಹಾನಿಗೆ ಒಳಗಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ಎಲ್ಲಾ ತಹಸೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.