Sunday, 15th December 2024

ಕಲರ್ ಕಾಟನ್ ಕ್ಯಾಂಡಿ ಮಾರಾಟ ನಿಷೇಧ: ತಪ್ಪಿದರೆ 7 ವರ್ಷ ಜೈಲು, 10 ಲಕ್ಷ ದಂಡ

ಬೆಂಗಳೂರು: ರಾಜ್ಯಾದ್ಯಂತ ಕಲರ್ ಕಾಟನ್ ಕ್ಯಾಂಡಿ ಮಾರಾಟ ನಿಷೇಧ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ. ನಿಯಮ ಮೀರಿ ಕಲರ್ ಕ್ಯಾಂಡಿ ಮಾರಾಟ ಮಾಡಿದ್ರೇ ಅಂತವರಿಗೆ 7 ವರ್ಷ ಜೈಲು, 10 ಲಕ್ಷ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ Cotton Candy ಗಳ ಗುಣಮಟ್ಟ ಕೃತಕ ಬಣ್ಣಗಳ ಬೆರೆಸುವಿಕೆಯಿಂದಾಗಿ ಉತ್ತಮವಾಗಿಲ್ಲದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾ ಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ ಎಂದಿದ್ದಾರೆ.

ವಿಶ್ಲೇಷಣೆಗೊಳಪಡಿಸಲಾದ ಮಾದರಿಗಳಲ್ಲಿ 15 Cotton Candy ಮಾದರಿಗಳು ಕೃತಕ ಬಣ್ಣದಿಂದ (ಟಾರ್‌ಟ್ರಾಸೈನ್‌ ಕೃತಕ ಬಣ್ಣ 5 ಮಾದರಿಗಳು, ಸನ್ ಸೆಟ್ ಯೆಲ್ಲೋ 4 ಮಾದರಿಗಳು ಮತ್ತು ರೋಡಮೈನ್ಬಿ ಹೊಂದಿರುವ ಮಾದರಿಗಳು 6) ಕೂಡಿರುವುದರಿಂದ ಅಸುರಕ್ಷಿತ ಎಂದು ವಿಶ್ಲೇಷಣಾ ವರದಿಗಳಲ್ಲಿ ಕಂಡುಬಂದಿದ್ದು, ಅಸುರಕ್ಷಿತ ಎಂದು ವರದಿ ಮಾಡಲ್ಪಟ್ಟಿರುತ್ತವೆ ಎಂದು ತಿಳಿಸಿದೆ.

The Food Safety and Standards (Food Products Standards and Food Additives) Regulations, 2011ರ ನಿಯಮಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ. ಕೃತಕ ಬಣ್ಣಗಳು ಬಳಕೆದಾರರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡಬಹುದಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.

ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006ರ ನಿಯಮ 50ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು .10.00 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.