Friday, 25th October 2024

ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ಆಡಳಿತಕ್ಕೆ ಬೋಧನಾ ಪ್ರೌಢಶಾಲೆ ಹಸ್ತಾಂತರ

ಚಿಕ್ಕಬಳ್ಳಾಪುರ: ರಾಜ್ಯ ಸರಕಾರವು ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯನ್ನು ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಸುಪರ್ಧಿಗೆ ನೀಡಿ ಆದೇಶ ಹೊರಡಿಸಿದೆ ಎಂದು ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಹೇಳಿದರು.

ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು.

ನಗರಸಭೆಯು ಸಾರ್ವಜನಿಕರ ಉಪಯೋಗಕ್ಕಿಟ್ಟಿದ್ದ ಆಸ್ತಿಯನ್ನು ನವೀನ್ ಕಿರಣ್ ಕಬಳಿಸಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.ಹಾಗೆ ಹೇಳುವವರು ಸೂಕ್ತ ದಾಖಲೆ ನೀಡಿ ಮಾತನಾಡಬೇಕು.ಹೊಟ್ಟೆಕಿಚ್ಚಿನಿಂದ ಆಧಾರರಹಿತವಾಗಿ ಆರೋಪಿಸುವ ಇಂತಹದ್ದಕ್ಕೆ ಉತ್ತರಿಸುವುದಿಲ್ಲ. ಅಪನಂಬಿಕೆಗಳಿಗೆ, ಊಹಾಪೋಹಗಳಿಗೆ ಸರಕಾರವೇ ಆದೇಶದ ಮೂಲಕ ಉತ್ತರ ನೀಡಿದೆ ಎಂದರು.

ಈ ಹಿಂದೆ ಸರಕಾರದ ಅಧಿಕಾರಿಗಳ ತಪ್ಪು ಗ್ರಹಿಕೆ ಮತ್ತು ಮಾಹಿತಿ ಯಿಂದಾಗಿ ಪಂಚಗಿರಿ ಶಿಕ್ಷಣ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟಿದ್ದ ಪಂಚಗಿರಿ ಬೋಧನಾ ಶಾಲೆಯನ್ನು ವಶಪಡಿಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಈಗ ಸರಕಾರದ ಆದೇಶ ದಿಂದಾಗಿ ಪುನಃ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿ ವಶಕ್ಕೆ ಸೇರಿದ್ದು ಆಡಳಿತಾಧಿಕಾರಿ ನೇಮಕವನ್ನು ಹಿಂಪಡೆಯಲಾಗಿದೆ ಎಂದರು.

ಪಂಚಗಿರಿ ಬೋಧನಾ ಶಾಲೆಯು ೧೯೭೪ರಲ್ಲಿ ಆರಂಭವಾಯಿತು. ಇಲ್ಲಿ ೧೫ ಸಾವಿರಕ್ಕೂ ಹೆಚ್ಚು ಮಕ್ಕಳು ಓದಿದ್ದಾರೆ. ಶಾಲೆಯ ೧೦ ಸಾವಿರಕ್ಕೂ ಹೆಚ್ಚು ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ನಿಮ್ಮ ಪ್ರೌಢಶಾಲೆಗೆ ಪುರಸಭೆ ಅಧ್ಯಯನ ಪ್ರೌಢಶಾಲೆ ಎಂದು ಹೆಸರು ಇಟ್ಟುಕೊಳ್ಳಲು ಕಾರಣವೇನು? ಯಾವುದಾದರೂ ಆಧಾರ ಅಥವಾ ಆದೇಶಗಳು ಇವೆಯೇ. ಇದ್ದಲ್ಲಿ ಅವುಗಳ ನಕಲನ್ನು ಸಲ್ಲಿಸಿ ಎಂದು ೧೯೮೪ರಲ್ಲಿ ಚಿಕ್ಕಬಳ್ಳಾಪುರ ಪುರಸಭೆಯು ನಮ್ಮ ಶಿಕ್ಷಣ ಸಂಸ್ಥೆಗೆ ಪತ್ರ ಬರೆದಿತ್ತು. ನಂತರ ಹೆಸರು ಬದಲಿಸಿಕೊಳ್ಳುವಂತೆಯೂ ತಿಳಿಸಿತ್ತು. ನಂತರ ಮುನ್ಸಿಫಲ್ ಎನ್ನುವ ಹೆಸರು ತೆಗೆದು ಪಂಚಗಿರಿ ಎಂದು ಸೇರಿಸಲಾಯಿತು ಎಂದು ವಿವರಿಸಿದರು.

ಪಂಚಗಿರಿ ಬೋಧನಾ ಶಾಲೆಯ ವಿಚಾರವಾಗಿ ಸಚಿವ ಡಾ.ಕೆ.ಸುಧಾಕರ್ ಅವರು ನಮ್ಮ ಜತೆ ಪ್ರತಿ ಹಂತದಲ್ಲಿಯೂ ನಿಂತು ಸಹಕಾರ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಅವರಿಂದಾಗಿ ಕಾನೂನು ಹೋರಾಟದಲ್ಲಿ ನಮಗೆ ಜಯ ದೊರೆತಿದೆ. ಅವರ ನೆರವನ್ನು ಎಂದಿಗೂ ಮರೆಯುವುದಿಲ್ಲ ಎಂದರು

ಹಿರಿಯರಾದ ಮುನಿಯಪ್ಪ ಮಾತನಾಡಿ ಕೆ.ವಿ.ವೆಂಕಟರಾಯಪ್ಪ ಅವರು ಚಿಕ್ಕಬಳ್ಳಾಪುರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದರು. ಆ ಮೂಲಕ ಹಲವರು ಬಾಳಿಗೆ ಬೆಳಕು ನೀಡಿದರು. ಬಡವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ದಿಸೆಯಲ್ಲಿ ಶಾಲೆಯನ್ನು ನಡೆಸಿಕೊಂಡು ಹೋಗಲಾಗುವುದು ಎಂದರು.

ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಸದಸ್ಯರಾದ ನಿರ್ಮಲಾ ಪ್ರಭು, ಮುನಿಯಪ್ಪ, ಇಮ್ರಾನ್ ಖಾನ್, ವಿಜಯಲಕ್ಷ್ಮಿ, ವಿ.ಮಹೇಶ್, ಕೆ.ಆರ್.ಲಕ್ಷ್ಮಣಸ್ವಾಮಿ, ಮುಖ್ಯಶಿಕ್ಷಕ ನಾರಾಯಣಸ್ವಾಮಿ, ಪತ್ರಕರ್ತರಾದ ವೆಂಕಟೇಶ್ ಮತ್ತಿತರು ಗೋಷ್ಠಿಯಲ್ಲಿ ಇದ್ದರು.