Thursday, 12th December 2024

ಕೊಬ್ಬರಿ ಖರೀದಿಗೆ ನೋಂದಣಿ ಸ್ಥಗಿತ:  ಖಂಡನೆ

ತುಮಕೂರು: ನಾಪೆಡ್ ಮೂಲಕ ಕೊಬ್ಬರಿ ಖರೀದಿಗೆ ರಾಜ್ಯಾದ್ಯಂತ ಪ್ರಕ್ರಿಯೆ ಪ್ರಾರಂಭಗೊAಡು ಕೇವಲ ಐದು ದಿನಗಳ ಒಳಗೆ ರೈತರ ನೋಂದಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಇರುವುದನ್ನು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು (ಎಐಕೆಕೆಎಂಎಸ್) ತೀವ್ರವಾಗಿ ಖಂಡಿಸಿದೆ.
ಕೇವಲ ಐದು ದಿನ ಸಮಯ ನೀಡಿ 62,500 ಮೆಟ್ರಿಕ್ ಟನ್ ಕೊಬ್ಬರಿ ನೋಂದಣಿ ಆಗಿದೆ ಎಂದು ಹೇಳುತ್ತಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಕಂಪ್ಯೂಟರ್ ಸರ್ವರ್ ಸಮಸ್ಯೆಯಿಂದಾಗಿ ನೋಂದಣಿ ಕಾರ್ಯ ಸರಿಯಾಗಿ ಆಗಿಲ್ಲ. ಬಯೋಮೆಟ್ರಿಕ್ ಲೋಪಗಳಿಂದ ನೋಂದಣಿಯಿಂದ ಅಚೆ ಉಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ನಡುವೆ 5ನೇ ದಿನವೇ ಮಧ್ಯಾಹ್ನಕ್ಕೆ ನೋಂದಣಿ ಸ್ಥಗಿತಗೊಳಿಸಿದ್ದಾರೆ. ಪ್ರತಿ ಕೇಂದ್ರದಿಂದ ಸಾವಿರಾರು ರೈತರು ನೋಂದಣಿ ಮಾಡಿಸದೆ ಮನೆಗೆ ತೆರಳುತ್ತಿದ್ದಾರೆ.
 ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆದಂತಹ ಎಲ್ಲಾ ಬೆಳೆಯನ್ನು ಸಂಪೂರ್ಣವಾಗಿ ಖರೀದಿಸಬೇಕು. ಕೇವಲ ಒಟ್ಟು ಉತ್ಪಾದನೆಯಲ್ಲಿ ಶೇಕಡ 25ರಷ್ಟು ಬೆಳೆ ಖರೀದಿಸುವ ಸರ್ಕಾರದ ನಿರ್ಬಂಧವು ಸಾಕಷ್ಟು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಹಾಗೂ ಬಹು ಸಂಖ್ಯಾ ರೈತರನ್ನು ಈ ಯೋಜನೆಯಿಂದ ದೂರವಿಡುತ್ತದೆ. ಸತತ ನಷ್ಟ ಅನುಭವಿಸುತ್ತಿರುವ ತೆಂಗು ಬೆಳೆಗಾರರಿಗೆ ಇದರಿಂದ ಸಂಪೂರ್ಣ ಆರ್ಥಿಕ ದಿವಾಳಿತನಕ್ಕೆ ತಳ್ಳುತ್ತದೆ.
 ಉಂಡೆ ಕೊಬ್ಬರಿಯ ಬೆಲೆ ತೀವ್ರ ಕುಸಿತದಿಂದ ತೆಂಗು ಬೆಳೆಗಾರರು ಕಳೆದ ಒಂದು ವರ್ಷದಿಂದ ಸತತ ನಷ್ಟ ಅನುಭವಿಸುತ್ತಿದ್ದಾರೆ. ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ ಸ್ವಾತಂತ್ರ‍್ಯ ಮಹೋತ್ಸವದ ಅಮೃತ ಕಾಲದಲ್ಲಿ ಕಲ್ಪತರು ಜಿಲ್ಲೆಯ ರೈತರು ವಿಷ ಕುಡಿಯುವ ಪರಿಸ್ಥತಿಗೆ ಬಂದಿದೆ. ರೈತರ ಆರ್ಥಿಕ ಪರಿಸ್ಥಿತಿ ಬಹಳ ದುಸ್ತರವಾಗಿದೆ. ಇದರಿಂದಾಗಿ ಬಡ ರೈತನ ಮೇಲೆ ಈ ವ್ಯವಸ್ಥೆಯ ಆರ್ಥಿಕ ಶೋಷಣೆ ಯಾವುದೇ ಅಡೆ ತಡೆ ಇಲ್ಲದೆ ದಿಟ್ಟ ನಿರಂತರವಾಗಿ ನಡೆಯುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಮೇಲಾಟಕ್ಕೆ ಸೀಮಿತವಾಗದ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು (ಎಐಕೆಕೆಎಂಎಸ್) ಕೊಬ್ಬರಿ ಬೆಳೆಗಾರರು ಬೆಳೆದಂತಹ ಎಲ್ಲಾ ಬೆಳೆಯನ್ನು ಸಂಪೂರ್ಣವಾಗಿ ಖರೀದಿಸ ಬೇಕು ಮತ್ತು ವರ್ಷವಿಡಿ ಖರೀದಿ ಕೇಂದ್ರವನ್ನು ತೆರೆದಿರಬೇಕು ಎಂದು ಒತ್ತಾಯಿಸುತ್ತದೆ.