Saturday, 14th December 2024

ಬಾಲ ಕಾರ್ಮಿಕತೆ ಹೋಗಲಾಡಿಸಲು ಮಕ್ಕಳಿಗೆ ಶಿಕ್ಷಣ ನೀಡಬೇಕು: ಸಿಇಒ ವಿದ್ಯಾಕುಮಾರಿ

ತುಮಕೂರು: ಬಾಲಕಾರ್ಮಿಕತೆ ಹೋಗಲಾಡಿಸಿ, ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎಲ್ಲರೂ ಕೈಜೊಡಿಸಬೇಕಿದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಜಾಗೃತಿ ಜಾಥಾ ಕಾರ್ಯ ಕ್ರಮ ದಲ್ಲಿ  ಮಾತನಾಡಿದರು.
ಜೀವನ ನಿರ್ವಹಣೆ ಮಾಡಲು ಕಷ್ಟವಿರುವ ಕುಟುಂಬಗಳಲ್ಲಿ ಚಿಕ್ಕ ಮಕ್ಕಳನ್ನು ವಿವಿಧ ಕೆಲಸಗಳಿಗೆ ಕಾರ್ಮಿಕರನ್ನಾಗಿ ಮಾಡಿ ದುಡಿಸಿಕೊಳ್ಳಲಾಗುತ್ತಿದೆ ಎಂದ ಅವರು ಚಿಂದಿ ಅಯುವುದು,ಸರ್ಕಲ್‌ಗಳಲ್ಲಿ ಭಿಕ್ಷೆ ಬೇಡುವ ಕೆಲಸಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿ ಅವರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗು ವುದು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಬಾಲಕಾರ್ಮಿ ಕತೆಗೆ ಬಡತನ ಮತ್ತು ಅನಕ್ಷರತೆ ಮುಖ್ಯ ಕಾರಣಗಳಾಗಿದ್ದು,ಸರಕಾರಗಳು ಇವುಗಳನ್ನು ಹೋಗಲಾಡಿಸಲು ಅನೇಕ ಪೂರಕ ಕ್ರಮ ಗಳನ್ನು ಕೈಗೊಂಡಿದೆ.
6 ರಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವುದು ಸಂವಿಧಾನಬದ್ದ ಹಕ್ಕಾಗಿದೆ.ಅಲ್ಲದೆ ಅವರಿಗೆ ಶಿಕ್ಷಣ ನೀಡಬೇಕಾಗಿರುವುದು ತಂದೆ ತಾಯಿಗಳು ಮತ್ತು ಸರಕಾರಗಳ ಕರ್ತವ್ಯವಾಗಿದೆ.ಮಕ್ಕಳು ಶಿಕ್ಷಣವನ್ನು ಪಡೆದು ಅಧಿಕಾರಿ, ರಾಜಕೀಯ ಪ್ರತಿನಿಧಿಗಳಾಗಿ ದೇಶವನ್ನು ಮುನ್ನಡೆಸುವವರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪಾಲಿಕೆ ಮಹಾಪೌರ ಬಿ.ಜಿ ಕೃಷ್ಣಪ್ಪ ಮಾತನಾಡಿ, ನಮ್ಮ ಸುತ್ತಮುತ್ತ ಇರುವ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ರೆ ಅಂತಹ ಮಕ್ಕಳನ್ನು ಗುರುತಿಸಿ ಮುನ್ನೆಲೆಗೆ ತಂದು ಶಿಕ್ಷಣ ನೀಡಬೇಕಾಗಿದೆ. ಇಂದು ನ್ಯಾಯಾಂಗ ಕ್ಷೇತ್ರದಲ್ಲಿ ಹೆಚ್ಚೆಚ್ಚು ಹೆಣ್ಣು ಮಕ್ಕಳು ನ್ಯಾಯಾಧೀಶರಾಗಿ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಹೆಣ್ಣುಮಕ್ಕಳು ಶಿಕ್ಷಣ ಪಡೆದು ಉನ್ನತವಾದ ದನ್ನು ಸಾಧಿಸಬೇಕೆಂದು ತಿಳಿಸಿದರು.
ಉಪವಿಭಾಗಾಧಿಕಾರಿ ವಿ.ಅಜಯ್ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಜಿಲ್ಲಾಧಿಕಾರಿಗಳ ಸಂದೇಶವನ್ನು ಓದಿದರು.ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಏರ್ಪಡಿಸಿದ್ದ ಚರ್ಚಾಸ್ಪರ್ಧೆ, ಚಿತ್ರಕಲಾ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಾದ ವಿವಿಧ ಶಾಲೆಗಳ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಜಾಗೃತಿ ಜಾಥಾಕ್ಕೆ  ಅಧಿಕಾರಿಗಳು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ನಂಜಯ್ಯ, ಕಾರ್ಮಿಕ ಅಧಿಕಾರಿ ಎಚ್, ಎನ್ ರಮೇಶ್, ಯೋಜನಾ ನಿರ್ದೇಶಕ ರವಿಕುಮಾರ್, ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಕಿರಣ್‌ಕುಮಾರ್, ವೆಂಕಟೇಶ್ ಸೇರಿದಂತೆ ಇನ್ನಿತರ ಅಧಿಕಾರಿ ವರ್ಗದವರು ಉಪಸ್ಥಿತರಿದ್ದು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.