Friday, 8th November 2024

ಅಲೆಮಾರಿಗಳಿಗೆ ಬಿಜೆಪಿ ಸರಕಾರ ಮಹಾಮೋಸ ಮಾಡಿದೆ : ರಮೇಶ್ ಆರೋಪ

ಚಿಕ್ಕಬಳ್ಳಾಪುರ: ರಾಜ್ಯದ ಬಿಜೆಪಿ ಸರಕಾರದಲ್ಲಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಪುರೋಭಿವೃದ್ದಿಗೆ ಮೀಸಲಾಗಿ ಟ್ಟಿದ್ದ ೫೫೦ ಕೋಟಿ ಅನುದಾನವನ್ನು ಸಕಾಲದಲ್ಲಿ ಬಳಸದೆ ಅನ್ಯಕಾರ್ಯಗಳಿಗೆ ಬಳಸುತ್ತಿರುವುದು ಖಂಡನೀಯ. ವಸತಿ ಸೌಲಭ್ಯ ಕಲ್ಪಿಸುವ ವಿಚಾರವಾಗಿ ಮಹಾಮೋಸ ಮಾಡಿದೆ. ಈ ಸಮುದಾಯಗಳಿಗೆ ಸೌಲಭ್ಯವನ್ನು ಕಲ್ಪಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸುತ್ತೇವೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಉಪಾಧ್ಯಕ್ಷ ರಮೇಶ್ ತಿಳಿಸಿದರು.

ಚಿಕ್ಕಬಳ್ಳಾಪುರ ನಗರ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಗುಡಿಸಲು ಮುಕ್ತರಾಜ್ಯ ಮಾಡುತ್ತೇವೆ ಎಂದು ಮುಖ್ಯಮಂತ್ರಿ  ಮತ್ತು ಸಮಾಜ ಕಲ್ಯಾಣ ಸಚಿವರು ಹೇಳುತ್ತಾರೆ. ಆದರೆ ಅಲೆಮಾರಿ ಗಳಿಗೆ ಮನೆ ನಿರ್ಮಿಸಿಕೊಳ್ಳಲು ಜಾಗವನ್ನೇ ನೀಡಿಲ್ಲ.ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯಗಳ ಜನಸಂಖ್ಯೆ ೧.೫ ಲಕ್ಷ ಇದೆ. ವಸತಿ ಸೌಲಭ್ಯ ನೀಡದಿದ್ದರೆ ಚುನಾವಣೆಗಳನ್ನು ಅಲೆಮಾರಿಗಳು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದಲ್ಲಿನ (ಎಸ್‌ಟಿ) ಅಲೆಮಾರಿ ಸಮುದಾ ಯಗಳ ಜನರ ವಸತಿ ಯೋಜನೆಗೆ ಮೀಸಲಿಟ್ಟಿದ್ದ ?೩೦೦ ಕೋಟಿ ಅನುದಾನವನ್ನು ಬೇರೆ ವಸತಿ ಯೋಜನೆಗೆ ವರ್ಗಾವಣೆ ಮಾಡಲಾಗಿದೆ. ಇದು ಖಂಡನೀಯ. ಕೊರಮ, ಕೊರಚ, ಹಂದಿ ಜೋಗಿ, ಸುಡುಗಾಡು ಸಿದ್ಧ, ಚನ್ನದಾಸರು, ಹೊಲೆಯ ದಾಸರು, ಮಾಲದಾಸರು, ಬುಡುಗ ಜಂಗಮ, ದೊಂಬರು, ಹಕ್ಕಿಪಿಕ್ಕಿ, ಇರುಳಿಗ, ಮೇದ, ಗೊಂಡ ಸೇರಿ ೭೩ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಊಟ ಕೊಟ್ಟು ತಟ್ಟೆ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ದೂರಿದರು.

ಸಮಸ್ಯೆ ಸರಿಪಡಿಸಿ ಅನುದಾನ ವಾಪಸ್ ನೀಡಬೇಕು. ಇಲ್ಲದಿದ್ದರೆ ಈ ಸಮುದಾಯಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸ ಲಿವೆ. ಅಲೆಮಾರಿ ಸಮುದಾಯಗಳ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಲಕ್ಷ್ಯತೋರುತ್ತಿದ್ದಾರೆ. ಅಲೆಮಾರಿಗಳಿಗೆ ಮೋಸ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವುದಿಲ್ಲ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಸತಿ ಯೋಜನೆ ಗ್ರಾಮ ಪಂಚಾ ಯಿತಿ ಮೂಲಕ ಆಯ್ಕೆ ಮಾಡುವ ಕಾರಣ ಅತಿ ಸೂಕ್ಷö್ಮ ಸಮದಾಯಗಳು ಇದರ ಫಲಾನುಭವಿಗಳಾಗಲು ಕಷ್ಟ ವಾಗಿತ್ತು.ಇದರ ಬಗ್ಗೆ ಸರಕಾರದ ಗಮನ ಸೆಳೆಯಲು ಹೋರಾಟ ಮಾಡಿದ್ದರ ಫಲವಾಗಿ ಎರಡೂ ಅವಧಿಯಲ್ಲಿ ಸೇರಿ ೫೫೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು.ಆದರೆ ಈ ಹಣವನ್ನು ಪ್ರತ್ಯೇಕವಾಗಿ ಅಲೆಮಾರಿ ಸಮುದಾಯಗಳಿಗೆ ನೀಡದೆ, ಅಂಬೇಡ್ಕರ್ ವಸತಿ ಯೋಜನೆಯ ಮೂಲಕವೇ ೫ ಲಕ್ಷ ಮನೆಗಳ ಗುರಿಯಲ್ಲಿಯೇ ಪಡೆದುಕೊಳ್ಳುವಂತೆ ಸೂಚಿಸಿ ಹಣ ಬಿಡುಗಡೆ ಮಾಡಲು ಹೊರಟಿ ರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನು ಕೂಡಲೇ ನಿಲ್ಲಿಸಿ ನಮಗೆ ಪ್ರತ್ಯೇಕವಾಗಿ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮಹಾಸಭಾ ಜಿಲ್ಲಾ ಅಧ್ಯಕ್ಷ ಗಂಗಾಧರಪ್ಪ ಮಾತನಾಡಿ, ವಸತಿ ಸೌಲಭ್ಯಕ್ಕೆ ಸರ್ಕಾರ ನಮಗೆ ಹಣ ಬಿಡುಗಡೆ ಮಾಡಿಲ್ಲ. ನಮಗೆ ಹಣ ಬಿಡುಗಡೆ ಮಾಡದಿದ್ದರೆ ಸರ್ಕಾರಕ್ಕೆ ತೊಂದರೆ ಕೊಡುತ್ತೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ಶಂಕರ್, ಚಂದ್ರ, ಕೃಷ್ಣ ಮೂರ್ತಿ, ಮುನಿಯಪ್ಪ, ಶೀಲಾ ಮತಿತರರು ಇದ್ದರು.