ಚಿ.ನಾ.ಹಳ್ಳಿ: ಬೆಂಕಿಯ ಅನಾಹುತಕ್ಕೆ ನೂರಾರು ಸಾಕು ಪ್ರಾಣಿಗಳು ಜೀವಂತವಾಗಿ ಧಹನವಾಗಿರುವ ಘಟನೆ ರಾಮಘಟ್ಟದಲ್ಲಿ ಕಳೆದ ರಾತ್ರಿ ಸಂಭ ವಿಸಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿಯ ರಾಮಘಟ್ಟದ ನಿವಾಸಿ ರೈತ ಚೇತನ್ ಕೃಷಿ ಜತೆಗೆ ನೂರಾರು ಸಾಕು ಪ್ರಾಣಿಗಳನ್ನ ಸಾಕಾಣಿಕೆ ಮಾಡುತ್ತ ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದರು. ಇವರ ಮನೆಯ ಸಮೀಪದಲ್ಲೆ ಇದ್ದ ಇವರ ದನದ ಕೊಟ್ಟಿಗೆಯಲ್ಲಿ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದು ಇಡೀ ಕೊಟ್ಟಿಗೆಯನ್ನ ಸಂಪೂರ್ಣವಾಗಿ ಆವರಸಿಕೊಂಡಿದೆ.
ತಕ್ಷಣ ಸಾರ್ವಜನಿಕರು ಆಗಮಿಸಿ ಬೆಂಕಿಯನ್ನ ನಂದಿಸುವ ಕೆಲಸವನ್ನ ನಡೆಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳಿಯ ಪೊಲೀಸರು ಭೇಟಿ ನೀಡಿ ಬೆಂಕಿಯನ್ನ ನಂದಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಯಾವುದೆ ಪ್ರಯೋಜನವಾಗಿಲ್ಲ. ಪರಿಣಾಮ ಈ ದುರ್ಘಟನೆಯಿಂದ ದನದ ಕೊಟ್ಟಿಗೆಯಲ್ಲಿದ್ದ ಸುಮಾರು 100 ಕುರಿಗಳು, 8 ಸೀಮೆ ಹಸು, 300 ಕೋಳಿ, ಸಾಕು ನಾಯಿ ಸುಟ್ಟು ಕರಕಲಾಗಿ ಹೋಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೆಂಕಿಯ ಅವಘಡವು ಆಕಸ್ಮಿಕವೇ ಅಥವಾ ಕಿಡಿಗೆಡಿಗಳ ಕೃತ್ಯವೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.