Sunday, 24th November 2024

Chikkaballapur News: ಧರ್ಮ ಆಚರಿಸುವ ಮಾದರಿ ವ್ಯಕ್ತಿಗಳ ಅಗತ್ಯ ಬಹಳವಿದೆ: ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಮತ

ಚಿಂತಾಮಣಿ : ಬೇರೆಯವರು ಏನೂ ಮಾಡುತ್ತಿಲ್ಲ ಎಂದು ಸುಮ್ಮನೆ ಕೂರುವ ಬದಲಿಗೆ ನಮ್ಮ ಕೈಲಾದ ಕಾರ್ಯವನ್ನು ಮಾಡುತ್ತಿರಬೇಕು. ಪ್ರವಚನ ನೀಡುವವರು ಸಾಕಷ್ಟಿದ್ದಾರೆ. ಆದರೆ ನಮಗೆ ಧರ್ಮಾಚರಣೆ ಮಾಡುವ ಮಾದರಿ ವ್ಯಕ್ತಿಗಳ ಅಗತ್ಯವಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ತಾಲೂಕಿನ ಶ್ರೀಕ್ಷೇತ್ರ ಕೈವಾರದಲ್ಲಿ ಭಾನುವಾರ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಘಟಕದ ವತಿಯಿಂದ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಆಯೋಜಿಸಿದ್ದ “ಆದಿಕವಿ ಹಾಗೂ ವಾಗ್ದೇವಿ ಪುರಸ್ಕಾರ” ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಮಾನ್ಯ ಜನರಿಗೆ ವಿಚಾರಗಳು ತಿಳಿಯಬೇಕು ಎಂಬ ಕಾರಣಕ್ಕಾಗಿ ಭಾಷೆಗಳು ಆರಂಭವಾದವು. ಉತ್ತಮ ವಿಚಾರಗಳನ್ನು ಹೆಚ್ಚು ಜನರು ಬಳಸಿದಾಗ ಸಮಾಜ ಉತ್ತಮವಾಗುತ್ತದೆ. ಚಿಂತನೆಯನ್ನು ಆಚರಿಸದೇ ಇರುವವರು ಹೆಚ್ಚಾದರೆ ಕಾಲ ಕೆಟ್ಟಿತು ಎನ್ನುತ್ತೇವೆ. ಸಾಮಾನ್ಯ ಜನರಿಗೂ ಅರಿವಾಗುವಂತಹ ಭಾಷೆ, ವಿಚಾರ ನಮ್ಮಲ್ಲಿ ಈಗಾಗಲೇ ಇದೆ. ಹೊಸದಾಗಿ ಯಾವುದನ್ನೂ ಸೃಷ್ಟಿಸಬೇಕಾಗಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಜನರಿಗೆ ಉತ್ತಮ ವಿಚಾರಗಳು ಜನರಿಗೆ ತಲುಪಲಿ ಎಂಬ ಕಾರಣಕ್ಕೆ ಕಳೆದ 25 ವರ್ಷದಿಂದ ಕೈವಾರದ ಶ್ರೀ ಮಠವು ಐದು ಸಾವಿರ ಭಜನಾ ತಂಡಗಳನ್ನು ಮುನ್ನಡೆಸುತ್ತಿರುವುದು ಸಾರ್ಥಕ ಭಾವ ಮೂಡಿಸಿದೆ ಎಂದರು.

ಆಕಾಶವಾಣಿ ನಿವೃತ್ತ ಅಧಿಕಾರಿ ಹಾಗೂ ಏಕವ್ಯಕ್ತಿ ತಾಳ ಮದ್ದಳೆ ಪ್ರಕಾರದ ರೂವಾರಿ ದಿವಾಕರ ಹೆಗಡೆ ಕೆರೆಹೊಂಡ  ಮಾತನಾಡಿ, ಉತ್ಪನ್ನಗಳು ಮಾತ್ರ ಇದ್ದರೆ ಅದು ಮಾರುಕಟ್ಟೆಯಾಗುತ್ತದೆ. ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕೆಂದರೆ ಶ್ರದ್ಧೆ ಮುಖ್ಯ. ಶ್ರದ್ಧೆ ಬಂದ ಕೂಡಲೆ ಹೂವು, ಹಣ್ಣು, ಅನ್ನ ಎಲ್ಲವೂ ಪ್ರಸಾದವಾಗುತ್ತದೆ. ಹಾಗೆಯೇ ಸಾಹಿತ್ಯಕ್ಕೂ ಅಧ್ಯಾತ್ಮದ, ಶ್ರದ್ಧೆಯ ದೃಷ್ಟಿ ಅಗತ್ಯವಿದೆ. ಸಮಾಜದಲ್ಲಿ ಏನನ್ನು ಕಳೆದುಕೊಂಡರೂ ಬದುಕಬಹುದು. ಆದರೆ ಶ್ರದ್ಧೆಯನ್ನು ಕಳೆದುಕೊಂಡರೆ ಉಳಿಯಲಾಗದು ಎಂದರು.

ಆದಿಕವಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ವಿಷ್ಣುಭಟ್ ಡೋಂಗ್ರೆ  ಸಾಹಿತ್ಯವು ಸಮಾಜದ ಪ್ರತಿಬಿಂಬ. ರಾಮಾಯಣವನ್ನು ಓದಿದರೆ ಆಗಿನ ಕಾಲದ ಸಾಮಾಜಿಕ, ಸಾಂಸ್ಕöÈತಿಕ, ಧಾರ್ಮಿಕ ಸನ್ನಿವೇಶಗಳನ್ನು ತಿಳಿಯಬಹುದು. ಸನಾತನ ಧರ್ಮವು ಅಳಿವಿನ ಅಂಚಿನಲ್ಲಿದ್ದಾಗ ಗೋಸ್ವಾಮಿ, ತುಳಸಿದಾಸರು ರಾಮಚರಿತಮಾನಸ ಕೃತಿ ರಚಿಸಿ ಜನರಲ್ಲಿ ಧಾರ್ಮಿಕ ಮಾನಸಿಕತೆ ಮೂಡಿಸಿದರು. ತತ್ಕಾಲೀನ ಸಾಮಾಜಿಕ ಸನ್ನಿವೇಶ ಇಲ್ಲದಿದ್ದರೆ ಅದು ಉಪಯೋಗಕ್ಕೆಬಾರದು. ನನ್ನ ಸಾಹಿತ್ಯ ರಚನೆಯಲ್ಲೂ ಇದನ್ನೇ ಪಾಲಿಸುತ್ತಾ ಬಂದಿದ್ದೇನೆ ಎಂದು ಹೇಳಿದರು.

ವಾಗ್ದೇವಿ ಪುರಸ್ಕಾರ ಪುರಸ್ಕೃತರಾದ ಡಾ.ಜಿ.ಬಿ.ಹರೀಶ  ಮಾತನಾಡಿ ಜ್ಞಾನವಂತಿಕೆ ಜೊತೆಗೆ ಹೃದಯವಂತಿಕೆಯೂ ಬೇಕು. ಆಕಾಶಕ್ಕೆ ಏಣಿ ಹಾಕುವ ಮನುಷ್ಯನು ಇನ್ನೊಬ್ಬ ಮನುಷ್ಯನ ಹೃದಯವನ್ನು ಅರಿಯುವಲ್ಲಿ ಹಿಂದೆ ಬಿದ್ದಿದ್ದೇವೆ. ಆಧ್ಯಾತ್ಮಿಕ ಶಕ್ತಿ ಇಲ್ಲದೆ ಬರೆದ ಸಾಹಿತ್ಯವು ಅವರ ಶವದೊಂದಿಗೆ ಸ್ಮಶಾನಕ್ಕೆ  ಹೋಗುತ್ತದೆ. ಅಧ್ಯಾತ್ಮ ಇರುವ ಸಾಹಿತ್ಯವು ಶಾಶ್ವತವಾಗಿ ಉಳಿಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾಳಜಿ ಮತ್ತು ರಾಷ್ಟೀಯ ದೃಷ್ಟಿಕೋನ ಹೊಂದಿರುವ ಹಿರಿಯ ಸಾಹಿತಿ ಮತ್ತು ಯುವಸಾಹಿತಿಗೆ ನೀಡಲಾಗುವ ಪುರಸ್ಕಾರವನ್ನು ಸಾಹಿತಿ ವಿಷ್ಣುಭಟ್ ಡೋಂಗ್ರೆ ಮತ್ತು ಚಿಂತಕ ಲೇಖಕ ಡಾ||ಜಿ.ಬಿ.ಹರೀಶ್ ಅವರಿಗೆ ಪ್ರದಾನ ಮಾಡಲಾಯಿತು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಕುರಿತಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಕೈವಾರ ಮಠದ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ವಾಗ್ದೇವಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿ ರಂಜನ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಖಜಾಂಜಿ ರಾಮಕೃಷ್ಣ ಶ್ರೌತಿ, ಸಹ ಖಜಾಂಚಿ ವಿಜಯ್ ಭರ್ತೂರು, ತುಮಕೂರು ವಿಭಾಗದ ಸಂಯೋಜಕ ಅಶ್ವತ್ಥನಾರಾಯಣ ಮುಂತಾದವರು ಉಪಸ್ಥಿತರಿದ್ದರು.