Sunday, 15th December 2024

ಒಂದು ತಿಂಗಳು ನೀವು ದುಡಿಯಿರಿ, ಐದು ವರ್ಷ ನಿಮ್ಮ ಸೇವೆ ಮಾಡುವೆ

ವಿಧಾನಸಭಾ ಚುನಾವಣೆ ಕುರಿತು ಸ್ಥಳೀಯ ಮುಖಂಡರ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ

ಚಿಕ್ಕಬಳ್ಳಾಪುರ: ಉಚಿತ ನಿವೇಶನ, ಮನೆ, ರಸ್ತೆ, ಆರೋಗ್ಯ, ನೀರಾವರಿ ಯೋಜನೆಗಳ ಅನುಷ್ಠಾನ, ಸ್ತ್ರೀ ಶಕ್ತಿ ಸಂಘಗಳಿಗೆ ಸಹಕಾರ ಸೇರಿದಂತೆ ಎಲ್ಲ ರೀತಿಯ ಅಬಿವೃದ್ಧಿ ಮಾಡಲಾಗಿದ್ದು, ಸ್ಥಳೀಯ ಮುಖಂಡರು ನನಗಾಗಿ ಒಂದು ತಿಂಗಳು ದುಡಿದರೆ ಮುಂದಿನ ಐದು ವರ್ಷ ನಿಮ್ಮ ಸೇವೆ ಮಾಡುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು.

ತಾಲೂಕಿನ ಮಂಡಿಕಲ್ ಹೋಬಳಿಯಲ್ಲಿ ಬುಧವಾರ ಆಯೋಜಿಸಿದ್ದ ಸ್ಥಳೀಯ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆ ವೇಳೆ ಬಿಜೆಪಿಯೇ ಇಲ್ಲವೆಂದು ಗೇಲಿ ಮಾಡಿದ ಸಂದರ್ಭ ದಲ್ಲಿ ಮಂಡಿಕಲ್ ಹೋಬಳಿಯಿಂದ ಬರೋಬ್ಬರಿ ಏಳೂವರೆ ಸಾವಿರ ಮತಗಳನ್ನು  ಹೆಚ್ಚುವರಿ ಯಾಗಿ ನೀಡಿದ್ದೀರಿ, ಈಗ ಎಲ್ಲ ರೀತಿಯ ಅಭಿವೃದ್ಧಿ ಮಾಡಿ, ನಿಮ್ಮ ಮುಂದೆ ಬಂದಿದ್ದು, ಎಷ್ಟು ಮತ ಅಂತರ ನೀಡಲಿದ್ದೀರಿ ಎಂದು ಸಚಿವರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸ್ಥಳೀಯ ಮುಖಂಡರು ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರ ಕಾಯ್ದು ಕೊಳ್ಳುವುದಾಗಿ ಭರವಸೆ ನೀಡಿದರು.

ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ

ವಿರೋಧಪಕ್ಷಗಳು ತಮ್ಮನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸುತ್ತಿದ್ದು, ಅವರಿಗೆ ಬುದ್ಧಿ ಕಲಿಸುವ ರೀತಿಯಲ್ಲಿ ಪ್ರತಿಯೊಬ್ಬ ಮುಖಂಡರೂ ಶ್ರಮಿಸಬೇಕೆಂದು ಅವರು ಕೋರಿದರು.

ಪ್ರಸ್ತುತ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು, ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಜಿಪಂ, ತಾಪಂ ಸೇರಿದಂತೆ ಸಾಲು ಸಾಲು ಚುನಾವಣೆಗಳು ಬರಲಿದ್ದು, ಸ್ಥಳೀಯ ಮುಖಂಡರು ಇದಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.

 ಜವಾಬ್ದಾರಿ ನಿಮ್ಮ ಹೆಗಲಿಗೆ

ಪ್ರಸ್ತುತ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರ ಹೆಗಲಿಗೆ ನೀಡಲಿದ್ದೇನೆ. ತಮ್ಮನ್ನು ಪ್ರಣಾಳಿಕೆ ಉಸ್ತುವಾರಿಯನ್ನಾಗಿ ಪಕ್ಷ ಜವಾಬ್ದಾರಿ ನೀಡಿದ್ದು, ಇನ್ನು ಮುಂದೆ ತಾವು ಕ್ಷೇತ್ರಕ್ಕೆ ಸೀಮಿತವಾಗದೆ ರಾಜ್ಯದ ಜವಾಬ್ದಾರಿಗಳು ಹೆಚ್ಚಲಿವೆ. ತಾವು ಚಿಕ್ಕಬಳ್ಳಾಪುರಕ್ಕೆ ಮಾತ್ರ ಸೀಮಿತರಾಗಿ ಎನ್ನುವುದಾದರೆ ಅದಕ್ಕೂ ತಾವು ಸಿದ್ಧವಿರುವುದಾಗಿ ಶಾಸಕರು ಘೋಷಿಸುತ್ತಿದ್ದಂತೆ ಮುಖಂಡರು ರಾಜ್ಯ ಮಟ್ಟದಲ್ಲಿ ಬೆಳೆಯುವಂತೆ ಮನವಿ ಮಾಡಿದರು.

ಹಾಗಾಗಿ ಈ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ವಹಿಸಿಕೊಳ್ಳಬೇಕು. ಕ್ಷೇತ್ರಕ್ಕೆ ತಾವು ಬರದಿದ್ದರೂ ನೀವೇ ಶ್ರಮ ಪಟ್ಟು ಕೆಲಸ ನೀವು ಮಾಡುವುದಾದರೆ ತಾವು ರಾಜ್ಯ ಮಟ್ಟದಲ್ಲಿ ಪ್ರಚಾರ ನಡೆಸಲು ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.

 ಮೂರು ಜಿಲ್ಲೆಗಳ ಉಸ್ತುವಾರಿ

ಪ್ರಸ್ತುತ ಚುನಾವಣೆಯಲ್ಲಿ ತಮಗೆ ಮೂರು ಜಿಲ್ಲೆಗಳ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಜವಾಬ್ದಾರಿಯನ್ನು ತಾವು ನೋಡಬೇಕಿದ್ದು, ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಸಮಯದ ತೀವ್ರ ಅಭಾವ ಎದುರಾಗಲಿದೆ. ಆದ್ದರಿಂದ ಸಂಪೂರ್ಣ ಹೊಣೆ ಸ್ಥಳೀಯ ಮುಖಂಡರೇ ಹೊರಬೇಕಿದೆ ಎಂದರು.

ಸ್ಥಳೀಯ ಮುಖಂಡರಲ್ಲಿ ಆಂತರಿಕ ಭಿನ್ನಮತಗಳಿದ್ದರೆ ಸರಿಪಡಿಸುವ ಕೆಲಸವಾಗಬೇಕು, ಮುನಿಸಿಕೊಂಡಿರುವ ಸ್ಥಳೀಯ ಮುಖಂಡರ ಮನವೊಲಿಸುವ ಕೆಲಸವಾಗಬೇಕು, ತಾವೇ ಖುದ್ದಾಗಿ ಅಂತಹ ನಾಯಕರನ್ನು ಮಾತನಾಡಲು  ಸಚಿವರು ಸೂಚಿಸಿದರು.

ಬೂತ್ ಅಭಿಮಾಯನದ ಮೂಲಕ ಪ್ರತಿ ಮುಖಂಡರೂ ಒಂದು ಬೂತಿನ ನೇತೃತ್ವ ವಹಿಸಬೇಕು, ಬೂತಿನಿಂದ ರಾಜ್ಯ, ರಾಜ್ಯದಿಂದ ದೇಶ ಗೆಲ್ಲುವ ಕೆಲಸ ಆಗಬೇಕು, ಪ್ರತಿ ಮನೆಯ ಮೇಲೆ ಬಿಜೆಪಿ ಬಾವುಟ, ಪ್ರತಿ ಮನೆಯ ಬಾಗಿಲಿಗೆ ಬಿಜೆಪಿ ಸ್ಟಿಕ್ಕರ್ ಹಾಕಿಸುವ ಕೆಲಸ ಮಾಡಬೇಕು, ಮೊಬೈಲ್ ಮೂಲಕ ಸದಸ್ಯತ್ವ ನೋಂದಣಿ ನಡೆಯುತ್ತಿದ್ದು, ಪ್ರತಿ ಬೂತಿನಲ್ಲಿ ಸದಸ್ಯತ್ವ ಮಾಡಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಕ್ಷೇತ್ರ, ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ನಮ್ಮ ಸರ್ಕಾರಗಳ ಸಾಧನೆಗಳ ಬಗ್ಗೆ ಕರಪತ್ರಗಳನ್ನು ಪ್ರತಿ ಮನೆಗೆ ವಿತರಿಸುವ ಕೆಲಸವಾಗಬೇಕು, ಜವಾಬ್ದಾರಿ, ಪಕ್ಷದ ಬಗ್ಗೆ ನಿಷ್ಠೆ ಇರುವ ವ್ಯಕ್ತಿಗಳನ್ನು ಪೇಜ್ ಪ್ರಮುಖ್ ಆಗಿ ಆಯ್ಕೆ ಮಾಡಿ ಪ್ರತಿ ಮತದಾರನ ಮನವೊಲಿಸುವ ಕೆಲಸವಾಗಬೇಕು ಎಂದು ಸಚಿವರು ಸೂಚಿಸಿದರು.

 ಪ್ರತಿ ಮನೆಗೂ ಸಮಾಧಾನಕರ ಬಹುಮಾನ

ಇತ್ತೀಚಿಗೆ ನಡೆದ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಕ್ಷೇತ್ರದ ಶೇ.೯೫ ರಷ್ಟು ಮಹಿಳೆಯರು ಭಾಗವಹಿಸಿದ್ದಾರೆ. ಉಳಿದ ಶೇ.೫ ರಷ್ಟು ಮಹಿಳೆಯರು ಮಾತ್ರ ಸ್ಪರ್ಧೆಯಿಂದ ದೂರ ಇದ್ದು, ಕ್ಷೇತ್ರದ ಪ್ರತಿ ಮನೆಗೂ ಸಮಾಧಾನಕರ ಬಹುಮಾನವಾಗಿ ಗ್ಯಾಸ್ ಸ್ಟೌವ್ ವಿತರಿಸಲು ಸಚಿವರು ಸೂಚಿಸಿದರು.

ಸ್ಥಳೀಯ ಮುಖಂಡರು ಪ್ರತಿ ಮನೆಗೆ ತೆರಳಿ ಈ ಬಹುಮಾನ ವಿತರಿಸುವ ಜವಾಬ್ದಾರಿ ವಹಿಸಬೇಕು, ಆ ಮೂಲಕ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಯಕತ್ವವನ್ನು ಸಿದ್ಧಪಡಿಸಿಕೊಳ್ಳಬೇಕು, ಸ್ತ್ರೀ ಶಕ್ತಿ ಸಘಗಳಲ್ಲಿ ಸಕ್ರಿಯವಾಗಿರುವ ಮಹಿಳೆಯರೂ ಇದರಲ್ಲಿ ಭಾಗವಹಿಸಬೇಕು, ಪ್ರತಿ ಗ್ರಾಪಂನಿಂದ ಸ್ಥಳೀಯ ಮುಖಂಡರು ಪ್ರತಿ ವಾರಕ್ಕೊಮ್ಮೆ ಪೇಜ್ ಪ್ರಮುಖ್ ರ ಸಭೆ ನಡೆಸಬೇಕು ಎಂದು ಹೇಳಿದರು.

ಶ್ರೀನಿವಾಸ ಕಲ್ಯಾಣಕ್ಕೆ ವಸ್ತ್ರ

ಮಾ.೫ರಂದು ಭಾನುವಾರ ಸಂಜೆ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ತಿರುಪತಿಯ ಮೆರವಣಿಗೆ ದೇವರನ್ನು ಅಲ್ಲಿನ ಅರ್ಚಕರೇ ತಂದು ಶ್ರೀನಿವಾಸ ಕಲ್ಯಾಣ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರತಿ ಮನೆಯಿಂದ ದಂಪತಿಗಳು ಆಗಮಿಸುವ ವ್ಯವಸ್ಥೆ ಮಾಡಬೇಕು, ವಸ್ತç ಕೊಟ್ಟು ಆಹ್ವಾನ ನೀಡುವ ಕೆಲಸವಾಗಬೇಕು, ಅದೇ ರೀತಿಯಲ್ಲಿ ಫೆ.೧೮ರಂದು ಶಿವೋತ್ಸವ ನಡೆಯಲಿದ್ದು, ಎಲ್ಲರೂ ಆಗಮಿಸಬೇಕು ಎಂದು ಸಚಿವರು ಮನವಿ ಮಾಡಿದರು.