ಮಾನವೀಯತೆ ಎತ್ತಿಹಿಡಿದು ನೆರವಿಗೆ ಧಾವಿಸುವುದೇ ಸರಕಾರ- ಸಚಿವ ಸಂಪುಟ ????
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ: ೭೨ ಮಂದಿ ಬಗರ್‌ಹುಕುಂ ಸಾಗುವಳಿದಾರರು ನಾಲ್ಕೈದು ದಶಕದಿಂದ ಅನುಭವದಲ್ಲಿರುವ ೪೦ ಎಕರೆ ಭೂಮಿಯನ್ನು ಏಕಾಏಕಿ ನಗರವ್ಯಾಪ್ತಿಗೆ ಸೇರಿಸಿ ರೈತರನ್ನು ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಹೊರಟಿದೆ.ಕೃಷಿ ಭೂಮಿಯಲ್ಲಿ ನಿವೇಶನ ಮಾಡಲು ಹೊರಟ ಈ ಪ್ರಕರಣವು ಶಾಸಕಾಂಗ ನ್ಯಾಯಾಂಗ ಕಾರ್ಯಾಂಗದ ನಡುವೆ ಯಾರು ಜನಪರ ಯಾರು ಜನವಿರೋಧಿ ಎನ್ನುವ ಜಿಜ್ಞಾಸೆಗೆ ಎಡೆ ಮಾಡಿಕೊಟ್ಟಿದೆ.ಜತೆಗೆ ಕಾಯ್ದೆ ನೆಪದಲ್ಲಿ ನಿರ್ಗತಿಕ ರಾಗುವ ರೈತಾಪಿಗಳ ಬದುಕಿಗೆ ಮರುಹುಟ್ಟು ನೀಡಲು ಸಚಿವ ಸಂಪುಟ ವಿಶೇಷ ಪ್ರಕರಣವೆಂದು ಪರಿಗಣಿಸುವ ಅಗತ್ಯವಿದೆ.
ಏನಿದು ಪ್ರಕರಣ?: ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಪಂಚಾಯ್ತಿ ಕಳವಾರ ಗ್ರಾಮದ ಬೆಟ್ಟದ ಕಣಿವೆಯಲ್ಲಿ ದಲಿತರೇ ಹೆಚ್ಚಾಗಿರುವ ೭೨ ಮಂದಿ ರೈತಾಪಿಗಳು ಕಲ್ಲುಬಂಡೆಗಳ ನಡುವೆ ಭೂಮಿಯನ್ನು ಸಮತಟ್ಟು ಮಾಡಿಕೊಂಡು ನಾಲ್ಕೈದು ದಶಕಗಳಿಂದ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ.
ಅಂದಿನಿಂದ ಈವರೆಗೆ ತಮ್ಮ ಹೆಸರಿಗೆ ಸಕ್ರಮೀಕರಣ ಮಾಡಿಸಿಕೊಳ್ಳಲು ಫಾರಂ ೫೩ ಅನ್ನು ಹಾಕಿಕೊಂಡು ಬೇತಾಳ ಕಾದಂತೆ ಕಾದಿದ್ದಾರೆ. ಆದರೆ ಬಂದ ಯಾವೊಂದು ಸರಕಾರ, ಜನಪ್ರತಿನಿಧಿಗಳು ಇವರಿಗೆ ದಾರಿತೋರಿಸಲೇ ಇಲ್ಲ. ಬದಲಿಗೆ ೧೯,೧೧,೨೦೨೧ ರಂದು ಭೂಸಕ್ರಮೀಕರಣ ಸಮಿತಿ ಸಭೆ ನಡೆಸಿ ನೀವು ಅನುಭವದಲ್ಲಿರುವ ಭೂಮಿಯು ಟೌನ್‌ಲಿಮಿಟ್‌ಗೆ ಸೇರುವ ಕಾರಣ ಮಂಜೂರು ಮಾಡಲು ಬರುವುದಿಲ್ಲ ಎಂದು ಹೇಳಿ ಫಾರಂ ೫೩ ವಜಾಗೊಳಿಸಿದೆ. ಅಸಲಿ ವಿಷಯವೆಂದರೆ ಇಲ್ಲಿ ನಿವೇಶನ ಗಳನ್ನು ಮಾಡುವ ಉದ್ದೇಶದಿಂದಲೇ ಸಚಿವರ ಆದೇಶದಂತೆ ತಾಲೂಕು, ಜಿಲ್ಲಾಡಳಿತ ಕಾನೂನ ಕಟ್ಟಳೆ ಮುಂದಿಟ್ಟು ತನ್ನಾಟವನ್ನು ಆಡಿದೆ ಎನ್ನುವುದು ೫೩ ಅರ್ಜಿ ಹಾಕಿದ ೭೨ ರೈತರ ಆರೋಪವಾಗಿದೆ.
ಹೈಕೋಟ್ ಆದೇಶ: ತಾಲೂಕು ಕಂದಾಯ ಇಲಾಖೆ ಭೂಸಕ್ರಮೀಕರಣ ಸಮಿತಿ ಆದೇಶ ಪ್ರಶ್ನಿಸಿ ೭೨ ಮಂದಿಯ ಪೈಕಿ ೮ ಮಂದಿ ಮಾತ್ರ ಡಬ್ಲೂö್ಯ,ಪಿ.ನಂ ೪೬೭೧೭-೪೬೭೨೦/ ೨೦೧೯ರಂತೆ ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಇದನ್ನು ವಿಚಾರಣೆ ಗೆ ಕೈಗೆತ್ತಿಕೊಂಡ ನ್ಯಾಯಾಲಯವು ನಮೂನೆ ೫೩ರಲ್ಲಿ ಸಲ್ಲಿಸಿರುವ ಎಲ್ಲಾ ಅರ್ಜಿದಾರರ ಮನವಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ೩ ತಿಂಗಳೊಳಗೆ ಇತ್ಯರ್ಥಪಡಿಸುವುದು ಎಂದು ತಾಲೂಕು ದಂಡಾಧಿಕಾರಿಗಳಿಗೆ ಸೂಚಿಸಿ ೧೯,೧೧,೨೦೧೯ ರಂದು ಆದೇಶ ನೀಡಿದೆ.
ಪಾಲನೆಯಾಗದ ಆದೇಶ: ಉಚ್ಛನ್ಯಾಯಾಲಯದ ಆದೇಶದಂತೆ ದಿನಾಂಕ ೧೮,೯.೨೦೨೧ ರಂದು ಭೂ ಸಕ್ರಮೀಕರಣ ಸಮಿತಿ ಸಭೆ ನಡೆಸಿ ತೆಗೆದುಕೊಂಡ ತೀರ್ಮಾನದಂತೆ ಕಳವಾರ ಗ್ರಾಮದ ೭೨ ಮಂದಿ ಸಾಗುವಳಿದಾರರು ಅನುಭವದಲ್ಲಿರುವ ಭೂಮಿ ಯು ನಗರ ವ್ಯಾಪ್ತಿಗೆ ಹೊಂದಿಕೊಂಡಿದ್ದು ೫ ಕಿ.ಮಿ.ವ್ಯಾಪ್ತಿ ಒಳಗೆ ಬರುವ ಕಾರಣ ಸರಕಾರದ ಸುತ್ತೋಲೆ ಮತ್ತು ಭೂ ಕಂದಾಯ ಕಾಯ್ದೆ ನಿಯಮಾವಳಿಯಂತೆ ಮಂಜೂರು ಮಾಡಲು ಅವಕಾಶವಿಲ್ಲದಿರುವ ಕಾರಣ ೭೨ ಅರ್ಜಿಗಳನ್ನು ವಿಲೇಗೊಳಿಸ ಲಾಗಿರುತ್ತದೆ. ಅಲ್ಲದೆ ದಿಶಾಂತ್ ತಂತ್ರಾಂಶದಂತೆ ನಗರಸಭೆ ವ್ಯಾಪ್ತಿಯಿಂದ ಕಳವಾರ ಗ್ರಾಮವು ೩.೨೨ ಕಿ.ಮಿ. ಅಂತರದಲ್ಲಿ ಕಂಡು ಬರುವ ಕಾರಣ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ೯೪ಎ ಅನ್ವಯ ನಗರವ್ಯಾಪ್ತಿಗೆ ಬರುವಂತಹ ಯಾವುದೇ ಜಮೀನನ್ನು ಮಂಜೂರು ಮಾಡಲು ಬರುವುದಿಲ್ಲ.
ಹೀಗಾಗಿ ೫೩ ಅರ್ಜಿ ಪರಿಗಣನೆಗೆ ಸೂಕ್ತವಲ್ಲವೆಂದು ತೀರ್ಮಾನಿಸಿ ತಿರಸ್ಕರಿಸಲಾಗಿದೆ ಎಂದು ಹಿಂಬರಹ ನೀಡಿದ್ದಾರೆ. ಇಲ್ಲಿ ಕೋರ್ಟಿನ ಆದೇಶವನ್ನು ಕಾನೂನಿಗೆ ಬಲಿ ನೀಡಿರುವುದು ಎದ್ದು ಕಾಣುತ್ತಿದೆ. ಇದೇ ನಿಜವಾದರೆ ಜೀವ ಮತ್ತು ಜೀವನ ಏನಾಗ ಬೇಕು ಎಂಬುದನ್ನು ಸಮಿತಿ ಮತ್ತು ಅಧಿಕಾರಿಗಳು ಕ್ಷಣವೊತ್ತು ಚಿಂತನೆ ಮಾಡಬೇಕಿತ್ತು. ಯಾರೇ ಆಗಲಿ ಮತ್ತೊಮ್ಮೆ ದೊಡ್ಡ ಮನಸ್ಸು ಮಾಡಿ ನ್ಯಾಯ ನೀಡಲಿ ಎನ್ನುವುದು ರೈತಾಪಿಗಳ ಆರ್ಥನಾದವಾಗಿದೆ.
ಎಚ್ಚರ ಬೇಕಿತ್ತು?
೪೦-೫೦ ವರ್ಷಗಳಿಂದ ಯಾವುದೇ ತಂಟೆ ತಗಾದೆಯಿಲ್ಲದೆ ತಾವಾಯಿತು ತಮ್ಮ ಪಾಡಾ ಯಿತು ಎಂಬ0ತೆ ನಿರುಮ್ಮಳವಾಗಿ ಉಳುಮೆ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ೭೨ ಕುಟುಂಬಗಳಿಗೆ ಬಡಸಿಡಿಲಿನಂತೆ ಎರಗಿ ಜೀವ ಹಿಂಡುತ್ತಿದೆ ಅರ್ಬನ್ ಲಿಮಿಟ್ ಎಂಬ ಗುಮ್ಮ.ತಾಲೂಕು ಕಂದಾಯ ಇಲಾಖೆ, ಭೂ ಮಜೂರಾತಿ ಸಮಿತಿ ನಿಯಮಿತ ವಾಗಿ ಸಭೆಗಳನ್ನು ನಡೆಸಿ ಸಕಾಲದಲ್ಲಿ ಸಾಗುವಳಿ ಚೀಟಿ ನೀಡಿದ್ದಿದ್ದರೆ ಈಗಿನಂತೆ ಇವರು ಅರ್ಬನ್ ಲಿಮಿಟ್ ಹೆಸರಿನಲ್ಲಿ ಭೂಮಿ ಕಳೆದುಕೊಂಡು ನಿರ್ಗತಿಕರಾಗಿ ಬೀದಿಗೆ ಬೀಳುವ ಪರಿಸ್ಥಿತಿ ಬರುತ್ತಿರಲಿಲ್ಲ.ತಪ್ಪನ್ನು ತಾವು ಮಾಡಿ ಶಿಕ್ಷೆಯನ್ನು ಅಸಹಾಯಕ ರೈತಾಪಿ ವರ್ಗಕ್ಕೆ ನೀಡುವುದು ಅನ್ಯಾಯ.ಇದು ಸರಕಾರಕ್ಕಾಗಲಿ ಜಿಲ್ಲಾಡಳಿತಕ್ಕಾಗಲಿ ಸಚಿವರಗಾಗಲಿ ಶೋಭೆ ತರುವುದಿಲ್ಲ ಎಂಬುದನ್ನು ಅರಿತು ನ್ಯಾಯದಾನಕ್ಕೆ ಮುಂದಾಗ ಬೇಕಿದೆ.
ನೆರವಿಗೆ ಧಾವಿಸಲಿ
ಭೂಮಿ ಬೆವರು ನಂಬಿ ಬದುಕಿ ಇಂದು ಅಸಹಾಯಕರಾಗಿರುವ ರೈತಾಪಿ ನೆರವಿಗೆ ಶಾಸಕಾಂಗ ಬರುವ ಅಗತ್ಯವಿದೆ.ಕಾನೂನು ಕಟ್ಟಳೆಗಳನ್ನು ಮುಂದು ಮಾಡಿ ಅರಣ್ಯನ್ಯಾಯ ಮಾಡುವುದು ಬೇಡ.ಏಕೆಂದರೆ ಈ ಭೂಮಿಯನ್ನು ಬಿಟ್ಟು ತುಂಡುಭೂಮಿ ಯೂ ಇಲ್ಲದ ೬೦ಕ್ಕೂ ಹೆಚ್ಚು ಕುಟುಂಬಗಳು ದಲಿತರವು.ಹೀಗಾಗಿ ಚುನಾವಣೆ ಹೊತ್ತಾಗಿರುವ ಕಾರಣ ಸರಕಾರ ಮತ್ತು ಸಚಿವ ಸಂಪುಟ ಇದನ್ನು ವಿಶೇಷ ಪ್ರಕರಣವೆಂದು ಭಾವಿಸಬೇಕು. ಒಕ್ಕಲೆದ್ದು ನಿರ್ಗತಿಕರಾಗಲು ಇವರನ್ನು ಬಿಡದೆ ಈ ಎಲ್ಲಾ ಅಪಸವ್ಯ ಗಳಿಗೆ ಕಾರಣವಾದ ಕಾಯ್ದೆಗೆ ತಿದ್ದುಪಡಿ ಮಾಡಿ ಜೀವ ನೀಡಲಿ ಎನ್ನುವುದು ಪತ್ರಿಕೆಯ ಕಳಕಳಿಯಾಗಿದೆ.
*
ನಾವು ಮುವತ್ತು ನಲವತ್ತು ವರ್ಷಗಳಿಂದ ಬೆಟ್ಟದ ಬುಡದಲ್ಲಿ ಕಲ್ಲು ಮುಳ್ಳು ಎಲ್ಲವನ್ನೂ ಕಳೆದು ಭೂಮಿಯನ್ನು ಹಸನು ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದೇವೆ.ಇದನ್ನು ಬಿಟ್ಟರೆ ಬೇರೆ ಜಮೀನು ಇಲ್ಲದೆ ೬೦ಕ್ಕೂ ಹೆಚ್ಚಿನ ಕುಟುಂಬಗಳಿವೆ.ನಮಗೆ ಭೂಮಿ ಮಂಜೂರಾತಿ ಮಾಡದೆ ಏಕಾಏಕಿ ಇದು ನಗರವ್ಯಾಪ್ತಿಗೆ ಸೇರುತ್ತದೆ ಎಂದು ಅರ್ಜಿ ವಜಾ ಮಾಡಿದ್ದಾರೆ.ಇತ್ತೀಚೆಗೆ ಇಲ್ಲಿಗೆ ಕೆಲವು ಅಧಿಕಾರಿಗಳು ಬಂದ ಇದು ನಗರಸಭೆಗೆ ಸೇರುತ್ತದೆ ಎಂದು ಬೋರ್ಡು ಹಾಕಿ ಹೋಗಿದ್ದಾರೆ.ಬೆಟ್ಟಗುಡ್ಡಗಳ ಸಾಲಿನಲ್ಲಿ ಇವರು ಮನೆಗಳನ್ನು ಮಾಡಲು ಒಕ್ಕಲು ಭೂಮಿ ವಶಪಡಿಸಿಕೊಳ್ಳುವುದು ಯಾವ ನ್ಯಾಯ ಸ್ವಾಮಿ.ದಯವಿಟ್ಟು ಬಡವರ ಹೊಟ್ಟೆಯ ಮೇಲೆ ಒಡೆಯಬೇಡಿ ಒಳ್ಳೆಯದಾಗಲ್ಲ.
ನಾರಾಯಣಸ್ವಾಮಿ ಹಿರಿಯ ನಾಗರೀಕರು ಕಳವಾರ
ನಲವತ್ತು ಐವತ್ತು ವರ್ಷಗಳಿಂದ ನಾವು ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದು ಭೂ ಸಕ್ರಮೀಕರಣ ಕೋರಿ ೧೯೯೫- ೯೬ರಲ್ಲಿ ಫಾರಂ ೫೩ ಹಾಕಿಕೊಂಡು ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ.ನಾವು ಅರ್ಜಿ ಹಾಕಿದ ಕಾಲದಿಂದ ೨೦೧೯ರವರೆಗೂ ಸಕ್ರಮೀಕರಣ ಸಭೆಯಲ್ಲಿ ನಮ್ಮ ಅರ್ಜಿಯನ್ನು ತೆಗೆದು ಸ್ಥಳತನಿಖೆ ಮಾಡಿ ವಿಲೇ ಮಾಡಲೇ ಇಲ್ಲ.ಈಬಗ್ಗೆ ನಾವು ಕೋರ್ಟಿಗೆ ಹೋದ ನಂತರ ಅವರ ನಿರ್ಧೇಶನ ಪಾಲಿಸುವ ಸಲುವಾಗಿ ೨೦೨೧ರಲ್ಲಿ ಭೂಸಕ್ರಮೀಕರಣ ಸಭೆ ನಡೆಸಿ ನ್ಯಾಯ ನೀಡದೆ ಟೌನ್‌ಲಿಮಿಟ್ ನೆಪವೊಡ್ಡಿ ಅರ್ಜಿ ವಜಾ ಮಾಡಿದ್ದಾರೆ.ನಮಗೆ ಇದನ್ನು ಬಿಟ್ಟರೆ ಬೇರೆ ಜಮೀನೇ ಇಲ್ಲ.ನಾವು ಬಿಕ್ಷೆ ಬೇಡಿ ತಿನ್ನಬೇಕಾದ ಸ್ಥಿತಿ ಬಂದಿದೆ. ದಯವಿಟ್ಟು ನ್ಯಾಯಕೊಡಿ
ಮಧುಸೂಧನ್ ಕಳವಾರ