ಚಿಕ್ಕಬಳ್ಳಾಪುರ : ನಗರದ ಸೂರ್ಯ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್‌ನ ಡಾ.ಬಿ.ವಿ. ಮಂಜುನಾಥ್ ಅವರ ಮನೆಯಲ್ಲಿ ಕಳೆದ ೧೬ ವರ್ಷಗಳಿಂದ ಮೈಸೂರು ದರ್ಬಾರ್ ಮಾದರಿ ದಸರಾ ಗೊಂಬೆಪೂಜೆಯ ಆರಾಧನೆ ಮಾಡಿಕೊಂಡು ಬರುತ್ತಿದ್ದು ವರ್ಷ ವರ್ಷೇ ಗೊಂಬೆಗಳ ಸಂಗ್ರಹ ಅಕ್ಷಯವಾಗುತ್ತಾ ಸಾಗಿರುವುದು ವಿಶೇಷ.
ನವರಾತ್ರಿಯ ೯ ದಿನಗಳ ಪರ್ಯಂತ ಮನೆಯಲ್ಲಿ ಬೆಳಿಗ್ಗೆ ಸಂಜೆ ಗೊಂಬೆಗಳ ಪೂಜೆ ಮಾಡುತ್ತಾ ಬಂದಿದ್ದು, ಸಂಜೆಗೆ ಗೊಂಬೆಗಳನ್ನು ನೋಡಲು ಬರುವ ಮುತೈದೆಯರಿಗೆ ಸಿಹಿಯೊಂದಿಗೆ ಹರಿಶಿಣ ಕುಂಕುಮದ ಬಾಗೀನ ಕೊಡುವ ಪದ್ಧತಿ ಇಟ್ಟುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಡಾ.ಬಿ.ವಿ.ಮಂಜುನಾಥ್ ಅವರ ಧರ್ಮಪತ್ನಿ ಶಿಕ್ಷಕಿಯಾದ ಪದ್ಮಾವತಿ ಮಾತನಾಡಿ ನವರಾತ್ರಿ ಹಬ್ಬವು ನಾರೀಶಕ್ತಿಯನ್ನು ಅರಾಧಿಸುವ ಅನಾವರಣಗೊಳಿಸುವ ಹಬ್ಬವಾಗಿದೆ. ಆಧುನಿಕತೆಯಲ್ಲಿ ಕಳೆದುಹೋಗಿರುವ ನಮ್ಮ ಕುಟುಂಬ ವ್ಯವಸ್ಥೆಯನ್ನು ಒಟ್ಟಿಗೆ ಬೆಸೆಯುವ ಹಬ್ಬವಾದ್ದರಿಂದ ಗೊಂಬೆ ಪೂಜೆಗೆ ನಾವು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೇವೆ.
ನಮ್ಮ ಮನೆಯಲ್ಲಿ 200ಕ್ಕೂ ಹೆಚ್ಚು ಗೊಂಬೆಗಳ ಸಂಗ್ರಹವಿದ್ದು ಮೊದಲ ಸಾಲಿನಲ್ಲಿ ನವದುರ್ಗೆಯರ ಗೊಂಬೆ ಗಳಿದ್ದರೆ, ಎರಡನೇ ಸಾಲಿನಲ್ಲಿ ವಿಷ್ಣುವಿನ ಅವತಾರ, ಮೂರನೇ ಸಾಲಿನಲ್ಲಿ ಕೃಷ್ಣಾವತಾರ,ನಾಲ್ಕನೇ ಸಾಲಿನಲ್ಲಿ ರಾಮಾಯಣ,ಕ್ಷೀರಸಾಗರ ಮಂಥನ, ಅಷ್ಟಲಕ್ಷ್ಮೀಯರು, ಶ್ರೀನಿವಾಸ ಕಲ್ಯಾಣ, ಗೌರಿಕಲ್ಯಾಣ, ಪಂಡರಿ ಭಜನೆ, ವಿಶೇಷವಾಗಿ ಪಟ್ಟದ ಗೊಂಬೆ, ಮೈಸೂರು ಅರಮನೆ,ಕರಗದ ಮಾದರಿಗಳನ್ನು ಜೋಡಿಸಲಾಗಿದೆ. ಮನೆಯ ಹೊರಗಿನ ಪಡಸಾಲೆಯಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರ ಗೊಂಬೆಗಳನ್ನು ಪ್ರತಿಷ್ಟಾಪಿಸಿದ್ದು ಮಕ್ಕಳು ಮತ್ತು ಕಿರಿಯರಿಗೆ ಬ್ರಹ್ಮನ ದೇವಾಲಯ ಯಾಕೆ ಇಲ್ಲ, ಪೂಜೆ ಯಾಕೆ ಮಾಡುವುದಿಲ್ಲ ಎಂದು ತಿಳಿಸಿಕೊಡಲಾಗುತ್ತದೆ ಎನ್ನುತ್ತಾರೆ.
ಮೂಲತಃ ಆಂದ್ರಮೂಲದವರಾದ ಡಾ.ಬಿ.ವಿ.ಮಂಜುನಾಥ್ ಅವರ ಮನೆಯಲ್ಲಿ 85 ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿದೆಯಂತೆ. ವೈದ್ಯರಾಗಿ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಆದ ನಂತರ ಇಲ್ಲಿಯೇ ಸ್ವಂತ ಮನೆ ನಿರ್ಮಿಸಿಕೊಂಡು ಪೂರ್ವಿಕರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಾ, ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.