ಚಿತ್ತಾಪುರ: ಬುದ್ಧನ ಶಾಂತಿಯ ಚಿಂತನೆಗಳನ್ನು ಗ್ರಾಮೀಣ ಜನರಿಗೆ ತಿಳಿಸಲು ಪಬ್ಬಜ್ಜ (ಪಿಂಡಪಾತ) ಕಾರ್ಯಕ್ರಮ ಏರ್ಪಡಿಸಿ ಸನ್ನತಿಗೆ ಆಗಮಿಸಿರುವ ಹತ್ತಾರು ಬೌದ್ಧ ಭಿಕ್ಷುಗಳು, ಪೊರಕೆ ಸಲಿಕೆಗಳನ್ನು ಹಿಡಿದುಕೊಂಡು ಬೌದ್ಧ ತಾಣಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡರು.
ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕ ಚಕ್ರವರ್ತಿಯ ಕ್ರಿ.ಪೂ. 3ನೇ ಶತಮಾನದ ಇತಿಹಾಸ ಹೇಳುತ್ತಿರುವ ಬೌದ್ಧ ಶಿಲಾಶಾಸನಗಳ ತಾಣವಾದ ಚಿತ್ತಾಪುರ ತಾಲೂಕಿನ ಸನ್ನತಿ ಬುದ್ದ ವಿಹಾರದ ಸುತ್ತಮುತ್ತಲು ಮುಳ್ಳುಕಂಟಿ ಬೆಳೆದ ದುಸ್ಥಿತಿ ಕಂಡ ಭಂತೇಜಿ ಗಳು ಸ್ವತಃ ಸ್ವಚ್ಚತೆ ಮಾಡಿದರು.
ಚಾರಿಕಾ ಭಿಕ್ಷಾ ಪಾತ್ರೆಗಳನ್ನು ಕೆಳಗಿಟ್ಟು ಮುಳ್ಳಿನ ಗಿಡಗಳನ್ನು ಕತ್ತರಿಸಿದರು. ಘನ ತ್ಯಾಜ್ಯ, ಕಸ, ಕಲ್ಲು, ಸೆಗಣಿ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಗ್ರಾಮೀಣ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಸನ್ನತಿಯ ಬುದ್ಧ ವಿಹಾರದಲ್ಲಿ ಹತ್ತು ದಿನಗಳ ಪಬ್ಬಜ್ಜ ಕಾರ್ಯಕ್ರಮ ಹಾಗೂ ಹಳ್ಳಿಗಳಲ್ಲಿ ಧಮ್ಮ ಸಂಸ್ಕೃತಿ ಯ ಚಾರಿಕಾ ಅಭಿಯಾನ ಆಯೋಜಿಸಿತ್ತು. ವಿಹಾರದಲ್ಲಿ ಆಶ್ರಯ ಪಡೆದು ಧಮ್ಮ ಪ್ರಾರ್ಥನೆ, ಧ್ಯಾನ, ಉಪನ್ಯಾಸ ನೀಡುತ್ತಲೇ ವಿಹಾರದ ಮುಂದೆ ಪ್ರತಿಷ್ಠಾಪಿಸಲಾದ ಸಾಮ್ರಾಟ್ ಅಶೋಕನ ಪ್ರತಿಮೆ ಮತ್ತು ಅಶೋಕ ಸ್ತಂಭದ ಜಾಗದ ಶುಚಿತ್ವ ಕಾರ್ಯ ಆಧ್ಯತೆ ನೀಡಿವ ಮೂಲಕ ಸ್ವಚ್ಚತೆಯ ಮಹತ್ವ ತಿಳಿಸಿಕೊಟ್ಟರು.
ಸಾವಿರಾರು ಬೌದ್ಧ ಶಿಲೆಗಳು, ಬುದ್ಧನ ಮೂರ್ತಿಗಳು, ಬುದ್ಧವಿಹಾರ ಸಮುಚ್ಚಯ, ಪಾಲಿ ಭಾಷೆಯ ಶಾಸನ, ಅಶೋಕ ಚಕ್ರವರ್ತಿಯ ಮೂರ್ತಿ, ನೆಲದಲ್ಲಿ ಹೂತ ಇಟ್ಟಿಗೆ ಮನೆಗಳು ಸೇರಿದಂತೆ ಇನ್ನಿತರ ಬೌದ್ಧ ಕುರುಹುಗಳು ಮಣ್ಣಲ್ಲಿ ದೊರೆತಿವೆ. ಅಲ್ಲದೇ ಪ್ರಪಂಚದ ಗಮನ ಸೆಳೆದಿರುವ ಸನ್ನತಿಯ ಪರಿಸರ ಅಭಿವೃದ್ಧಿ ಕಾಣದೆ ಮುಳ್ಳುಕಂಟಿಗಳಿಂದ ಕೂಡಿರುವುದು ಬೇಸರ ಸಂಗತಿಯಾಗಿದೆ ಎಂದು ಬೇಸರಿಸಿಕೊಂಡರು. ಮುಳ್ಳು ಬೆಳೆದ ಜಾಗದಲ್ಲಿ ಧಮ್ಮ ಶಾಂತಿಯ ಹೂಗಳನ್ನು ಬೆಳೆಯಲು ಬುದ್ಧನ ಅನುಯಾಯಿಗಳು ಮುಂದೆ ಬರಬೇಕು ಎಂದು ಭಂತೇಜಿಗಳು ಗ್ರಾಮೀಣ ಪ್ರದೇಶದ ಜನರಲ್ಲಿ ಮನವಿತ್ತರು.