ಚಿಕ್ಕಬಳ್ಳಾಪುರ : ವಿಟಮಿನ್ ಮತ್ತು ಪ್ರೊಟೀನ್ ಯುಕ್ತ ಸಮತೋಲಿತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಪ್ರತಿಯೊಬ್ಬ ಮನುಷ್ಯನ ಬೆಳವಣಿಗೆಗೆ ಅಯೋಡಿನ್ ಅವಶ್ಯಕ ಎಂಬುದನ್ನು ಸಂಶೋಧನೆ ಮೂಲಕ ಕಂಡು ಹಿಡಿಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ವಾಪಸಂದ್ರ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ “ವಿಶ್ವ ಅಯೋಡಿನ್ ದಿನ ಹಾಗೂ ಸಪ್ತಾಹ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ಪ್ರತಿನಿತ್ಯ ಆಹಾರದಲ್ಲಿ ಆಯೋಡಿನ್ಯುಕ್ತ ಉಪ್ಪನ್ನೇ ಬಳಸಿ ಅಯೋಡಿನ್ ಕೊರತೆಯಿಂದಾಗುವ ನ್ಯೂನತೆಗಳನ್ನು ತಡೆಗಟ್ಟಬೇಕು. ಆಯೋಡಿನ್ ಕೊರತೆಯಿಂದ ಗರ್ಭಿಣಿಯರಲ್ಲಿ ಗರ್ಭಪಾತ,ಪ್ರಸವ ಪೂರ್ವ ಸಾಯುವ ಮಕ್ಕಳ ಪ್ರಮಾಣ ಹೆಚ್ಚಾಗುತ್ತದೆ. ಆಯೋಡಿನ್ ಕೊರತೆಯಿಂದಾಗಿ ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕುಂಠಿತ ಬೆಳವಣಿಗೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಕಿವುಡು, ಮೂಕತನ, ಮೆಳ್ಳೆಗಣ್ಣು ಇನ್ನಿತರೆ ನ್ಯೂನತೆಯನ್ನು ಕಾಣಬಹುದಾಗಿದೆ. ನಿಶ್ಯಕ್ತಿ, ಗಳಗಂಡ ರೋಗ, ಕೆಲಸದಲ್ಲಿ ಆಲಸ್ಯ ಇಂತಹ ಕಾಯಿಲೆಗಳು ಆಯೋಡಿನ್ ಕೊರತೆಯಿಂದಾಗಿ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಮಾನಸಿಕ ಹಾಗೂ ದೈಹಿಕ ವಿಕಲತೆ ತಡೆಗಟ್ಟಲು ಅಯೋಡಿನ್ಯುಕ್ತ ಉಪ್ಪನ್ನೇ ಬಳಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರು ಅಯೋಡಿನ್ ಕೊರತೆಯ ನ್ಯೂನತೆಗಳ ತಡೆಗಟ್ಟಲು ಉಪ್ಪಿನ ಪ್ಯಾಕೆಟ್ ಖರೀದಿಸುವ ಮುನ್ನ ಆಯೋಡಿನ್ ಅಂಶ ಇದೆಯೇ ಎಂದು ಖಚಿತ ಪಡಿಸಿಕೊಂಡು ಖರೀದಿಸಬೇಕು. ಸೂರ್ಯ ಮಾರ್ಕಿನ ಚಿಹ್ನೆಯನ್ನು ಗಮನಿಸಿ ಆ ನಂತರ ಖರೀದಿಸಿ ಮತ್ತು ಆಯೋಡಿನ್ಯುಕ್ತ ಉಪ್ಪನ್ನ ಪ್ರತಿನಿತ್ಯ ಆಹಾರದಲ್ಲಿ ಉಪಯೋಗಿಸುವು ದರಿಂದ ಅಯೋಡಿನ್ ಕೊರತೆಯಿಂದ ಬರುವ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಈ ವೇಳೆ ಶಾಲಾ ಮಕ್ಕಳಿಗೆ ಮತ್ತು ಆಶಾ ಕಾರ್ಯರ್ತೆಯರಿಗೆ ಸ್ಥಳೀಯ ಸಾರ್ವಜನಿಕರಿಗೆ ಅಯೋಡಿನ್ ಅವಶ್ಯಕತೆ ಬಗ್ಗೆ ಮತ್ತು ಇಲಿ ಜ್ವರ ನಿಯಂತ್ರಣದ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ. ಹರೀಶ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಹಾಗೂ ಶಾಲಾ ಬೋಧಕ ಮತ್ತು ಬೋಧಕೇತರ ವರ್ಗದವರು, ಆಶಾ ಕಾರ್ಯರ್ತೆಯರು, ವಿದ್ಯಾರ್ಥಿಗಳು, ಹಾಜರಿದ್ದರು.
ಇದನ್ನೂ ಓದಿ: Chikkaballapur News: ಭರಣಿ ವೆಂಕಟೇಶ್ ಹೇಳುತ್ತಿರುವ ನನ್ನ ವಿರೋಧದ ಕಥೆ ಸುಳ್ಳು: ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್ ಸ್ಪಷ್ಟನೆ