Saturday, 27th July 2024

ಕಡು ಬಿಸಿಲಿನಲ್ಲೂ ಮುಖ್ಯಮಂತ್ರಿ ಬೊಮ್ಮಾಯಿ ಮೈಸೂರಿನಲ್ಲಿ ರೋಡ್ ಶೋ

ಮೈಸೂರು: ವಿಧಾನಸಭೆ ಚುನಾವಣೆ ಹಿನ್ನೆಲೆ ಸೋಮವಾರ ಕಡು ಬಿಸಿಲಿನ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನಲ್ಲಿ ರೋಡ್ ಶೋ ನಡೆಸಿ ಗಮನಸೆಳೆದರು.

ಈ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು. ನಗರದ ಅಗ್ರಹಾರದಿಂದ ಮಧ್ಯಾಹ್ನ 2:30ಕ್ಕೆ ಸಿಎಂ ರೋಡ್ ಆರಂಭವಾಯಿತು.

ಈ ವೇಳೆ ಬಸವರಾಜ ಬೊಮ್ಮಾಯಿ ಅವರಿಗೆ ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ, ಬಿಜೆಪಿ ಒಬಿಸಿ ಅಧ್ಯಕ್ಷ ನರೇಂದ್ರ ಬಾಬು, ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಟಿ.ಎಸ್‌. ಶ್ರೀವತ್ಸ, ನಗರ ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್ ಸಾಥ್ ನೀಡಿದರು. ಅಗ್ರಹಾರದಿಂದ ಆರಂಭ ವಾದ ರೋಡ್ ಶೋ 101 ಗಣಪತಿ ದೇವಸ್ಥಾನ, ನಂಜುಮಳಿಗೆ ವೃತ್ತ ತಲುಪಿ ಚಾಮುಂಡಿ ಪುರಂನಲ್ಲಿ ಕೊನೆಗೊಂಡಿತು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ. ಮೈಸೂರು ಐತಿಹಾಸಿಕ ನಗರ ಆಗಿದೆ. ಕಳೆದ ಹಲವು ವರ್ಷದಗಳಿಂದ ಕೆ.ಆರ್‌.ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯವಿದೆ. ಸಂಸದರು ಇಲ್ಲಿಯ ವರೇ ಆಗಿದ್ದಾರೆ. ಮೈಸೂರಿನಲ್ಲಿ ನಮ್ಮ ಪಕ್ಷ ಸಂಘಟಿತವಾಗಿದೆ. ನಿಮ್ಮ ಉತ್ಸಾಹ ನೋಡಿ ಕಮಲ ಅರಳುತ್ತದೆ. ಅಲ್ಲದೆ ಇಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಸಕಾರಾತ್ಮಕ ರಾಜಕೀಯ ಮಾಡುವವರಿಗೆ ನಿಮ್ಮ ಬೆಂಬಲ ಇರಲಿ. ಅಲ್ಲದೆ ನಮ್ಮ ಸರ್ಕಾರ ಆಯುಷ್ಮಾನ್‌ ಕಾರ್ಡ್ ಮುಖಾಂತರ ಜನರ ಆರೋಗ್ಯಕ್ಕೆ ಭದ್ರತೆ ಒದಗಿಸಿದೆ. ಮನೆ ಕಟ್ಟಲು ಕೇಂದ್ರ ಸರ್ಕಾರ ಆವಾಸ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಬಸವ ಆಶ್ರಯ ಯೋಜನೆ ಕಲ್ಪಿಸಿದೆ ಎಂದರು.

ಮೈಸೂರು ಅಭಿವೃದ್ಧಿಗೆ ಬಿಜೆಪಿ ಸರ್ಕರದ ಅವಧಿಯಲ್ಲಿ 2,500 ಕೋಟಿ ರೂಪಾಯಿ ನೀಡಲಾಗಿದೆ. ದಸರಾಗೆ 25 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿತ್ತು. ಮೈಸೂರಿನಲ್ಲಿ ಪ್ರವಾಸೋಮದ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಟೂರಿಸಂ ಸರ್ಕಿಟ್ ಮಾಡಲಾಗಿತ್ತು. ಕೆ.ಆರ್.ಆಸ್ಪತ್ರೆ ದುರಸ್ತಿಗೆ 80 ಕೋಟಿ ನೀಡಲಾಗಿತ್ತು. ಮಹಾರಾಣಿ ಕಟ್ಟಡ ನವೀಕರಣಕ್ಕೂ ಅನುದಾನ ನೀಡಲಾಗಿದೆ. ಆದ್ರ ಕಾಂಗ್ರೆಸ್‌ನದ್ದು ಗ್ಯಾರಂಟಿ ಅಲ್ಲ, ಗಳಗಂಟಿ ಸರ್ಕಾರ ಎಂದು ಟೀಕಿಸಿದರು.

ನಂತರ ನಟಿ ತಾರಾ ಮಾತನಾಡಿ, ಮೈಸೂರು ಸಾಂಸ್ಕೃತಿಕ ನಗರಿ. ಈ ನಗರದ ನಿವಾಸಿಗಳು ಪ್ರಜ್ಞಾವಂತರಿದ್ದಾರೆ. ಹಾಗಾಗಿ ಪ್ರಧಾನಿ ಮೋದಿ ಕೈಬಲಪಡಿಸುವ ದೃಷ್ಟಿಯಿಂದ ಬಿಜೆಪಿಗೆ ಮತ ಚಲಾಯಿಸಿ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಸಹಕರಿಸಿ ಎಂದು ಮನವಿ ಮಾಡಿದರು.

error: Content is protected !!