Thursday, 19th September 2024

ರೈತರಿಗೆ ೬ ಗಂಟೆ ವಿದ್ಯುತ್ ನೀಡದವರು ಉಚಿತವಾಗಿ ೨೦೦ ಯೂನಿಟ್ ಕೊಡುವರೇ?

ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರೆ ಪುನಾರಾಯ್ಕೆ ಮಾಡಿ
ನನಗಿಂತ ಉತ್ತಮವಾಗಿ ಅಭಿವೃದ್ಧಿ ಮಾಡುವ ಅಭ್ಯರ್ಥಿ ಇದ್ದರೆ ಬೆಂಬಲಿಸಿ ಅಭ್ಯಂತರವಿಲ್ಲ
ಹಾರೋಬಂಡೆ ಗ್ರಾಮ ಸಭೆಯಲ್ಲಿ ಉಚಿತ ನಿವೇಶನ ವಿತರಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಚಿಕ್ಕಬಳ್ಳಾಪುರ: ರೈತರಿಗೆ ಸತತ ೬ ಗಂಟೆ ವಿದ್ಯುತ್ ನೀಡಲಾರದವರು ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಸುಳ್ಳು ಹೇಳು ತ್ತಿದ್ದು, ಕಾಂಗ್ರೆಸ್ಸಿಗರ ಸುಳ್ಳಿಗೆ ಮರುಳಾಗದೆ ನಿಮ್ಮ ಭವಿಷ್ಯ ಉಜ್ವಲಗೊಳಿಸುವವರನ್ನು ಆಯ್ಕೆ ಮಾಡಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು.

ತಾಲೂಕಿನ ಹಾರೋಬಂಡೆ ಗ್ರಾಪಂನಲ್ಲಿ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿ ಮಹಿಳೆಗೆ ೨ ಸಾವಿರ ನೀಡುವುದಾಗಿ ಮತ್ತೊಂದು ಸುಳ್ಳನ್ನು ಕಾಂಗ್ರೆಸ್ ಹೇಳುತ್ತಿದೆ. ಇದಕ್ಕಾಗಿ ವಾರ್ಷಿಕ ೨೪ ಸಾವಿರ ಕೋಟಿ ಹಣದ ಅಗತ್ಯವಿದ್ದು, ಇದನ್ನು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೊಂದಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಅಲ್ಲದೆ ಪ್ರತಿ ಕುಟುಂಬದ ಸದಸ್ಯನಿಗೆ ೧೦ ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತಿದೆ. ಈಗಾಗಲೇ ಕಳೆದ ಮೂರು ವರ್ಷದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ೧೦ ಕೆಜಿ ಅಕ್ಕಿ ನೀಡಲಾಗುತ್ತಿದೆ. ಮತ್ತೆ ಅವರೇನು ಹೊಸದಾಗಿ ನೀಡುವುದು ಎಂದರು.

ಸುಳ್ಳು ಹೇಳಿ ಮತ ಪಡೆಯಬಾರದು

ಸುಳ್ಳು ಹೇಳಿ ಮತ ಪಡೆಯಬಾರದು, ನಾನು ಎಂದೂ ವೋಟಿಗಾಗಿ ಸುಳ್ಳು ಹೇಳಿಲ್ಲ. ನನ್ನ ಸೇವೆ ನಿಮ್ಮ ಮನೆಗೆ ಮುಟ್ಟಿದ್ದರೆ ಮಾತ್ರ ನನಗೆ ಆಶೀರ್ವಾದ ಮಾಡಿ, ನನಗಿಂತ ಉತ್ತಮರು ಸಿಕ್ಕಿದರೆ ಅವರನ್ನು ಆಯ್ಕೆ ಮಾಡಿ ಇದು ತಮ್ಮ ಈ ಬಾರಿಯ ಪ್ರಚಾರ ವಾಕ್ಯವಾಗಿದ್ದು, ತಮಗೇ ಮತ ನೀಡಿ ಎಂದು ಕೇಳುವುದಿಲ್ಲ, ನಿಮ್ಮ ಪ್ರೀತಿ, ವಿಶ್ವಾಸ ಗಳಿಸಿದ್ದರೆ ಮಾತ್ರ ನನಗೆ ಮತ ನೀಡಿ, ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರೆ ಮಾತ್ರ ಮತ ನೀಡಿ ಎಂದು ಸಚಿವರು ಹೇಳಿದರು.

ಕೆಲವು ಜಿಲ್ಲೆಗಳಲ್ಲಿ ಇಂದಿಗೂ ವೈದ್ಯಕೀಯ ಕಾಲೇಜು ಇಲ್ಲ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ವೈದ್ಯಕೀಯ ಕಾಲೇಜು ಮುಂದಿನ ತಿಂಗಳು ಉದ್ಘಾಟನೆಯಾಗಲಿದೆ. ಇದರೊಂದಿಗೆ ಮತ್ತೊಂದು ವೈದ್ಯಕೀಯ ಕಾಲೇಜನ್ನು ಜಿಲ್ಲೆಗೆ ತರಲಾಗಿದೆ ಎಂದರು.

೪೩೫ ಉಚಿತ ನಿವೇಶನ ವಿತರಣೆ

ಈ ಹಿಂದೆ ಇಲ್ಲಿ ಸಂಸದರಾಗಿದ್ದವರು ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ವಂತಕ್ಕೆ ಮಾಡಿಕೊಂಡರು, ಆದರೆ ಅವರು ಪ್ರತಿನಿಧಿಸಿದ ಕ್ಷೇತ್ರಕ್ಕೆ ಅವರು ಯಾವುದೇ ಕೊಡುಗೆ ನೀಡಲಿಲ್ಲ. ಈಗ ಅಂತಹವರು ಮತ ಕೇಳಲು ಬರುತ್ತಿದ್ದಾರೆ ಎಂದು ಪರೋಕ್ಷವಾಗಿ ಆರ್.ಎಲ್. ಜಾಲಪ್ಪ ಅವರ ಸಂಬAಧಿ ವಿನಯ್  ಶಾಮ್ ವಿರುದ್ಧ ಕಿಡಿ ಕಾರಿದರು.

ತಾವು ಶಾಸಕರಾದ ನಂತರ ಜಿಲ್ಲೆಗೆ ಎರಡು ವೈದ್ಯಕೀಯ ಕಾಲೇಜು ತಂದಿದ್ದೇನೆ, ನಾವು ಹೇಳಿದಂತೆ ನಡೆದುಕೊಳ್ಳಬೇಕು, ಇಲ್ಲವಾದರೆ ಗೌರವ ಇರಲ್ಲ , ಹಾರಓಬಂಡೆ ಗ್ರಾಪಂನಲ್ಲಿ ೪೩೫ ಕುಟುಂಬಗಳಿಗೆ ಉಚಿತ ನಿವೇಶನ ನೀಡಲಾಗುತ್ತಿದೆ. ಜೊತೆಗೆ ೧೦೦ ಮನೆ ವಿತರಿಸಲಾಗಿದೆ. ಇನ್ನು ಮುಂದೆ ಈ ಗ್ರಾಪಂನಲ್ಲಿ ನಿವೇಶನ ರಹಿತರು ಇರುವುದಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರದ ರೈತ ಸಮ್ಮಾನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ದೇಶದ ಪ್ರತಿ ರೈತನಿಗೆ ೬ ಸಾವಿರ ನೀಡುತ್ತಿದ್ದಾರೆ. ಅದರ ಜೊತೆಗೆ ರಾಜ್ಯ ಸರ್ಕಾರ ೪ ಸಾವಿರ ಸೇರಿಸಿ, ಒಟ್ಟು ೧೦ ಸಾವಿರ ರೂಪಾಯಿಗಳನ್ನು ವರ್ಷಕ್ಕೆ ಪ್ರತಿ ರೈತನಿಗೂ ನೀಡಲಾಗುತ್ತಿದೆ. ಐದು ವರ್ಷಕ್ಕೆ ಉಭಯ ಸರ್ಕಾರಗಳಿಂದ ಒಟ್ಟು ೫೦ ಸಾವಿರ ನೀಡಲಾಗುತ್ತಿದೆ ಎಂದರು.

ಇAದು ವೋಟಿಗಾಗಿ ನಿಮ್ಮ ಮನೆ ಬಾಗಿಲಿಗೆ ಬರುವವರು ನಿಮಗೆ ನೀಡುವ ಹಣ ಮೂರು ದಿನ ಇರುವುದಿಲ್ಲ. ಹಾಗಾಗಿ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ರೂಪಿಸುವ ವ್ಯಕ್ತಿ ಮತ್ತು ಸರ್ಕಾರಗಳಿಗೆ ನೀವು ಬೆಂಬಲಿಸಬೇಕು ಎಂದು ಅವರು ಕೋರಿದರು.

ಕಾರ್ಯಕ್ರಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಶ್ರೀನಿವಾಸ್, ಹಾರೋಬಂಡೆ ಗ್ರಾಪಂ ಅಧ್ಯಕ್ಷೆ ಶಿಲ್ಪಾ ತುಳಸೀದಾಸ್, ಉಪಾಧ್ಯಕ್ಷ ನರಸಿಂಹಮೂರ್ತಿ, ರಾಮಣ್ಣ, ವೆಂಕಟೇಶ್, ಚಂದ್ರಣ್ಣ, ಮರಸನಹಳ್ಳಿ ಬಾಬು, ಸಂತೋಷ್, ವೆಂಕಟಾಚಲಪತಿ, ಮುನಿಸ್ವಾಮಿ, ಮನೋಹರ್, ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.