Friday, 25th October 2024

ಮಂಗಳೂರಿನ ಎಂ ಚಾರಿಟೇಬಲ್ ಟ್ರಸ್ಟ್’ನಿಂದ ಕಂಪ್ಯೂಟರ್ ಬಸ್‌

ಮಂಗಳೂರು: ನಗರದ ವಿದ್ಯಾರ್ಥಿಗಳ ರೀತಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಇಲ್ಲದಿರುವುದನ್ನು ಕಂಡು ಮಂಗಳೂರಿನ ಎಂ ಚಾರಿಟೇ ಬಲ್ ಟ್ರಸ್ಟ್ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಕಂಪ್ಯೂಟರ್ ಬಸ್‌ಅನ್ನು ನಿರ್ಮಾಣ ಮಾಡಿದೆ.

ಕ್ಲಾಸ್ ಆನ್ ವೀಲ್ಸ್ ಎಂಬ ನೂತನ ಪ್ರಯೋಗದ ಕಂಪ್ಯೂಟರ್ ಬಸ್ ಶನಿವಾರ ದಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶವನ್ನು ಸುತ್ತಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲೂ ಕಂಪ್ಯೂಟರ್ ಜ್ಞಾನ ಬಿತ್ತಲಿದೆ. ಈ ‘ಕ್ಲಾಸ್ ಆನ್ ವ್ಹೀಲ್ಸ್’ ಎಂಬ ಹೆಸರಲ್ಲಿ ಐಷಾರಾಮಿ ಹವಾನಿಯಂತ್ರಿತ ಬಸ್, ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಉಚಿತ ಸೇವೆಯೊಂದಿಗೆ ಕಾರ್ಯಾಚರಿಸಲಿದೆ.

ವಾರ್ಷಿಕ ಐದು ಸಾವಿರ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ನ ಮೂಲಭೂತ ಶಿಕ್ಷಣ ನೀಡುವ ಗುರಿ ಮತ್ತು ಬಯಕೆಯನ್ನು ಈ ಡಿಜಿಟಲ್ ಬಸ್ ಹೊಂದಿದೆ. ಕಂಪ್ಯೂಟರ್ ಬಸ್‌ಅನ್ನು ಸಂಪೂರ್ಣ ಕ್ಲಾಸ್ ರೂಮ್ ಆಗಿ ಪರಿವರ್ತಿಸಲಾಗಿದೆ. ತರಗತಿಯೊಳಗೆ ಒಂದು ಟನ್ನಿನ ಎರಡು ಎ.ಸಿ. ಅಳವಡಿಸಲಾಗಿದೆ.

ಏಕಕಾಲದಲ್ಲಿ 16 ಅಥವಾ 32 ವಿದ್ಯಾರ್ಥಿಗಳು ಕಲಿಯಲು 16 ಲ್ಯಾಪ್ ಟಾಪ್ ಕಂಪ್ಯೂಟರ್, ಕೀಪೇಡ್, ಮೌಸ್, ಚಾರ್ಜರ್ಸ್, ಕೂರಲು 16 ರಿವೋಲ್ವಿಂಗ್ ಚೆಯರ್ಸ್, 16 ಮಡಚುವ ಸಂವಿಧಾನವಿರುವ ಡೆಸ್ಕ್ ಇದೆ. ಶಿಕ್ಷಕರಿಗೆ ಪ್ರತ್ಯೇಕ ಕಂಪ್ಯೂಟರ್, ಚೆಯರ್, ಡೆಸ್ಕ್ ನಿರ್ಮಿಸಲಾಗಿದೆ. ಕಾನ್ಫರೆನ್ಸ್‌ಗೆ ಪ್ರಾಜೆಕ್ಟರ್, ಪ್ರಸೆಂಟೇಶನ್‌ಗೆ ಟಿ.ವಿ., ಮ್ಯೂಸಿಕ್ ಸಿಸ್ಟಮ್ ವ್ಯವಸ್ಥೆ, ಮೈಕ್ ಸೌಂಡ್ ಸಿಸ್ಟಮ್, ಲೈಟಿಂಗ್ಸ್, ಎಲ್‌ಇಡಿ ಡಿಜಿಟಲ್ ಬೋರ್ಡ್ ಅಳವಡಿಸಲಾಗಿದೆ.

ಅಂತರ್ಜಾಲದ ವಿದ್ಯೆಗಾಗಿ ವೈಫೈ, ಇಂಟರ್ನೆಟನ್ನೂ ಒಳಗೊಂಡಿದೆ. ಕಲರ್ ಪ್ರಿಂಟರ್, ಫೋಟೋ ಕೋಪಿ ಮತ್ತು ಸ್ಕ್ಯಾನರ್ ಇದೆ. ವಿದ್ಯಾರ್ಥಿಗಳ, ಶಿಕ್ಷಕರ ಹಾಜರಾತಿಗೆ ಬಸ್ ಬಾಗಿಲ ಬಳಿ ಅತ್ಯಾಧುನಿಕ ಬಯೋಮೆಟ್ರಿಕ್ ಡಿವೈಸ್ ಸ್ಥಾಪಿಸಲಾಗಿದೆ. ಇತರ ಸಮಯಗಳಲ್ಲಿ 25 ಜನರ ಸಭೆ ಸಮಾರಂಭ ಗಳನ್ನು ಬಸ್ ನೊಳಗೆ ಎಲ್ಲಿ ಬೇಕಾದರೂ ಮಾಡುವಂತಹ ಮಲ್ಟಿಸ್ಪೆಶಾಲಿಟಿ ವ್ಯವಸ್ಥೆ ಇದೆ.

ತರಗತಿ ಒಳ ಹೋಗಲು ಮೂರು ಪ್ರವೇಶ ದ್ವಾರಗಳಿವೆ. ಮಕ್ಕಳ ಸುರಕ್ಷತೆಗಾಗಿ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲಾಗಿದೆ.

ಸ್ವಂತ ವಿದ್ಯುತ್ ಸಂಚಲನಕ್ಕಾಗಿ 6.8 ಕೆ.ವಿ. ಯ ಅತ್ಯಾಧುನಿಕ ಜನರೇಟರ್, ಹೊರಗಿನ ವಿದ್ಯುತ್ ಸಂಪರ್ಕದ ಸೌಲಭ್ಯದ ಪಾಯಿಂಟ್, ಕೈ ಮುಖ ತೊಳೆಯಲು ಬಸ್ ಟಾಪಲ್ಲಿ 200 ಲೀಟರಿನ ನೀರಿನ ಟ್ಯಾಂಕ್, ವಾಶ್ ಬೇಸಿನ್, 40 ಲೀಟರಿನ ಕುಡಿಯುವ ನೀರಿನ ಸೌಲಭ್ಯ, ಎರಡು ಎಸಿ ಔಟ್ ಡೋರ್ ಯೂನಿಟ್, ಬ್ಯಾಟರಿ ಬಾಕ್ಸ್, ಟೂಲ್ ಬಾಕ್ಸ್, ಪವರ್ ಪಾಯಿಂಟ್ ಮೊದಲಾದವನ್ನು ಬಸ್ ಹೊಂದಿದೆ.

ಹನೀಫ್ ಪುತ್ತೂರು ಅವರು ತನ್ನೂರಿನ ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಬಸ್ ಪ್ರಾರಂಭಿಸುವ ಉದ್ದೇಶದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ಮೊಬೈಲ್ ಬಸ್ ನ್ನು ಅತ್ಯಾಧುನಿಕ ಟೆಕ್ನಾಲಜಿಯಲ್ಲಿ ನಿರ್ಮಿಸಿ ಶಾಲೆಗಳಿಗೆ ತೆರಳಿ ಕಂಪ್ಯೂಟರ್ ಬೋಧಿಸುವ ಕನಸನ್ನು ಬಿಚ್ಚಿಟ್ಟರು.

ಈ ಯೋಜನೆಯನ್ನು ಮೆಚ್ಚಿ ಲಕ್ಷಾಂತರ ಜನರು ಆನ್ಲೈನ್ ವೋಟ್ ಮಾಡುವ ಮೂಲಕ ಅವರನ್ನು ವಿಜೇತರನ್ನಾಗಿಸಿದ್ದರು. ಅದರಲ್ಲಿ ದೊರೆತ ಬಹುಮಾನದ ಮೊತ್ತಕ್ಕೆ ತಮ್ಮಿಂದಾಗುವ ಹಣವನ್ನು ಸೇರಿಸಿ ತಾನು ಸೇವೆಗೈಯ್ಯುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ಗೆ ಆ ಮೊತ್ತ ಹಸ್ತಾಂತರಿಸಿ ಬಸ್ ಕನಸನ್ನು ಸಾಕ್ಷಾತ್ಕರಿಸಿದರು.

ಬಸ್‌ಗೆ ಒಟ್ಟು 60 ಲಕ್ಷ ರೂ. ಖರ್ಚು ಆಗಿದ್ದು, ಹೆಚ್ಚುವರಿ ಭಾಗಶಃ ಮೊತ್ತವನ್ನು ಎಂ.ಫ್ರೆಂಡ್ಸ್ ಟ್ರಸ್ಟ್ ಭರಿಸಿದೆ. ಅರವಿಂದ್ ಮೋಟಾರ್ಸ್‌ನ ಟಾಟಾ ಕಂಪೆನಿಯ ಹೀರಾ ಮಾಡೆಲಿನ ಈ ಬಸ್‌ಅನ್ನು ಕಂಪ್ಯೂಟರ್ ಕ್ಲಾಸ್ ರೂಮ್ ಆಗಿ ಸುಸಜ್ಜಿತವಾಗಿ ಪರಿವರ್ತಿಸಿದವರು ಬೈಕಂಪಾಡಿಯ ರೋಡ್ರಿಕ್ಸ್ ಇಂಡಸ್ಟ್ರೀಸ್ ನವರು.

ಈ ಬಸ್ ಜಿಲ್ಲೆಯ ಗ್ರಾಮೀಣ ವಿದ್ಯಾಸಂಸ್ಥೆಗಳಿಗೆ ತೆರಳಿ ಶಾಲಾ ಆವರಣದಲ್ಲೇ ಕಂಪ್ಯೂಟರ್ ಶಿಕ್ಷಣ ನೀಡಲಿದೆ.