Wednesday, 20th November 2024

Chikkaballapur News: ಜಾನುವಾರಗಳಿಗೆ ಕಡ್ಡಾಯವಾಗಿ ಕಾಲು ಬಾಯಿ ರೋಗ ಲಸಿಕೆ ಹಾಕಿಸಿ : ಕೃಷ್ಣಮೂರ್ತಿ

ಬಾಗೇಪಲ್ಲಿ: ಜಾನುವಾರಗಳಿಗೆ ಕಾಲುಬಾಯಿ ರೋಗವು ಅತ್ಯಂತ ಮಾರಕವಾಗಿದ್ದು, ಕಡ್ಡಾಯವಾಗಿ ಕಾಲುಬಾಯಿ ರೋಗ ಲಸಿಕೆಯನ್ನು ಹಾಕಿಸಿ ತಮ್ಮ ಜಾನುವಾರಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎನ್.ಇ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ತಾಲೂಕಿನ ಗೂಳೂರು ಡೇರಿ ಆವರಣದಲ್ಲಿ ಪಶುವೈದ್ಯ ಇಲಾಖೆ ಮತ್ತು ಕೋಚಿಮುಲ್ ವತಿಯಿಂದ ಏರ್ಪಡಿಸಿದ್ದ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಸಾಂಕ್ರಾಮಿಕ ರೋಗವಾಗಿದ್ದು ಇದು ಬಂದ ಜಾನುವಾರಗಳು ದೈಹಿಕ ಬಲಾಢ್ಯತೆ ಕಳೆದುಕೊಂಡು ಪ್ರಾಣ ಹೋಗುವ ಸಂದರ್ಭಗಳು ಇವೆ. ಈ ರೋಗವಿರುವ ಯಾವುದಾದರೂ ಜಾನುವಾರನ್ನು ಗ್ರಾಮದಲ್ಲಿ ಕಟ್ಟಿ ಹಾಕಿದರೆ ಗ್ರಾಮದ ಎಲ್ಲಾ ದನಕರುಗಳಿಗೆ ಹರಡುವ ಸಂಭವ ಹೆಚ್ಚಾಗುತ್ತದೆ. ಅದೂ ಅಲ್ಲದೆ ಆರ್ಥಿಕತೆ ನಷ್ಟವನ್ನುಂಟು ಮಾಡುವ  ಮಾರಕ ರೋಗವಾಗಿದೆ. ಬಾಗೇಪಲ್ಲಿ ತಾಲೂಕಿನಲ್ಲಿ ಸು.೩೩ ಸಾವಿರ ಆಕಳು ಇವೆ. ಈ ರೋಗದ ಬಗ್ಗೆ ರೈತರು ಹೆಚ್ಚು ಜಾಗರೂಕತೆಯಿಂದ ಇರುವಂತೆ ನಾವು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿಕೊಂಡು ಪ್ರತಿ ಗ್ರಾಮದಲ್ಲೂ ರೈತರಿಗೆ ಅರಿವು ಮೂಡಿಸಿ ರಾಸುಗಳಿಗೆ ಲಸಿಕೆ ಹಾಕುತ್ತಿದ್ದೇವೆ.  ಈ ರೋಗವನ್ನು ತಡೆಗಟ್ಟಬೇಕಾದರೆ ೬ ತಿಂಗಳಿಗೊಮ್ಮೆ ಲಸಿಕೆಯನ್ನು ಹಾಕಿದರೆ ಮಾತ್ರ ಸಾಧ್ಯ ,ಇಲ್ಲವಾದರೆ ರೋಗವು ಉಲ್ಬಣಗೊಂಡು ಹೆಚ್ಚು ಜಾನುವಾರಗಳನ್ನು ನಾವು ಕಳೆದುಕೊಳ್ಳ ಬೇಕಾಗುತ್ತದೆ ಎಂದರು.

ಬಾಗೇಪಲ್ಲಿಯ ಕೋಚಿಮುಲ್ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಗರ‍್ರಪ್ಪ ಮಾತನಾಡಿ ಕೋಲಾರ ಮತ್ತು ಚಿಕ್ಕಬಳ್ಳಾ ಪುರ ಜಿಲ್ಲೆಗಳಲ್ಲಿ ಹೆಚ್ಚಿನ ರೈತರು ಹೈನುಗಾರಿಕೆಯಿಂದ ಜೀವನ ಮಾಡುತ್ತಿದ್ದು ತಮ್ಮ ರಾಸುಗಳನ್ನು ಮಾನವ ಜೀವಗಳಂತೆ ಕಾಪಾಡಿಕೊಳ್ಳಬೇಕು. ಕಾಲು ಬಾಯಿ ರೋಗವಿರುವ ರಾಸುವಿನ ಹಾಲಿನ ಗುಣಮಟ್ಟ ಸಹಾ ಕ್ಷೀಣಿಸುತ್ತದೆ. ಅದರ ಹಾಲಿನಿಂದಲೂ ರೋಗ ಹರಡುವ ಅಪಾಯವಿದೆ.ಆದ್ದರಿಂದ ರಾಸುಗಳಿರುವ ಪ್ರತಿಯೊಬ್ಬ ರೈತನೂ ತಪ್ಪದೆ ಕಡ್ಡಾಯವಾಗಿ ಕಾಲುಬಾಯಿ ಲಸಿಕೆ ಹಾಕಿಸಿ ಜಾನುವಾರಗಳ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್‌ಬಾಬು, ಡೇರಿ ಅಧ್ಯಕ್ಷ ಟಿ.ನರಸಿಂಹಪ್ಪ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಜಯಶಂಕರ್, ಕೋಚಿಮುಲ್ ಡಾ.ಗೌತಮ್, ಮೇಲ್ವಿಚಾರಕ ಮುನಿಸ್ವಾಮಿರೆಡ್ಡಿ ಡೇರಿ ಉಪಾಧ್ಯಕ್ಷ ಬಾಬುರೆಡ್ಡಿ, ಕಾರ್ಯದರ್ಶಿ ಜಿ.ಸಿ.ವಿನಯಕುಮಾರ್, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ನಿರ್ದೇಶಕ ರಾದ ರಾಮಚಂದ್ರಪ್ಪ ಅಮಾನುಲ್ಲಾ, ನರಸಿಂಹಪ್ಪ, ಸುಜಾತಮ್ಮ, ನಾರಾಯಣಸ್ವಾಮಿ, ನಾಗರಾಜು, ಫಕೃದ್ದೀನ್ ಸಾಬ್ ಸಿಬ್ಬಂದಿಗಳಾದ ನರೇಂದ್ರ ಮತ್ತು ಲಕ್ಷ್ಮೀನಾರಾಯಣ ಹಾಜರಿದ್ದರು.