ತುಮಕೂರು: ಅಭಿವೃದ್ಧಿ ಹೆಸರಿನಲ್ಲಿ ಗಿಡ-ಮರಗಳನ್ನು ಕಡಿದು ಅರಣ್ಯ ಪ್ರದೇಶವನ್ನು ನಾಶಪಡಿಸುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ವನ್ಯಜೀವಿ ಸಂಕುಲಗಳು ವಿನಾಶದ ಅಂಚಿಗೆ ತಲುಪುತ್ತಿವೆ. ವನ್ಯಜೀವಿ ಸಂಕುಲದ ವಿನಾಶದಿಂದ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು.
ನಗರದ ಎಂಪ್ರೆಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಜಿಲ್ಲೆಯಲ್ಲಿ ದೇವರಾಯನದುರ್ಗ, ಬುಕ್ಕಾಪಟ್ಟಣ ಸೇರಿದಂತೆ ವಿವಿಧ ಅರಣ್ಯ ಪ್ರದೇಶ ದಲ್ಲಿ ಬೇರೆಲ್ಲೂ ಕಾಣಸಿಗದ ವಿವಿಧ ಪ್ರಭೇಧದ ಪಕ್ಷಿ ಹಾಗೂ ಹಾವಿನ ಸಂತತಿಗಳನ್ನು ಕಾಣಬಹು ದಾಗಿದ್ದು, ಈ ಅಪರೂಪದ ಪ್ರಬೇಧಗಳನ್ನು ಸಂರಕ್ಷಿಸಬೇಕು. ಅರಣ್ಯ ಪ್ರದೇಶ ಒತ್ತುವರಿ, ಪ್ರಾಣಿಗಳ ಬೇಟೆ, ಜಾಗತಿಕ ತಾಪಮಾನ ಏರಿಕೆ, ಪರಿಸರ ನಾಶದಿಂದ ವನ್ಯ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮಧುಗಿರಿ ಭಾಗದಲ್ಲಿ ಕೃಷ್ಣಾ ಮೃಗಗಳ ಅರಣ್ಯಧಾಮ ಎಂದು ಘೋಷಣೆ ಮಾಡಿದ್ದರಿಂದ ಕೃಷ್ಣಮೃಗಗಳ ಬೇಟೆಯಾಡುವುದು ನಿಂತಿದೆ. ಇದರಿಂದ ಕೃಷ್ಣಮೃಗಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರತಿ ಶಾಲೆಯಲ್ಲಿಯೂ ಕಡ್ಡಾಯವಾಗಿ ಗಿಡಗಳನ್ನು ನೆಟ್ಟು ಬೆಳೆಸಬೇಕೆಂದು ಎಲ್ಲಾ ಶಾಲಾ ಮುಖ್ಯೋ ಪಾಧ್ಯಾಯರಿಗೆ ಸೂಚಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯಾಕಾರ್ಯನಿರ್ವಾಹಕಾಧಿಕಾರಿಗಳಿ ಗೆ ಹಾಗೂ ಹೊಸ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡುವ ಪೂರ್ವದಲ್ಲಿ ನಿವೇಶನಗಳ ರಸ್ತೆ ಬದಿಗಳಲ್ಲಿ ಕಡ್ಡಾಯವಾಗಿ ಗಿಡಗಳನ್ನು ನೆಡಬೇಕೆಂದು ಮಾಲೀಕರಿಗೆ ನಿಬಂಧನೆ ಹಾಕಬೇಕೆಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಆಕಾಶ ಕಾಯಗಳಲ್ಲಿ ಜೀವ ಸಂಕುಲಗಳಿರುವ ಏಕೈಕ ಗ್ರಹವೇ ಭೂಮಿ. ಯಾವುದೇ ಅಪೇಕ್ಷೆಯಿಲ್ಲದೆ ಜೀವ ಸಂಕುಲಗಳಿಗೆ ಕುಡಿಯಲು ನೀರು, ತಿನ್ನಲು ಆಹಾರ ಸಂಪನ್ಮೂಲ ನೀಡುತ್ತಿರುವ ಪರಿಸರವನ್ನು ಹಾಳು ಮಾಡದೆ ಸಂರಕ್ಷಿಸುವ ಮೂಲಕ ಭೂಮಿಯ ಋಣವನ್ನು ತೀರಿಸಬೇಕು. ಕೊರೋನಾ ಸಂದರ್ಭದಲ್ಲಿ ಹಣ ನೀಡಿದರೂ ಆಮ್ಲಜನಕ ದೊರೆಯದ ಪರಿಸ್ಥಿತಿ ಎದುರಾಗಿತ್ತು. ಪರಿಸರ ನಾಶವಾದರೆ ಜೀವಸಂಕುಲಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಹಾಗಾಗಿ ಜಿಲ್ಲಾ ಪಂಚಾಯತಿಯಿಂದ ಪ್ರತಿ ಗ್ರಾಮ ಪಂಚಾಯತಿ ಯಲ್ಲಿಯೂ ೧೦೦೦ ಗಿಡ ನೆಟ್ಟು ಬೆಳೆಸುವ ಹಸಿರು ಗ್ರಾಮ ಅಭಿಯಾನವನ್ನು ಶೀಘ್ರದಲ್ಲಿಯೇ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಅರಣ್ಯ ಒತ್ತುವರಿಯೇ ಪ್ರಮುಖ ಕಾರಣ. ಇಡೀ ಭೂಮಿ ನಮ್ಮ ಸ್ವತ್ತು ಎಂಬ ಸ್ವಾರ್ಥ ಭಾವನೆಯನ್ನು ನಾವೆಲ್ಲ ಬಿಡಬೇಕು. ಹೋಂಸ್ಟೇ, ಹೋಟೆಲ್, ರೆಸಾರ್ಟ್ಗಳ ನಿರ್ಮಾಣದಿಂದ ಕಾಡೆಲ್ಲ ನಾಡಾಗಿ ಪರಿವರ್ತನೆಯಾಗುತ್ತಿದೆ. ಮನುಷ್ಯ ಇಂತಹ ಸ್ವಾರ್ಥ ಮನೋ ಭಾವನೆಯನ್ನು ಬಿಟ್ಟು ಅರಣ್ಯ ಸಂಪತ್ತನ್ನು ರಕ್ಷಿಸಲು ಮುಂದಾಗಬೇಕೆಂದು ತಿಳಿಸಿದರು.
ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್. ಅನುಪಮ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಅಕ್ಟೋಬರ್ ೨ ರಿಂದ ೮ರವರೆಗೆ ವನ್ಯ ಜೀವಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ಜಿಲ್ಲೆಯಲ್ಲಿರುವ ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ಬಗ್ಗೆ ಮಾಹಿತಿ ನೀಡಿದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ರಕ್ಷಣಾಧಿಕಾರಿ ವಿ.ದೇವರಾಜ್ ಸ್ವಾಗತಿಸಿದರು. ಕು.ತ್ರಿಶಾ ಹಾಡಿದ “ಗಿಡ ನೆಡಿ, ಗಿಡ ನೆಡಿ, ಗಿಡಾ ನೆಡಿ. ಮನೆಯ ಮುಂದೊAದು ಗಿಡಾ ನೆಡಿ, ಮನೆಯ ಹಿಂದೊAದು ಗಿಡಾ ನೆಡಿ, ನೆಟ್ಟ ಗಿಡಕೆ ನೀರು ಹಾಕಿ, ಬಾಳು ಕೊಡಿ” ಎಂಬ ಪರಿಸರ ಗೀತೆ ಅರ್ಥಪೂರ್ಣವಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿಯ ನರಸಿಂಹಮೂರ್ತಿ, ಸಣ್ಣಮಸಿಯಪ್ಪ, ಗುಂಡಪ್ಪ, ಅರಣ್ಯ ಇಲಾಖೆ ಅಧಿಕಾರಿ/ಸಿಬ್ಬಂದಿಗಳು, ವಿದ್ಯಾರ್ಥಿಗಳು, ರೈತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೃಷಿ ಅರಣ್ಯದಲ್ಲಿ ಸಾಧನೆ ಮಾಡಿದ ರೈತರ ವಿಭಾಗದಲ್ಲಿ ಬೆಟ್ಟಯ್ಯ, ಈಶ್ವರಪ್ಪ, ಕಂಬಣ್ಣ, ಕಾಳಪ್ಪ, ವೆಂಕಟೇಶ್, ಎನ್ ವೀಣಾ, ರಮೇಶ್ಕುಮಾರ್, ಪಂಚಾಕ್ಷರಯ್ಯ, ಡಿ.ಎಸ್.ಶಿವಕುಮಾರ್, ಬಿ.ಜಿ.ದೊಡ್ಡಯ್ಯ, ಜಿ.ಆರ್.ಪದ್ಮರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತುಮಕೂರು ಅರಣ್ಯ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಲಯ ಗಸ್ತು ಅರಣ್ಯಪಾಲಕರಾದ ತುಮಕೂರಿನ ಶ್ವೇತಾ ಎಂ.ಆರ್, ಕುಣಿಗಲ್ನ ಶರಣಪ್ಪ ಪುಂಡಲೀಕ ನಾಯಕೋಡಿ ಹಾಗೂ ಮೋಹನ್ಕುಮಾರ್; ಬುಕ್ಕಾಪಟ್ಟಣ ವಲಯದ ಉಪ ವಲಯ ಅರಣ್ಯಾಧಿಕಾರಿ, ಮೋಜಣಿದಾರ ಕಿರಣ್ ಟಿ, ತಿಪಟೂರು ವಲಯ ಅರಣ್ಯ ವೀಕ್ಷಕ ನಿಜಗುಣಮೂರ್ತಿ, ಶಿರಾ ವಲಯ ಉಪ ವಲಯ ಅರಣ್ಯಾಧಿಕಾರಿ, ಮೋಜಣಿದಾರ ನಾಗರಾಜು, ರಂಗನಾಥ್, ಮಂಜಯ್ಯ, ರಾಮಚಂದ್ರಯ್ಯ ಪಿ, ಹನುಮಂತಪ್ಪ, ಗಂಗಾಧರಯ್ಯ, ಚಿಕ್ಕಣ್ಣ ಅವರನ್ನು ಗೌರವಿಸಲಾಯಿತು.