Saturday, 27th July 2024

ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹ ವೇಳೆ ಕಾರ್ಯಕರ್ತರ ಸಂಘರ್ಷ..!

ಚಿಕ್ಕಮಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಬಂದಿದ್ದ ಕೆಪಿಸಿಸಿ ವೀಕ್ಷಕರ ಎದುರೇ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಪೂರ್, ಜಿಲ್ಲಾಧ್ಯಕ್ಷ ಅಂಶುಮಂತ್, ಕಾಂಗ್ರೆಸ್ ಮುಖಂಡರಾದ ಎಚ್.ಎಸ್.ಪುಟ್ಟಸ್ವಾಮಿ ಸೇರಿದಂತೆ ವಿವಿಧ ಮುಖಂಡರು ಹೈಕಮಾಂಡ್ ಆದೇಶದ ಮೇರೆಗೆ ವೀಕ್ಷಕರಾಗಿ ಮೂಡಿಗೆರೆಗೆ ಆಗಮಿಸಿದ್ದರು. ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳಿಂದ ಪಕ್ಷದ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿತ್ತು. 300-350 ಕಾರ್ಯಕರ್ತ ರಿಗೆ ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ತಿಳಿಸಲು ಅವಕಾಶವಿತ್ತು. ಈ ವೇಳೆ ನಯನಾ ಮೋಟಮ್ಮ ಪರ ಮತ್ತು ವಿರುದ್ಧ ಗುಂಪುಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

ನಯನಾ ಮೋಟಮ್ಮ ಅವರ ಪರವಾಗಿ ಇರುವವರಿಗೆ ಹೆಚ್ಚು ಅಭಿಪ್ರಾಯ ತಿಳಿಸಲು ಅವಕಾಶ ನೀಡಿದ್ದೀರಿ. ಅವರ ವಿರುದ್ಧದ ಕಾರ್ಯಕರ್ತರ ಹೆಸರುಗಳನ್ನ ಬಿಟ್ಟಿದ್ದೀರಾ ಎಂದು ನಯನಾ ಮೋಟಮ್ಮ ವಿರುದ್ಧ ಗುಂಪಿನ ಕಾರ್ಯಕರ್ತರು, ಮುಖಂಡರು ಆರೋಪಿಸಿ ಜಿಲ್ಲಾಧ್ಯಕ್ಷರ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಪರಸ್ಪರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೈ-ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಈ ಸಂದರ್ಭದಲ್ಲಿ ಮುಖಂಡರು ಮಧ್ಯಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆ.

ಮಾಜಿ ಸಚಿವೆ ಮೋಟಮ್ಮನವರೇ ಅಭ್ಯರ್ಥಿ ಆಗಬೇಕು ಎಂದು ಅನೇಕ ಮುಖಂಡರು, ಕಾರ್ಯಕರ್ತರು ವೀಕ್ಷಕರೆದುರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಟಿಕೆಟ್ ವಿಚಾರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಾಭಿಪ್ರಾಯ ಇದೀಗ ವೀಕ್ಷಕರ ಎದುರೇ ಸ್ಫೋಟಗೊಂಡಿದೆ.

Read E-Paper click here

error: Content is protected !!