Thursday, 12th December 2024

ನಂದಿಗಿರಿಧಾಮ ಕಾಲುಜಾರಿ ಪ್ರಪಾತಕ್ಕೆ ಬಿದ್ದ ಯುವಕ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪ್ರಸಿದ್ಧ ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದಿದ್ದ ದೊಡ್ಡಬಳ್ಳಾಪುರದ ಮನೋಜ್ ಕುಮಾರ್ ಎಂಬುವವರನ್ನು ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಭಾನುವಾರ ಸುಲ್ತಾನ್ ಪೇಟೆ ಮಾರ್ಗದಲ್ಲಿ ನಂದಿಗಿರಿಧಾಮಕ್ಕೆ ಮೆಟ್ಟಿಲುಗಳ ಮೂಲಕ ಮನೋಜ್ ಹಾಗೂ ಅವರ ಇಬ್ಬರು ಸ್ನೇಹಿತರು ಹತ್ತಿದ್ದಾರೆ. ಈ ಮಾರ್ಗದಲ್ಲಿರುವ ವೀರಭದ್ರೇಶ್ವರ ದೇಗುಲದ ಬಳಿ ಹೋದಾಗ ಮನೋಜ್ ಆಯತಪ್ಪಿ ಜಾರಿ ೮೦ ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ. ತಕ್ಷಣ ಅವರ ಸ್ನೇಹಿತರು ೧೧೨ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮನೋಜ್ ಕುಮಾರ್ ಅವರನ್ನು ರಕ್ಷಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಮನೋಜ್ ಕುಮಾರ್ ಅವರ ಕಾಲಿನ ಮೂಳೆ ಮುರಿದಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ನಂದಿಗಿರಿಧಾಮ ಠಾಣೆ ಪೊಲೀಸರು ತಿಳಿಸಿದ್ದಾರೆ.

೨೦೨೨ರ ಫೆಬ್ರುವರಿಯಲ್ಲಿಯೂ ಇದೇ ರೀತಿಯ ದುರ್ಘಟನೆ ನಡೆದಿತ್ತು. ನಂದಿಗಿರಿಧಾಮದಲ್ಲಿ ೩೦೦ ಅಡಿ ಆಳದ ಪ್ರಪಾತಕ್ಕೆ ಬಿದಿದ್ದ ನಿಶಾಂಕ್ ಎಂಬುವವರನ್ನು ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.