ಬೆಂಗಳೂರು: ರಾಜ್ಯದಲ್ಲಿ 2 ಹಂತಗಳ ಲೋಕಸಭಾ ಚುನಾವಣೆ ಮುಗಿಯಿತು. ಆದರೆ ಈ ಹಿಂದೆ ನಿರ್ಧರಿಸಿದಂತೆ ಜೂ.6ರ ವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟಿಸಿದಾಗ ಕೇಂದ್ರ ಚುನಾವಣ ಆಯೋಗ ಸ್ಪಷ್ಟವಾಗಿ ಹೇಳಿತ್ತು. ವೇಳಾಪಟ್ಟಿ ಪ್ರಕಟಗೊಂಡ ಕ್ಷಣದಿಂದ ಜೂನ್ 6ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಹಾಗಿದ್ದಾಗ ರಾಜ್ಯದಲ್ಲಿ ಮತದಾನ ಮುಗಿದಿದೆ ಎಂದು ನೀತಿ ಸಂಹಿತೆ ಸಡಿಲಿಕೆ ಮಾಡಲು ಆಗುವುದಿಲ್ಲ ಎಂದರು.
ಏನಾದರೂ ವಿಶೇಷ ಸಂದರ್ಭಗಳಿದ್ದಾಗ ರಾಜ್ಯ ಸರಕಾರ ಚುನಾವಣ ಆಯೋಗಕ್ಕೆ ಮನವಿ ಮಾಡಿಕೊಳ್ಳಬಹುದಾದರೂ ಆಯೋಗದ ತೀರ್ಮಾನವೇ ಅಂತಿಮ. ಆದರೆ ದೈನಂದಿನ ಆಡಳಿತಾತ್ಮಕ ಕೆಲಸಗಳಿಗೆ ಯಾವುದೇ ಧಕ್ಕೆ ಬರುವುದಿಲ್ಲ. ಕಾಲಬದ್ಧವಾಗಿ ಆಗಬೇಕಾದ ಮತ್ತು ತುರ್ತು ಕೆಲಸಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಕುಡಿಯುವ ನೀರು, ಬಿತ್ತನೆ ಬೀಜ-ಗೊಬ್ಬರ ಖರೀದಿ, ಬರಗಾಲ ನಿರ್ವಹಣೆ ಮತ್ತಿತರ ಕೆಲಸಗಳಿಗೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿ ಸಲ್ಲಿಸುವ ಪ್ರಸ್ತಾವನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.
ಎ.19ರ ಮೊದಲ ಹಂತದಲ್ಲೇ ಮತದಾನ ಮುಗಿದ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷವೂ ತನ್ನ ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಿಕೆ ಮಾಡುವಂತೆ ಚುನಾವಣ ಆಯೋಗವನ್ನು ಒತ್ತಾಯಿಸಿತ್ತು ಎಂಬುದು ಇಲ್ಲಿ ಸ್ಮರಿಸಬಹುದು.