Sunday, 27th October 2024

ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಜನೆಗೆ ಪೂರಕ: ಕೆ ವಿ ನವೀನ್‌ಕಿರಣ್

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ವಿದ್ಯಾರ್ಜನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸಿನ ಉಲ್ಲಾಸ ಹೆಚ್ಚುತ್ತದೆ ಎಂದು ಪಂಚಗಿರಿ ಮತ್ತು ಕೆ ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ. ವಿ. ನವೀನ್ ಕಿರಣ್ ತಿಳಿಸಿದರು.

ನಗರದ ಹೊರವಲಯ ಕೆ ವಿ ಕ್ಯಾಂಪಸ್ ಇಂಗ್ಲೀಷ್ ಶಾಲೆಯ ವೈಬ್ರೆಂಟ್ ೨೦೨೩ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಕೊರೋನಾ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಯುವಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ವೇದಿಕೆಗಳಾಗಿವೆ. ಶೈಕ್ಷಣಿಕ ಸಾಧನೆಯ ಅತ್ಯುತ್ತಮ ಮೈಲಿಗಲ್ಲನ್ನು ದಾಟುವ ಧ್ಯೇಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣಸಂಸ್ಥೆಗಳು ಚಿಕ್ಕಬಳ್ಳಾಪುರವನ್ನು ಶಿಕ್ಷಣಕಾಶಿಯಾಗಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ. ಇದರ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿ. ಸಿ. ವಿ. ವೆಂಕಟರಾಯಪ್ಪರವರ ದೂರದರ್ಶಿತ್ವದ ಫಲವಾಗಿ ಗ್ರಾಮಾಂತರ ಪ್ರದೇಶದ ಮಕ್ಕಳು ಈ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದ ವಿದ್ಯಾರ್ಜನೆ ಗಳಿಸುವಂತಾಗಿದೆ ಎಂದರು.

ಮುಖ್ಯ ಅತಿಥಿ ಡಾ.ಚಿನ್ನಿಪುರಿಯಾಕೋಸ್ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಕುರಿತು ಸುದೀರ್ಘವಾಗಿ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ನೂತನ ಶಿಕ್ಷಣ ನೀತಿಯ ಬಗ್ಗೆ ಪೋಷಕರು ಆತಂಕಗೊಳ್ಳುವ ಅಗತ್ಯವಿಲ್ಲವೆಂದ ಅವರು ಪೋಷಕರು ತಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಗೆ ನಿರಂತರವಾಗಿ ಭೇಟಿ ನೀಡುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ. ಕೆ.ವಿ.ಇಂಗ್ಲೀಷ್ ಶಾಲೆಯ ಗುಣಮಟ್ಟವು ಬೆಂಗಳೂರಿನ ಯಾವ ಪ್ರತಿಷ್ಠಿತ ಶಾಲೆಗೂ ಕಡಿಮೆಯಿಲ್ಲದಂತೆ ಅತ್ಯುತ್ತಮವಾಗಿದೆ ಎಂದು ತಿಳಿಸಿದರು.

ನೆನಪಿರಲಿ ಚಿತ್ರ ಖ್ಯಾತಿಯ ಜನಪ್ರಿಯ ನಟ ಪ್ರೇಮ್ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲೆ ಎಂಬಂತೆ ಗ್ರಾಮೀಣ ಭಾಗದಲ್ಲಿ ಇಂತಹ ವಿಶಾಲ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕೆ.ವಿ.ನವೀನ್ ಕಿರಣ್ ಮತ್ತು ತಂಡಕ್ಕೆ ಅಭಿನಂದನೆಗಳು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ತಮವಾದ ಭವಿಷ್ಯವನ್ನು ಕಟ್ಟಿಕೊಳ್ಳಬೇಕಾದರೆ ಗುರುಹಿರಿಯರ ಮಾರ್ಗ ದರ್ಶನ ಮುಖ್ಯ. ಓದುವ ಸಮಯದಲ್ಲಿ ಆಸೆ ಆಕಾಂಕ್ಷೆ ಗಳನ್ನು ಬದಿಗೊತ್ತಿ ಗುರಿಯತ್ತ ಸಾಗಿದರೆ ಸಾಧಕರ ಸಾಲಿನಲ್ಲಿ ನಿಲ್ಲಬಹುದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನಸ್ಸನ್ನು ಸೂರೆಗೊಂಡವು. ಈ ವೇಳೆ ದತ್ತಿಗಳ ಸದಸ್ಯ ಬಿ.ಮುನಿಯಪ್ಪ, ನಿರ್ಮಲಾ ಪ್ರಭು, ಸುಜಾತ ನವೀನ್‌ ಕಿರಣ್ ಉಪಸ್ಥಿತರಿದ್ದರು.