ಭ್ರಷ್ಟಾಚಾರ ಸಾಮಾಜಿಕ ಪಿಡುಗು ನಿವಾರಣೆಗೆ ಬದ್ಧತೆ ಅಗತ್ಯ
ಚಿಕ್ಕಬಳ್ಳಾಪುರ: ಭ್ರಷ್ಟಾಚಾರ ಎಂಬುದು ಸಾಮಾಜಿಕ ಪಿಡುಗಾಗಿದ್ದು ನಿರ್ಮೂಲನೆಯಾಗಲು ಆರೋಗ್ಯವಂತ ಸಮಾಜ ಕಟ್ಟುವ ಬದ್ಧತೆಯುಳ್ಳ ನಾಗರೀಕ ಮನಸ್ಸುಗಳ ಅಗತ್ಯವಿದೆ. ೯ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಷಡಕ್ಷರಿ ನಮ್ಮ ಜಿಲ್ಲೆಯವರು ಎಂದು ಹೇಳಲು ಹೆಮ್ಮೆಯೆನಿಸುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ನಗರದ ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ೪೯.೯೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಸಖಿ ಒನ್ ಸ್ಟಾಪ್ ಸೆಂಟರ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಪಿಡುಗಾಗಿರುವ ಭ್ರಷ್ಟಾಚಾರವನ್ನು ತೊಲಗಿಸಲು ಒಬ್ಬರಿಂದ ಸಾಧ್ಯವಿಲ್ಲ. ಭ್ರಷ್ಟಾಚಾ ರವನ್ನು ಸತತ ಪ್ರಯತ್ನಗಳಿಂದ ಪ್ರತಿಯೊಬ್ಬರೂ ಹಂತ ಹಂತವಾಗಿ ತೊಲಗಿಸಬೇಕು. ಆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಈ ಎರಡೂ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ತೊಲಗಿಸಲು ಅಗತ್ಯವಿರುವ ಆಡಳಿತ ಸುಧಾರಣಾ ಕ್ರಮಗಳನ್ನು ಕೈಗೊಂಡು ಕಳೆದ ಎರಡು ಮೂರು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ದಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ನಂದಿಬೆಟ್ಟಕ್ಕೆ ೮೫ ಕೋಟಿ ರೂಪಾಯಿ ವೆಚ್ಚದ ರೋಪ್ ವೇ, ೨೩ ಸಾವಿರ ಕೋಟಿ ರೂಪಾಯಿ ವೆಚ್ಚದ ಎತ್ತಿನಹೊಳೆ ಯೋಜನೆ, ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಸೌಲಭ್ಯಗಳ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಜಿಲ್ಲೆಯ ಹೊಸ ತಾಲ್ಲೂಕುಗಳಾದ ಚೇಳೂರು ಮತ್ತು ಮಂಚೇನಹಳ್ಳಿಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸರ್ಕಾರ ಬದ್ಧವಾಗಿದೆ. ಚಿಕ್ಕಬಳ್ಳಾಪುರ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ತಿಂಗಳ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಮಂತ್ರಿಗಳಿಂದ ಲೋಕಾರ್ಪಣೆಯಾಗಲಿದೆ ಎಂದರು.
ಷಡಕ್ಷರಿ ನಮ್ಮ ಜಿಲ್ಲೆಯವರು
ಜಿಲ್ಲಾ ಕೇಂದ್ರ ನಂದಿರಂಗ ಮಂದಿರದಲ್ಲಿ ಫೆಬ್ರವರಿ ೨೭,೨೮ರಂದು ನಡೆಯಲಿರುವ ೯ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಉದ್ಯಮಿ ಸಾಹಿತಿ,ವ್ಯಕ್ತಿತ್ವ ವಿಕಸನದ ಗುರು ಎಸ್ ಷಡಕ್ಷರಿ ಅವರಿಗೆ ಜಿಲ್ಲೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.ಅವರು ನಮ್ಮ ಚಿಂತಾಮಣಿ ತಾಲೂಕು ತುಳುವನೂರು ಗ್ರಾಮದವರು.ಉದ್ಯಮಿಯಾಗಿ ಯಶಸ್ಸು ಕಂಡಂತೆ ಸಾಹಿತಿಯಾಗಿಯೂ ಕಂಡಿದ್ದಾರೆ. ಅವರ ಕ್ಷಣವೊತ್ತು ಆಣಿಮುತ್ತು ಪುಸ್ತಕವನ್ನು ನಾನು ಓದಿದ್ದೇನೆ.ಬದುಕಿಗೆ ಸಹ್ಯವಾಗುವ ಅನೇಕ ಸಂಗತಿಗಳು ಇದರಲ್ಲಿವೆ.ನಮ್ಮೂರಿನಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಏನೇನು ನೆರವು ಬೇಕೋ ಅದನ್ನು ಒದಗಿಸುವ ಕೆಲಸ ಮಾಡುವೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಸಿಇಒ ಶಿವಶಂಕರ್, ಡಿಹೆಚ್‌ಒ ಮಹೇಶ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ಧೇಶಕಿ ಅಶ್ವತ್ಥಮ್ಮ, ಮತ್ತಿತರರು ಇದ್ದರು.