Friday, 25th October 2024

Chikkaballapur Reservoir: ಮೈದುಂಬಿ ಹರಿದ ಜಲಾಶಯಗಳು: ಬಾಗಿನ ಅರ್ಪಣೆಗೆ ನಗರಾಡಳಿತ ಸಿದ್ಧತೆ

ಮುನಿರಾಜು ಎಂ ಅರಿಕೆರೆ

ಕೋಡಿ ನೀರಲ್ಲಿ ಮಿಂದೇಳುತ್ತಿರುವ ಜನತೆ: ಅಪಾಯವಾಗುವ ಮುನ್ನ ಎಚ್ಚರವಹಿಸಬೇಕಿದೆ ಜಿಲ್ಲಾಡಳಿತ

ಚಿಕ್ಕಬಳ್ಳಾಪುರ : ಹಿಂಗಾರು ಮಳೆ ಧಾರಾಕಾರವಾಗಿ ಸುರಿದು ಧರೆಯನ್ನು ತಂಪು ಮಾಡಿದೆ. ರಾಗಿ ಇನ್ನಿತರೆ ಮಳೆ ಯಾಶ್ರಿತ ಬೆಳೆಗಳು ಅತಿಯಾದ ಮಳೆಗೆ ನೆಲಕಚ್ಚುವಂತೆ ಆಗಿದ್ದರೂ,ವಾಣಿಜ್ಯ ಬೆಳೆಗಳಾದ ಹೂವು ಹಣ್ಣು ತರಕಾರಿ ರೇಷ್ಮೆ ಬೆಳೆಗಾರರು ಸಂಕಕಷ್ಟಕ್ಕೆ ಒಳಗಾಗಿದ್ದರೂ ಕೆರೆಕಟ್ಟೆ ಜಲಾಶಯಗಳ ಒಡಲು ಭರ್ತಿಯಾಗಿ ಕೋಡಿ ಹರಿಯುತ್ತಿವೆ.

ಕೋಡಿ ಹರಿಯುವ ಜಲಾಶಯ ಕೆರೆಕಟ್ಟೆಯ ನೀರು ನೋಡಲು ಜನತೆ ತಂಡೋಪ ತಂಡವಾಗಿ ಆಗಿಮಿಸುತ್ತಿದ್ದಾರೆ. ಜನರ ದಾಳಿಯಿಂದ ಅಪಾಯವಾಗುವ ಮುನ್ನ ಜಿಲ್ಲಾಡಳಿತ ಎಚ್ಚರ ವಹಿಸುವ ಅಗತ್ಯವಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಹೌದು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರಿನ ಮೂಲವಾದ ಜಕ್ಕಲಮೊಡಗು ಜಲಾಶಯದ ಒಡಲು ತುಂಬಿರುವುದು ಜನತೆಯ ಸಂತೋಷಕ್ಕೆ ಕಾರಣವಾಗಿದೆ.

ಜಕ್ಕಲಮೊಡಗು ಕೋಡಿ
ಜಲಾಶಯ ಕೋಡಿಹರಿಯುವ ಸಂಗತಿ ತಿಳಿದ ಕೂಡಲೇ ಮಂಗಳವಾರ ಬೆಳ್ಳಂಬೆಳಿಗ್ಗೆ ಇಲ್ಲಿಗೆ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರು ಜಲಾಶಯದ ಒಡಲು ಭರ್ತಿಯಾಗಿರುವುದನ್ನು ಕಣ್ಣಾರೆ ಕಂಡು ಹರ್ಷಗೊಂಡರು.ಈ ವೇಳೆ ಮಾಧ್ಯದವರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಎ.ಗಜೇಂದ್ರ ನಗರಕ್ಕೆ ವರ್ಷಪೂರ್ತಿ ಕುಡಿಯುವ ನೀರನ್ನು ಒದಗಿಸುತ್ತಿರುವ ಜಕ್ಕಲಮೊಡಗು ಜಲಾಶಯ ನಾಲ್ಕು ವರ್ಷಗಳ ಬಳಿಕ ತುಂಬಿರುವುದು ಶುಭಸೂಚನೆಯಾಗಿದೆ.

ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದಾಗಿ ಈ ಜಲಾಶಯ ನಿರ್ಮಾಣವಾಗಿ ಅವಳಿ ನಗರಗಳಿಗೆ ಶುದ್ಧನೀರು ಒದಗಿಸುವಂತಾಗಿದೆ.ಇಲ್ಲಿ ಜಲಾಶಯ ನಿರ್ಮಾಣ ಮಾಡಲು ಈ ಹಿಂದೆ ಯಾರ್ಯಾರು ಹೋರಾಟ ಮಾಡಿದ್ದಾರೋ ,ಶ್ರಮಿಸಿದ್ದಾರೋ ಅಂತಹ ಪುಣ್ಯಾತ್ಮರಿಗೆ ಅಧ್ಯಕ್ಷನಾಗಿ ದೀರ್ಘದಂಡ ನಮಸ್ಕಾರ ಮಾಡಿ ಕೃತಜ್ಞತೆ ಗಳನ್ನು ಅರ್ಪಸುತ್ತೇನೆ. ಶೀಘ್ರವೇ ಚಿಕ್ಕಬಳ್ಳಾಪುರ ನಗರಾಡಳಿತದ ವತಿಯಿಂದ ಸಂಸದ ಡಾ.ಕೆ.ಸುಧಾಕರ್ ನೇತೃತ್ವ ದಲ್ಲಿ ಜಲಾಶಯಕ್ಕೆ ಭಾಗೀನ ಅರ್ಪಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ತುಂಬಿಹರಿದ ಶ್ರೀನಿವಾಸಸಾಗರ : ಹರಿದು ಬರುತ್ತಿದೆ ಪ್ರವಾಸಿಗರ ದಂಡು
ಚಿಕ್ಕಬಳ್ಳಾಪುರ ಒಂದೆಡೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದರೆ ಮತ್ತೊಂದೆಡೆ ಎರಡೂ ಜಲಾಶಯಗಳು ಬೋರ್ಗೆ ರೆದು ಹರಿಯುತ್ತಿರುವ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಬೆಂಗಳೂರು ಸೇರಿದಂತೆ ದೂರುದೂರು ಗಳಿಂದ ಪ್ರವಾಸಿಗರು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ತಂಡೋಪತಂಡವಾಗಿ ಹರಿದು ಬರುತ್ತಿದ್ದಾರೆ. ಈ ಹಿಂದೆ ಜಲಾಶಯಗಳ ಒಡಲು ತುಂಬಿ ಕೋಡಿಹರಿಯುವುದನ್ನು ನೋಡಲು ಬಂದು ಅನೇಕರು ಜೀವಕ್ಕೆ ಅಪಾಯ ತಂದುಕೊAಡಿರುವ ಇತಿಹಾಸ ಜಿಲ್ಲಾಡಳಿತಕ್ಕೆ ಇದೆ.ಮತ್ತೊಮ್ಮೆ ಇಂತಹ ಅವಘಡಗಳು ಸಂಭವಿಸಬಾರದು ಎಂದಾದರೆ ಜಿಲ್ಲಾಡಳಿತ ಕೂಡಲೇ ಜಲಾಶಯಗಳ ಸುತ್ತ ಪೊಲೀಸ್ ಬಿಗಿ ಪಹರೆ ಹಾಕು ಬೇಕಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇದೇ ರೀತಿ  ಗುಡಿಬಂಡೆ ತಾಲೂಕಿನ ಅಮಾನಿಬೈರಸಾಗರ ಕೆರೆ, ಬಾಗೇಪಲ್ಲಿ ತಾಲೂಕಿನ ಚಿತ್ರಾವತಿ ಜಲಾಶಯಗಳು ಕೂಡ ತುಂಬಿ ಕೋಡಿ ಹರಿಯುತ್ತವೆ. ವರ್ಷಪೂರ್ತಿ ಕಣ್ಮರೆಯಾಗಿ ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಉತ್ತರ ಪಿನಾಕಿನಿ ಕೂಡ ಮೈದುಂಬಿ ಹರಿಯುತ್ತಿದೆ.

ಹೀಗೆ ರಾಜ್ಯದಲ್ಲಿಯೇ ಅತಿಹೆಚ್ಚು ಕೆರೆಕುಂಟೆಗಳನ್ನು ಹೊಂದಿರುವ ಜಿಲ್ಲೆ ಎಂಬ ಖ್ಯಾತಿಗೆ ಒಳಗಾಗಿರುವ ಚಿಕ್ಕ ಬಳ್ಳಾಪುರದಲ್ಲಿ ಹಿಂಗಾರು ಮಳೆ ಒಣಗಿದ್ದ ಬೆಳೆಗಳಿಗೆ ಜೀವಾಮೃತ ಉಣಿಸಿದೆ. ತಲ್ಲಣಗೊಂಡಿದ್ದ ಜನಕ್ಕೆ ತನ್ನೊಡ ಲಲ್ಲಿ ಜಲಮೂಲವನ್ನು ಉಕ್ಕಿಸಿ ಒಂದೆಡೆ ಸಂತೋಷ, ಮತ್ತೊಂದೆಡೆ ದು:ಖ ಎರಡನ್ನೂ ಏಕಕಾಲಕ್ಕೆ ತರುವ ಮೂಲಕ ಪ್ರಕೃತಿಯ ಮುಂದೆ ನರನಾಟ ಏನೂ ನಡೆಯದು ಎಂದು ಸಾರಿರುವುದು ವಿಚಿತ್ರವಾದರೂ ಸತ್ಯ.