Thursday, 12th December 2024

ನೂರಕ್ಕೆ ನೂರಷ್ಟು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ

ಪಿಎಲ್ ಡಿ ಬ್ಯಾಂಕ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿಶ್ವಾಸ

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯವಾಗಿದ್ದು, ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ಕೇಂದ್ರೀ ಕರಿಸುವ0ತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದರು.

ತಾಲೂಕಿನ ಕೊಂಡೇನಹಳ್ಳಿ ಗ್ರಾಮದ ಪಿಎಲ್ ಡಿ ಬ್ಯಾಂಕ್ ನೂತನ ಅಧ್ಯಕ್ಷ ಕಾಳೇಗೌಡ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಅಭಿನಂದಿಸಿ ಮಾತನಾ ಡಿದ ಅವರು, ಸಿದ್ದರಾಮಯ್ಯನವರ ರೀತಿಯಲ್ಲಿ ತಾವು ಸುಳ್ಳು ಹೇಳುವುದಿಲ್ಲ. ಅವರು ಸುಳ್ಳನ್ನು ಗಟ್ಟಿಯಾಗಿ ಹೇಳುತ್ತಾರೆ. ಅವರು ಹೇಳಿದಷ್ಟೂ ಕಾಂಗ್ರೆಸ್ ಹಿಂದೆ ಹೋಗಲಿದೆ. ಹಾಗಾಗಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧವಾಗಿದ್ದು, ಕಾರ್ಯಕರ್ತರು ಯೋಚಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

 ಸಿದ್ದು ಹೇಳಿದ್ದೆಲ್ಲಾ ಉಲ್ಟಾ: ಕಳೆದ ಚುನಾವಣೆ ವೇಳೆ ಸಿದ್ದರಾಮಯ್ಯ ಹೇಳಿದ್ದೆಲ್ಲ ಉಲ್ಟಾ ಆಗಿದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದರು. ಆದರೆ ಇವರೇ ಅವರ ಮನೆ ಬಾಗಿಲಿಗೆ ಹೋಗಿ ಕರೆತಂದು ಮುಖ್ಯಮಂತ್ರಿ ಮಾಡಿದರು. ಬಿ.ಎಸ್. ಯಡಿಯೂರಪ್ಪ ಮುಖ್ಯ ಮಂತ್ರಿ ಆಗುವುದೇ ಇಲ್ಲ ಎಂದರು, ಅದೂ ಆಯಿತು. ಈಗ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ ಅದೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ತಪ್ಪು ಈವರೆಗೂ ಯಾರೂ ಎತ್ತಿ ತೋರಿಸಿರಲಿಲ್ಲ, ಆದರೆ ತಾವು ತೋರಿಸಿದ ಕಾರಣಕ್ಕೆ ಅವರಿಗೆ ಸಿಟ್ಟು ಬಂದಿದೆ. ಆರ್ ಎಸ್ ಎಸ್ ನವರು ಹೇಳಿಸಿದ್ದಾರೆ ಎನ್ನುತ್ತಿದ್ದಾರೆ. ನಮ್ಮ ಪಕ್ಷದವರು ಮಾತಾಡಿಸಿದರೆ ತಪ್ಪೇನು, ಅವರನ್ನೂ ಮಾತನಾಡಿಸುತ್ತಿರುವುದು ಕಾಂಗ್ರೆಸ್ ನವರೇ ಅಲ್ಲವೇ ಎಂದು ತಿರುಗೇಟು ನೀಡಿದರು.

 ಅಧ್ಯಕ್ಷರ ಆಯ್ಕೆ ಕಷ್ಟಕರವಾಗಿತ್ತು: ಈ ಬಾರಿಯ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಕಷ್ಟಕರವಾಗಿತ್ತು, ಇರುವ ನಿರ್ದೇಶಕರೆಲ್ಲರೂ ಆಕಾಂಕ್ಷಿ ಗಳಾಗಿದ್ದರು, ಅಲ್ಲದೆ ಎಲ್ಲರಿಗೂ ಅಧ್ಯಕ್ಷರಾಗುವ ಅರ್ಹತೆ ಇತ್ತು. ಆದರೆ ಕಾಳೇಗೌಡರ ವ್ಯಕ್ತಿತ್ವ, ಆದರ್ಶ ಮತ್ತು ನಾಯಕತ್ವ ಗುಣದಿಂದಲೇ ಅವರನ್ನು ಆಯ್ಕೆ ಮಾಡಲಾಗಿದೆ. ೧೫ ವರ್ಷ ನಿರಂತರವಾಗಿ ಅವರು ಒಂದೇ ವ್ಯಕ್ತಿತ್ವ ಉಳಿಸಿಕೊಂಡಿದ್ದಾರೆ, ಹಾಗಾಗಿ ಅವರನ್ನು ಹುದ್ದೆ ವರಿಸಿದೆ ಎಂದರು.

ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷರಾಗಿ ಅನೇಕ ವರ್ಷಗಳಿಂದ ನಂದಿ ಹೋಬಳಿಯವರೇ ಆಗುತ್ತಿದ್ದರು, ಹಾಗಾಗಿ ಈ ಬಾರಿ ಕಸಬಾ ಹೋಬಳಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಎಲ್ಲರೂ ಸೇರಿದರೆ ಒಗ್ಗಟ್ಟಿನ ಶಕ್ತಿಗೆ ಜಯ ಒಲಿದು ಬರಲಿದೆ. ಪಿಎಲ್ ಡಿ ಬ್ಯಾಂಕ್ ನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ, ನಂದಿ ಭಾಗಕ್ಕೆ ಉತ್ತಮ ರಾಜಕೀಯ ಪ್ರಾತಿನಿಧ್ಯ ನೀಡಲು ಹೆಚ್ಚು ಶ್ರಮಿಸಲಾಗಿದೆ ಎಂದರು.

ಪಿಎಲ್ ಡಿ ಬ್ಯಾಂಕ್  ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸಿದೆ, ದ್ರಾಕ್ಷಿ ತೋಟಗಳು ಉಳಿಯಲು ಈ ಬ್ಯಾಂಕ್ ಕಾರಣ. ಕಳೆದ ೫೦ ವರ್ಷಗಳಲ್ಲಿ ಮಾಡಲಾಗದ ಅಭಿವೃದ್ಧಿ ನಾವು ಐದು ವರ್ಷದಲ್ಲಿ ಮಾಡಿ ತೋರಿಸಲಾಗಿದೆ. ಆಡಳಿತದಲ್ಲಿ ತಾವು ಎಂದೂ ಹಸ್ತಕ್ಷೇಪ ಮಾಡುವುದಿಲ್ಲ, ಸಹಕಾರ ಮಾತ್ರ ಸದಾ ಇರುತ್ತದೆ. ಅಧಿಕಾರ ಬಂದ ಮೇಲೆ ನಮ್ಮ ಕಾರ್ಯಕರ್ತರನ್ನು ಗುರ್ತಿಸಬೇಕು ಎಂಬುದಷ್ಟೇ ತಮ್ಮ ಅಪೇಕ್ಷೆ ಎಂದರು.

ಯಾರು ಎಲ್ಲಿಂದಲಾದರೂ ಬರಲಿ ಯೋಚನೆ ಬೇಡ

ಯಾರು ಎಲ್ಲಿಂದಲಾದರೂ ಬರಲಿ ಯೋಚನೆ ಬೇಡ, ಜನ ಸಾಮಾನ್ಯರು ಈಗಾಗಲೇ ತೀರ್ಮಾನ ಮಾಡಿದ್ದಾರೆ, ಯಾರು ಏನೇ ಆಮಿಷ ತೋರಿದರೂ ಗೆಲ್ಲೋದು ನಾವೇ, ಯಾರು ಏನೇ ನೀಡಲಿ, ಪಡೆದು ಮತ ಮಾತ್ರ ತಮಗೇ ನೀಡಲಿದ್ದಾರೆ. ತಮ್ಮನ್ನು ವಿರೋಧಿಸಿದಷ್ಟೂ ತಮಗೆ ಹೆಚ್ಚು ಮತ ಬರಲಿದೆ, ಸರ್ವೇ ಮಾಡಿಸಿ ಅವರಿಗೆ ಅಭ್ಯಾಸ ಇಲ್ಲ, ಸರ್ವೇ ಮಾಡಿಸಿದರೆ ಗೊತ್ತಾಗಲಿದೆ ಸತ್ಯಾಂಶ ಏನು ಎಂದು ಹೇಳಿದರು.

ಜನ ಸಾಮಾನ್ಯರ ಜೊತೆ ಇರೋಣ

ಕಾರ್ಯಕರ್ತರೇ ನಮ್ಮ ಕುಟುಂಬ, ಅವರೊಂದಿಗೆ ಬೆರೆಯುವುದು ನಮ್ಮ ಕರ್ತವ್ಯ, ಇದರಿಂದ ಪರಸ್ಪರ ವಿಶ್ವಾಸ, ನಂಬಿಕೆ ಹೆಚ್ಚಾಗಲಿದೆ. ಎಲ್ಲರಿಗೂ ಅವಕಾಶ ಸಿಗಲಿದೆ, ಹಿಂದೆ ಮುಂದೆ ಆಗಬಹುದಷ್ಟೇ, ನೀವು ಎಲ್ಲೇ ಇದ್ದರೂ ಪಕ್ಷ ಗಮನಿಸುತ್ತಿರುತ್ತದೆ, ನಿಮ್ಮ ಅರ್ಹತೆಯನ್ನು ಪಕ್ಷ ಗುರ್ತಿಸಿ, ಸೂಕ್ತ ಸ್ಥಾನಮಾನ ಕೊಡಿಸುವ ಜವಾಬ್ದಾರಿ ತಮ್ಮದು. ದೂರದ ಬೆಟ್ಟಗಳನ್ನು ನಂಬಲು ಹೋಗಬೇಡಿ ಎಂದು ಸಚಿವರು ಮನವಿ ಮಾಡಿದರು.

ತಾವು ಈ ಸ್ಥಾನದಲ್ಲಿರುವುದು ನಿಮ್ಮಿಂದ, ತಮಗೆ ಈ ಶಕ್ತಿ ಬಂದಿರುವುದು ನಿಮ್ಮಿಂದ. ಹಾಗಾಗಿ ತಮ್ಮ ಈ ಎಲ್ಲಾ ಶಕ್ತಿ ನಿಮಗೆ, ಇದನ್ನು ಬಳಸಿ ಕೊಂಡು ನೀವು ಬೆಳೆಯಿರಿ, ಅಧಿಕಾರವೇ ಮುಖ್ಯವಲ್ಲ, ಆದರೆ ಪ್ರತಿಯೊಬ್ಬರಿಗೂ ಅಧಿಕಾರ ಸಿಗಲಿದೆ ಎಂದರು.

ಮುಖ್ಯಮಂತ್ರಿಗಳೊAದಿಗೆ ಮಾತನಾಡಿ ಈ ಬಾರಿ ೧೦ ಮಂದಿ ರಾಜ್ಯ ಮಟ್ಟದ ನಿರ್ದೇಶಕರಿಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಎರಡು ಅಧ್ಯಕ್ಷ ಸ್ಥಾನಗಳನ್ನು ಪಡೆಯಲಾಗಿದೆ. ಜಿಪಂ, ತಾಪಂ ಚುನಾವಣೆಗಳು ತಡವಾದ ಕಾರಣ ಕೆಲವರು ಜನಪ್ರತಿನಿಧಿಗಳಾಗಲು ಹಿನ್ನೆಡೆಯಾಗಿದೆ, ವೈಮನಸ್ಸು ಬೇಡ, ಎಲ್ಲರೂ ಒಗ್ಗಟ್ಟಾಗಿ ಮುಂದುವರಿಯೋಣ, ಪರಸ್ಪರ ಚರ್ಚೆ, ವಿಶ್ವಾಸ ಹೆಚ್ಚಾಗಲಿ ಎಂದು ಕೋರಿದರು.

 ಕಾಂಗ್ರೆಸ್ ನಲ್ಲಿ ಬೆರಳೆಣಿಕೆಯಷ್ಟು ನಾಯಕರು

ಕಾಂಗ್ರೆಸ್ ನಲ್ಲಿ ಬೆರಳೆಣಿಕೆಯಷ್ಟು ಮಾತ್ರ ನಾಯಕರಿದ್ದಾರೆ, ಆದರೆ ನಮ್ಮಲ್ಲಿ ನೂರಾರು ಮಂದಿ ನಾಯಕರಿದ್ದಾರೆ. ನೀವು ಇದ್ದ ಕಡೆ ನಿಮ್ಮ ನಾಯಕತ್ವವನ್ನು ನಿರೂಪಿಸಬೇಕು, ರಾಜಕಾರಣ ನಿರಂತರವಾಗಿರುವುದು, ಸರ್ಕಾರದ ಬಗ್ಗೆ ಯಾರೇ ಮಾತನಾಡಲಿ, ನಾಯಕರ ಬಗ್ಗೆ ಮಾತನಾಡಿದರೆ ತೀಕ್ಷ್ಣವಾದ ಉತ್ತರ ನೀಡಬೇಕು, ಯಾವುದೇ ಚುನಾವಣೆಯಲ್ಲಿ ಯಾರೇ ಬರಲಿ ಅಧಿಕಾರ ನಮ್ಮದೇ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 ಎಲ್ಲರಿಗೂ ಅಧಿಕಾರ

ಪ್ರಸ್ತುತ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೩೦ ಗ್ರಾಪಂಗಳಿದ್ದು, ಇದರಲ್ಲಿ ೨೯ ಗ್ರಾಪಂಗಳಲ್ಲಿ ನಮ್ಮ ಪಕ್ಷದವರೇ ಅಧ್ಯಕ್ಷರಾಗಿದ್ದಾರೆ. ಅಧಿಕಾರ ವಿಕೇಂದ್ರೀಕರಣ ಮಾಡೋಣ, ಮುಂದಿನ ಐದು ವರ್ಷದಲ್ಲಿ ಒಬ್ಬರಾದರೂ ಸದನಕ್ಕೆ ಹೋಗುವ ಅವಕಾಶ ಇದೆ, ಅಂತಹ ನಾಯಕರು ನಮ್ಮಲ್ಲಿ ಇದ್ದಾರೆ, ಜೊತೆಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವೂ ಸಿಗಲಿದೆ. ಇದರಿಂದ ಎಲ್ಲರಿಗೂ ಅಧಿಕಾರ ಲಭ್ಯವಾಗಲಿದ್ದು, ಎಲ್ಲರೂ ಒಗ್ಗಟ್ಟಿ ನಿಂದ ಬೆಳೆಯೋಣ ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ರಾಮಸ್ವಾಮಿ, ಪಿ.ಎನ್. ಕೇಶವರೆಡ್ಡಿ, ನಾರಾಯಣಸ್ವಾಮಿ, ಬೈರೇಗೌಡ, ರಾಜಣ್ಣ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.