ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವಲ್ಲಿ ಗುರುಗಳಷ್ಟೇ ಪ್ರಧಾನ ಪಾತ್ರವನ್ನು ವಹಿಸುವವರು ಪೋಷಕರೇ ಆಗಿದ್ದಾರೆ. ಈ ಸತ್ಯವನ್ನು ಮನಗಂಡು ಮನೆಯ ಪರಿಸರವನ್ನು ಮಕ್ಕಳಿಗೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರ ಹೊರವಲಯ ಬಿಜಿಎಸ್ ಕ್ಯಾಂಪಸ್ ಆವರಣದ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಓದುವ ಪ್ರತಿಯೊಂದು ಮಗುವಿನಲ್ಲಿ ಭಾರತೀಯ ಜೀವನದ ಉದಾತ್ತ ಮೌಲ್ಯಗಳನ್ನು ತುಂಬಲು ಮೊದಲ ಆಧ್ಯತೆ ನೀಡಲಾಗುತ್ತಿದೆ. ಮಕ್ಕಳಲ್ಲಿ ಉತ್ತಮ ವ್ಯಕಿತ್ವವನ್ನು ಬೆಳೆಸುವುದೇ ಶಿಕ್ಷಣದ ಪ್ರಮುಖ ಉದ್ದೇಶ. ಇದು ಓದು ಬರಹಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರೀಡೆಗಳು, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸೇರಿದಂತೆ ಮೌಲ್ಯಾಧಾರಿತವಾಗಿ ನಾನಾ ಚಟುವಟಿಕೆಯನ್ನು ಒಳಗೊಂಡಿದ್ದು ಇದರ ವ್ಯಾಪ್ತಿ ಬಹು ವಿಶಾಲವಾಗಿದೆ ಎಂದು ಬಣ್ಣಿಸಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ಕಲೆ,ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಪರಂಪರೆ, ಸಾಂಪ್ರದಾಯಿಕ ಚಟುವಟಿಕೆ ಮಹತ್ವವನ್ನು ಅರಿಯಬೇಕು.ಹಾಗೆಯೇ ಇಂತಹ ಸ್ಪರ್ಧೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲಿ ಕಾಲೇಜಿನ ಪ್ರಾಂಶುಪಾಲ ಬಿ.ಆರ್.ವೆಂಕಟೇಶಬಾಬು ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.