Saturday, 14th December 2024

ನಮಗೆ ಪ್ರಧಾನಿ ಇದ್ದಾರೆ ನಾವು ಕರೆ ತರುತ್ತೇವೆ’

ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಚಿಕ್ಕಬಳ್ಳಾಪುರ: ನಮಗೆ ಪ್ರಧಾನಿ ಇದ್ದಾರೆ ನಾವು ಕರೆ ತರುತ್ತೇವೆ, ಅವರಿಗೆ ಪ್ರಧಾನಿ ಇದ್ದಾಗಲೂ ಕರೆ ತರುವ ನಾಯಕತ್ವ ಅವರಲ್ಲಿ ಇರಲಿಲ್ಲ. ಅದಕ್ಕೆ ಯಾರು ಹೊಣೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕತ್ ಲೇವಡಿ ಮಾಡಿದರು.

ಪದೇ ಪದೇ ಪ್ರಧಾನಿಯನ್ನು ರಾಜ್ಯಕ್ಕೆ ಕರೆತರಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ಅವರಿಗೆ ಡಮ್ಮಿ ಪ್ರಧಾನಿ ಇದ್ದರು, ಮನಮೋಹನ್ ಸಿಂಗ್ ಅವರಿದ್ದಾಗ ಡಮ್ಮಿ ಮಾಡಿದ್ದರು. ಆಗಲೂ ರಾಹುಲ್ ಗಾಂಧಿ, ಈಗಲೂ ರಾಹುಲ್ ಗಾಂಧಿ ಅವರನ್ನೇ ಕರೆತರುತ್ತಾರೆ, ಪಾಪ ಕರೆತಂದು ರಸ್ತೆ ರಸ್ತೆ ಅಲಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ಮಹಿಳಾ ನಾಯಕಿಯರು ಇಷ್ಟು ಜನ ಇರುವಾಗ ನಾ ನಾಯಕಿ ಎಂದು ಪ್ರಿಯಾಂಕ ಗಾಂಧಿ ಅವರನ್ನು ಯಾಕೆ ಕರೆತಂದರು, ಅವರಿಗೆ ಯಾವ ಸ್ಥಾನಮಾನ ಇದೆ, ಯಾವ ನಾಯಕತ್ವ ಅವರಿಗಿದೆ, ಮೊದಲು ನಿಮ್ಮ ತಟ್ಟೆಯಲ್ಲಿ ಏನಿದೆ ಎಂಬುದನ್ನು ನೋಡಿಕೊಳ್ಳಿ ,ಆಮೇಲೆ ನಮ್ಮ ತಟ್ಟೆ ನೋಡುವಿರಂತೆ ಎಂದು ಕಾಂಗ್ರೆಸ್ ಗೆ ಕಿವಿ ಮಾತು ಹೇಳಿದರು.

ನಮಗೆ ಹೆಮ್ಮೆ ಇದೆ, ವಿಶ್ವ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನಾಯಕರಿದ್ದಾರೆ, ನಮ್ಮದು ರಾಜಕೀಯ ಪಕ್ಷ, ನಮಗೆ ಯಾವುದು ಅನೂಕಲವಾಗಲಿದೆ, ಯಾವುದರಿಂದ ಪೂರಕ ವಾತವರಣ ಆಗಲಿದೆ ಅವರನ್ನು ಕರೆಯಿಸುತ್ತೇವೆ. ಅಮಿತ್ ಶಾ ಅವರಿಂದ ಅನುಕೂಲವಾದರೆ ಅವರನ್ನೂ ಕರೆಸುತ್ತೇವೆ, ಇದು ನಮ್ಮ ಪಕ್ಷದ ನಿಲುವು, ನಿಮ್ಮ ಪಕ್ಷಕ್ಕೆ ನಾವು ಹೇಳುತ್ತಿದ್ದೇವೆಯೇ ಇಂತವರನ್ನು ಕರೆ ತನ್ನಿ, ಇಂತವರನ್ನು ಬೇಡ ಎಂದು ನಿಮ್ಮ ರಾಜಕೀಯ ನೀವು ಮಾಡಿ, ನಮ್ಮ ರಾಜಕೀಯ ನಾವು ಮಾಡುತ್ತೇವೆ ಎಂದರು.

ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನೀರಾವರಿಗೆ ವಿಶೇಷ ಕೊಡುಗೆ ನೀಡಬೇಕು, ನಂದಿಬೆಟ್ಟಕ್ಕೆ ರೋಪ್ ವೇ ಈಗಾಗಲೇ ಮಂಜೂರಾಗಿದೆ, ಹೂ ಬೆಳೆಗಾರರಿಗೆ ಮಾರುಕಟ್ಟೆಗೆ ಮನವಿ ಮಾಡಲಾಗಿದೆ. ಇವೆಲ್ಲವನ್ನೂ ಆಧರಿಸಿ ರೈತರು, ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಪೂರಕವಾದ ಬಜೆಟ್ ನ್ನು ಮುಖ್ಯಮಂತ್ರಿಗಳು ಮಂಡಿಸಲಿದ್ದಾರೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದಾರೆ.