Sunday, 27th October 2024

ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಭಾರತ ಬೆಳಗಲಿದೆ: ಡಾ.ರಂಜಿತ್ ಕುಮಾರ್ ಮಂಡಲ್

ಚಿಕ್ಕಬಳ್ಳಾಪುರ: ಶೈಕ್ಷಣಿಕ ಪರಿಸರದಲ್ಲಿ ಬೇಧ ಭಾವ ತೋರದೆ ನಿಜವಾದ ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಭವಿಷ್ಯದ ಭಾರತ ಬೆಳಗಲಿದೆ ಎಂದು ಬಿ.ಜಿ.ಎಸ್ ವರ್ಲ್ಡ್ ಶಾಲೆಯ ಪ್ರಾಂಶುಪಾಲ ಡಾ. ರಂಜಿತ್ ಕುಮಾರ್ ಮಂಡಲ್ ತಿಳಿಸಿದರು.

ಚಿಕ್ಕಬಳ್ಳಾಪುರ ನಗರದ ಹೊರವಲಯ ಬಿ.ಜಿ.ಎಸ್. ವರ್ಲ್ಡ್ ಶಾಲೆಯಲ್ಲಿ ಏರ್ಪಡಿಸಿದ್ದ ಕಲಾವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಮನಸ್ಸು ಆವಿಷ್ಕಾರಗಳ ಗಣಿ. ಪ್ರಾಥಮಿಕ ಹಂತದಲ್ಲಿ ಪೋಷಕರು ಗುರುಹಿರಿಯರು ಮತ್ತು ತಾನು ವಾಸವಿರುವ ಪರಿಸರದಿಂದ ಸಾಕಷ್ಟು ವಿಚಾರಗಳನ್ನು ಮಕ್ಕಳು ಕಲಿಯುತ್ತಾರೆ.

ಹೀಗಾಗಿಯೇ ಮನೆಯೇ ಮೊದಲ ಪಾಠಶಾಲೆ ಎಂದು ಹೇಳಿದ್ದಾರೆ. ಇಂದಿನ ಕಲಾವಸ್ತು ಪ್ರದರ್ಶನ ಗಮನಿಸಿದರೆ ಮಕ್ಕಳ ಮನೋಲೋಕ ಕಲಾಕೃತಿಗಳಲ್ಲಿ ಅರಳಿರುವುದನ್ನು ಕಾಣಬಹುದು. ಇದರ ಹಿಂದೆ ಕೆಲಸ ಮಾಡಿರುವ ಪೋಷಕರು ಮತ್ತು ಗುರುಗಳು ಅಭಿನಂದಿನೆಗೆ ಅರ್ಹರು ಎಂದರು.

ಕಲಾಪ್ರದರ್ಶನದಲ್ಲಿ ಮಕ್ಕಳು ತಯಾರಿಸಿಕೊಂಡು ಬಂದಿದ್ದ ವಿವಿಧ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು. ಕಾರ್ಯಕ್ರಮದಲ್ಲಿ ಶಾಲೆಯ ಉಪಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಾಲಾ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಇದ್ದರು.