Saturday, 26th October 2024

ಪ್ರವಾಸಿ ತಾಣವಾಗಿ ಬದಲಾದ ಆದಿಯೋಗಿ ಈಶಾ ಕೇಂದ್ರ : ಟ್ರಾಫಿಕ್ ಜಾಮ್ ಜಾಮ್ ಕಿರಿಕಿರಿ

ದುಬಾರಿ ಪಾರ್ಕಿಂಗ್ ಸುಂಕ : ಪ್ರವಾಸಿಗಳ ದಾಳಿಗೆ ರೈತರ ಬದುಕು ಹೈರಾಣ

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ : ಜನವರಿ ೧೫ರಂದು ಸಾರ್ವಜನಿಕ ದರ್ಶನಕ್ಕೆ ಮುಕ್ತವಾಗಿ ತೆರೆದು ಕೊಂಡಿರುವ ಕರ‍್ನಹಳ್ಳಿ ಬೆಟ್ಟದ ತಪ್ಪಲ ಸದ್ಗುರು ಜಗ್ಗಿ ವಾಸುದೇವ್ ಒಡೆತನದ ಈಶಾ ಫೌಂಡೇಷನ್ ಧ್ಯಾನ ಕೇಂದ್ರವು ಕೆಲವೇ ವಾರಗಳಲ್ಲಿ ಪ್ರವಾಸಿ ತಾಣವಾಗಿ ಬದಲಾಗಿದೆ.ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿಯದಿದ್ದರೂ ಕೂಡ ಇಲ್ಲಿ ಭೇಟಿ ಕೊಡುತ್ತಿರುವ ಪ್ರವಾಸಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾರಾಂತ್ಯದಲ್ಲಿಯ0ತೂ ಸ್ಥಳೀಯ ಗ್ರಾಮಸ್ಥರಿಗೆ ಪಾರ್ಕಿಂಗ್ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಜೀವ ಕೈಲಿಡಿದು ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಇದಕ್ಕೆ ಯಾರನ್ನು ದೂರಬೇಕು ಎನ್ನುವುದು ತಿಳಿಯದೆ ಜನತೆ ಕಂಗಾಲಾಗಿದ್ದಾರೆ.

ಚಿಕ್ಕಬಳ್ಳಾಪುರಕ್ಕೆ ಹೆಮ್ಮೆ
ಹೈಟೆಕ್ ಸದ್ಗುರು ಎಂದೇ ಜನಪ್ರಿಯರಾಗಿರುವ ಜಗ್ಗಿ ವಾಸುದೇವ್ ತನ್ನ ವಿಶ್ವವ್ಯಾಪಿ ಜಾಲದ ಫಲಿತವಾಗಿ ಚಿಕ್ಕಬಳ್ಳಾಪುರದಿಂದ ಕೇವಲ ೧೦ ಕಿಲೋಮೀಟರ್ ದೂರದಲ್ಲಿ ನಂದಿ ಬೆಟ್ಟಕ್ಕೆ ಸಾವಯವ ಸಂಬAಧ ಹೊಂದಿರುವ ಕವರ್ನಬೆಟ್ಟ ಕಣಿವೆಗಳ ಇಳಿಜಾರಿನ ವಿಶಾಲ ತಪ್ಪಲಿನಲ್ಲಿ ನಿರ್ಮಿಸಿರುವ ೧೧೨ ಅಡಿ ಎತ್ತರದ ಆದಿಯೋಗಿ ಮೂರ್ತಿ,ನಾಗದೇವಾಲಯ  ಅತ್ಯಂತ ಕಡಿಮೆ ಅವಧಿಯಲ್ಲಿ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಇದರಿಂದಾಗಿ ಸ್ಥಳೀಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎನ್ನುವುದು ಸ್ಥಳೀಯರ ಅನಿಸಿಕೆಯಾದರೆ ಇಲ್ಲಿನ ಶಾಸಕ, ಆರೋಗ್ಯ ಸಚಿವ ಸುಧಾಕರ್ ದೃಷ್ಟಿಯಲ್ಲಿ ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಹೆಮ್ಮೆಯಾಗಿದೆ.

ಆಧ್ಯಾತ್ಮ ಕೇಂದ್ರ
ಈಶಾ ಸಂಸ್ಥೆಯ ಪ್ರಕಾರ ಇದೊಂದು ವಿಶ್ವಪ್ರಸಿದ್ಧ ಆಧ್ಯಾತ್ಮ ಕೇಂದ್ರ.ಆದರೆ ಇಲ್ಲಿಗೆ ಬಂದು ಹೋಗುತ್ತಿರುವ ಪ್ರವಾಸಿಗರನ್ನು ಗಮನಿಸಿದರೆ ಇದು ನಿಜವೇ ಎಂಬ ಅನುಮಾನದ ಜತೆಗೆ ಬೆಂಗಳೂರಿನ ಟೆಕ್ಕಿಗಳು,ಶ್ರೀಮಂತ ಉಧ್ಯಮಿಗಳು,ಹೊರರಾಜ್ಯಗಳಿಂದ ಬರುವ ಪ್ರವಾಸಿಗಳು ತಮ್ಮ ಬಿಡುವಿನ ವೇಳೆಯನ್ನು ಕಳೆಯಲು ಬರುವ ಪಿಕ್‌ನಿಕ್ ಅಡ್ಡೆಯಾಗಿದೆಯಾ ಎಂದು ಅನಿಸುತ್ತದೆ.

ಏಕೆಂದರೆ ನಂದಿ ಬೆಟ್ಟಕ್ಕೆ ಬರುವ ಹದಿಹರೆಯದ ಯುವಕರು,ಮೋಜು ಮಸ್ತಿಗೆಂದೇ ಲಕ್ಷಾಂತರ ರೂಪಾಯಿ ಬೈಕು ಕಾರುಗಳಲ್ಲಿ ಬರುವ ಶ್ರೀಮಂತರ ಮಕ್ಕಳು ಅಲ್ಲಿ ಇಲ್ಲಿ ಸುತ್ತಾಡಿ ಕೊನೆಗೆ ಈಶಾ ಕೇಂದ್ರಕ್ಕೆ ಬರುತ್ತಾರೆ. ಇಂತಹವರಿಗೆ ಧ್ಯಾನಕ್ಕಿಂತಲೂ ಸ್ವೇಚ್ಛೆಯೇ ಮುಖ್ಯವೆನಿಸಿದೆ ಕಾರಣ ಈ ಹಾದಿಯ ಇಕ್ಕೆಲಗಳಲ್ಲಿ ಬರುವ ಲಿಂಗಶೆಟ್ಟಿಪುರ,ವಡ್ರೆಪಾಳ್ಯ,ಆವುಲಗುರ್ಕಿ ಗ್ರಾಮಗಳ ರೈತರು ಬೆಳೆದಿರುವ ಹೂವಿನ ತೋಟಗಳಿಗೆ ಲಗ್ಗೆ ಇಟ್ಟು ಪೋಟೋ ಸೆಲ್ಫಿ ತೆಗೆದುಕೊಳ್ಳಲು ದಾಂಗುಡಿ ಯಿಡುತ್ತಿದ್ದು ಬೆಳೆ ಹಾನಿಯಾಗುವ ಭೀತಿಯನ್ನು ಬೆಳೆಗಾರರು ಅನುಭವಿಸುತ್ತಿದ್ದಾರೆ.

ಮೇಲಾಗಿ ಈ ಭಾಗದ ಸುತ್ತಮುತ್ತಲು ನಡೆದಿರುವ ಗಣಿಗಾರಿಕೆಯಿಂದಾಗಿ ಸೃಷ್ಟಿಯಾಗಿರುವ ಆಳದ ಹೊಂಡಗಳಲ್ಲಿ ನೀರು ನಿಂತಿದೆ. ಪ್ರವಾಸಿಗಳು ಬೀತಿಯಿಲ್ಲದೆ ಈಜಾಡಲು ಮುಂದಾಗಿದ್ದು ಅಪಾಯಕ್ಕೆ ಆಹ್ವಾನ ನೀಡಿದೆ. ಮೇಲಾಗಿ ರಸ್ತೆಯ ಬದಿಯಲ್ಲಿಯೇ ನೀರಳ್ಳಗಳು ಇದ್ದರೂ  ಕೂಡ ಈವರೆಗೆ ತಡೆಗೋಡೆಯನ್ನೂ ನಿರ್ಮಿಸದ ಕಾರಣ ವಾಹನ ಸವಾರರು, ಪಾದಚಾರಿಗಳು ಎಚ್ಚರ ತಪ್ಪಿದರೆ ನೀರಿಗೆ ಬೀಳುವ ಸಂಭವ ಅಲ್ಲಗಳೆಯುವಂತಿಲ್ಲ.

ವಾಹನ ದಟ್ಟಣೆ
ಈಶಾ ಧ್ಯಾನಕೇಂದ್ರಕ್ಕೆ ಬಂದು ಹೋಗುವ ವಾಹನಗಳು ಬಿಡುವ ಹೊಗೆ, ದೂಳು ಈ ಭಾಗದ ಹಳ್ಳಿಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ.ವಾರಾಂತ್ಯದಲ್ಲAತೂ ಸಾವಿರಾರು ವಾಹನಗಳು ಸಾಲುಗಟ್ಟಿ ಬರುತ್ತಿರುವುದನ್ನು ಕಂಡು ಸ್ಥಳೀಯರು ಬೆಚ್ಚಿದ್ದಾರೆ.ಶುರುವಿನಲ್ಲೇ ಹೀಗಾದರೆ ಮುಂದೆ ಹೇಗೋ ಎನ್ನುವ ಚಿಂತೆ ಇವರನ್ನು ಕಾಡುತ್ತಿದೆ. ಹೀಗಾಗಿ ಜಿಲ್ಲಾಡಳಿತ ವಾಯುಮಾಲಿನ್ಯ ಶಬ್ದಮಾಲಿನ್ಯ, ವಾಹನ ದಟ್ಟಣೆ ತಡೆಯಲು ಚಿಕ್ಕಬಳ್ಳಾಪುರ ಕೇಂದ್ರ ಬಸ್ ನಿಲ್ದಾಣದಿಂದ ಕರ‍್ನಬೆಟ್ಟದ ಬುಡಕ್ಕೆ ಕಡ್ಡಾಯವಾಗಿ ಸರಕಾರಿ ಬಸ್‌ಗಳ ವ್ಯವಸ್ಥೆ ಮಾಡಿ ಪ್ರವಾಸಿಗಳು ಇದರ ಬಳಕೆ ಮಾಡುವಂತೆ ತಿಳಿಸಿ ಕಾರು ಬೈಕ್ ಸಂಚಾರ ನಿಷೇಧಿಸಬೇಕು. ಇದಾಗದಿದ್ದರೆ ಬೇರೆ ಮತ್ತಿನ್ಯಾವ ಮಾರ್ಗಗಳ ಮೂಲಕ ಈ ಸಮಸ್ಯೆ ನಿವಾರಣೆ ಮಾಡಬಹುದು ಎಂದು ಯೋಚಿಸಿ ಕಾರ್ಯಗತ ಮಾಡುವ ಮೂಲಕ ಸ್ಥಳೀಯರ ಬದುಕನ್ನು ಗೌರವಿಸಬೇಕು ಎನ್ನುವುದು ಈ ಭಾಗದ ಗ್ರಾಮಸ್ಥರ ಆಗ್ರಹವಾಗಿದೆ.

ದುಬಾರಿ ಶುಲ್ಕ ಬೇಡ
ಈಶಾ ಧ್ಯಾನಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಿರುವ ಕಾರಣ ಸದರಿ ಸಂಸ್ಥೆಯವರು ದುಬಾರಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಬೆಂಗಳೂರಿನ ಟ್ಯಾಕ್ಸಿ ಡ್ರೆöÊವರ್ ಮಹೇಶ್ ಅವರ ದೂರಾಗಿದೆ.ಇಲ್ಲಿ ಕಾರಿಗೆ ೫೦,ಟೆಂಪೋ ಟ್ರಾವಲರ್ ವಾಹನಗಳಿಗೆ ೧೦೦ ರೂಪಾಯಿ ಪಡೆಯುತ್ತಿದ್ದಾರೆ.ಆದರೆ ಈಗಷ್ಟೇ ಲೋಕಾರ್ಪಣೆಗೊಂಡು ಪ್ರವಾಸಿಗಳಿಗೆ ಏನೇನೂ ಸೌಲಭ್ಯವಿಲ್ಲದ ಕಡೆ ಹೀಗೆ ವಸೂಲಿ ಮಾಡುವುದು ಸರಿಯಲ್ಲ. ಪೂರ್ಣಪ್ರಮಾಣದಲ್ಲಿ ರಸ್ತೆ, ನೀರು,ನೆರಳು,ಕ್ಯಾಂಟೀನ್,ನಿಲ್ದಾಣ ಮತ್ತಿತರೆ ವ್ಯವಸ್ಥೆ ಕಲ್ಪಿಸಿಕೊಟ್ಟ ನಂತರ ಹಾಕಿದರೆ ಯಾರೂ ಬೆಡ ಎನ್ನುವುದಿಲ್ಲ.ಇದರ ಜನತೆಗೆ ಆವುಲಗುರ್ಕಿ ಗ್ರಾಮಪಂಚಾಯಿತಿ ಕೂಡ ವಾಹನಗಳಿಂದ ಸಂಚಾರಿ ತೆರಿಗೆಯನ್ನು ವಸೂಲಿ ಮಾಡಲು ಮುಂದಾಗಿದೆ.