Tuesday, 10th September 2024

ಸಂಕಷ್ಟದಲ್ಲಿರುವ ರೈತರೊಂದಿಗೆ ಕಾಂಗ್ರೆಸ್ ಚೆಲ್ಲಾಟವಾಡುತ್ತಿದೆ : ವಿರೋಧ ಪಕ್ಷದ ನಾಯಕ ಅಶೋಕ್

ತುಮಕೂರು: ಸಂಕಷ್ಟದಲ್ಲಿರುವ ರೈತರೊಂದಿಗೆ ಕಾಂಗ್ರೆಸ್ ಚೆಲ್ಲಾಟವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಅಶೋಕ್ ಕಿಡಿಕಾರಿದರು.
ಜಿಲ್ಲೆಯ ಸಿರಾ ತಾಲ್ಲೂಕಿನ ದೇವರಹಳ್ಳಿ  ಗ್ರಾಮದ ರೈತ ಪಾಂಡುರಂಗಪ್ಪ ಎಂಬುವರ ಜಮೀನಿಗೆ ಭೇಟಿ ನೀಡಿ ಹಾಳಾಗಿದ್ದ ಬೆಳೆಯನ್ನು ವೀಕ್ಷಿಸಿ ರೈತರ ಸಮಸ್ಯೆ ಆಲಿಸಿದರು.
ಆನೆಕಾಲು ಕಾಯಿಲೆಗೆ ತುತ್ತಾಗಿರುವ ರೈತ ಪಾಂಡುರಂಗಪ್ಪ ಬೆಳೆದ ಬೆಳೆ ಬರದಿಂದ ನಾಶವಾಗಿರುವ ಬಗ್ಗೆ ವಿಪಕ್ಷ ನಾಯಕ ಅಶೋಕ್ ಅವರ ಬಳಿ ಅವಲವತ್ತುಕೊಂಡರು, 3 ಎಕರೆ 30 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ, ಜೋಳ, ಹುರುಳಿ ಬೆಳೆ ಬರದಿಂದ ನಾಶವಾಗಿದ್ದರೂ ಕಾಂಗ್ರೆಸ್‌ನವರು ಯಾರೂ ನಮ್ಮ ಕಷ್ಟ ಕೇಳಲು ಬಂದಿಲ್ಲ. ಮೂರು ವರ್ಷದ ಹಿಂದೆ ಬೆಳೆ ವಿಮೆ ಮಾಡಿಸಿದ್ದೆ, ಹಣ ಬರಲಿಲ್ಲ. ಈಗ ನನ್ನ ಕಾಲು ಸರಿಯಿಲ್ಲ. ಹಾಗಾಗಿ ಬೆಳೆ ವಿಮೆ ಕಟ್ಟಲು ಸಾಧ್ಯವಾಗಲಿಲ್ಲ. 50 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದೆ. ಆದರೆ ಈ ಬಾರಿಯೂ ಬೆಳೆ ಕೈ ಸೇರಲಿಲ್ಲ ಎಂದು ನೋವು ತೋಡಿ ಕೊಂಡರು.
ಅಳಲು ತೋಡಿಕೊಂಡ ರೈತ ಪಾಂಡುರಂಗಪ್ಪ ಅವರ ಸಮಸ್ಯೆ ಆಲಿಸಿದ ವಿಪಕ್ಷ ನಾಯಕ ಅಶೋಕ್ ಅವರು, ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ, ಮೊಬೈಲ್‌ನಲ್ಲೇ ರೈತನ ಜಮೀನಿನ ಆರ್‌ಟಿಸಿ ಪರಿಶೀಲಿಸಿದರು. ಆಗ ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಿಸದೇ ಇರುವುದನ್ನು ಕಂಡು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ರೈತರು ಜಮೀನುಗಳಲ್ಲಿ ಇಟ್ಟಿರುವ ಬೆಳೆಗಳ ಬಗ್ಗೆ ವಿವರವಾಗಿ ಮಾಹಿತಿ ಸಂಗ್ರಹಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಶೋಕ್ ಅವರು, ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡದೆ ಬೆಳೆ ಸಮೀಕ್ಷೆ ಮಾಡಿದ್ದಾರೆ ಎಂದು ಕಿಡಿಕಾರಿ ಬೆಳೆ ಸಮೀಕ್ಷೆ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸ್ಥಳ ದಲ್ಲೇ ಪಾಠ ಮಾಡಿದರು.
ರೈತರಿಗೆ ಸಮರ್ಪಕ ಮಾಹಿತಿ ನೀಡದ ಕಾರಣ ಎನ್‌ಡಿಆರ್‌ಎಫ್ ಪರಿಹಾರ ಸಹ ಸಿಗುತ್ತಿಲ್ಲ. ಬೀದರ್‌ನಿಂದ ಕೋಲಾರದವರೆಗೂ ಶಾಲೆಯಲ್ಲಿ ಮಕಿ ಕಾಮಕಿ ಪಾಠ ಬರೆದಂತೆ ಅಧಿಕಾರಿಗಳು ಒಂದೇ ಉತ್ತರ ನೀಡುತ್ತಾರೆ. ಚಾಮರಾಜನಗರ, ಬೀದರ್‌ಲ್ಲಿ ಸಹ ಬೆಳೆ ಪರಿಶೀಲನೆ ಮಾಡಿದೆ. ಎಲ್ಲಾ ಕಡೆ ಒಂದೇ ರೀತಿ ಮಾಹಿತಿ ದಾಖಲಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ನಾನು ಈ ಹಿಂದೆ ಕಂದಾಯ ಸಚಿವನಾಗಿದ್ದಾಗ ಒಂದೆರಡು ತಿಂಗಳಲ್ಲೇ ಬರ ಪರಿಹಾರ ಹಣವನ್ನು ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಲಾ ಗಿತ್ತು. ಕೇಂದ್ರ ಸರ್ಕಾರ ಕೊಡಲಿ ಎಂದು ಕಾಯುತ್ತಿರಲಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಬಟನ್ ಒತ್ತಿದರೆ ಎಲ್ಲ ರೈತರ ಖಾತೆಗೆ ಪರಿಹಾರದ ಹಣ ವರ್ಗಾವಣೆಯಾಗುತ್ತಿತ್ತು. ಆದರೆ ಈಗ 100 ಬಟನ್ ಒತ್ತಿದರೂ ಸಹ ಪರಿಹಾರದ ಹಣ ಬರುತ್ತಿಲ್ಲ ಎಂದು ಟೀಕಿಸಿದರು.
ರೈತರುಗಳಿಗೆ ಬೆಳೆ ಸಮೀಕ್ಷೆ ಆಪ್ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಮೊದಲು ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಬೇಕು. ಕಚೇರಿ ಯಲ್ಲಿ ಕುಳಿತು ಈ ರೀತಿ ಬೇಜವಾಬ್ದಾರಿಯಾಗಿ ಕೆಲಸ ಮಾಡಿದರೆ ರೈತರಿಗೆ ನ್ಯಾಯ, ಪರಿಹಾರ ಎಲ್ಲಿ ಸಿಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾ ಯ್ದರು.
ರೈತರಿಗೆ ಬೆಳೆ ಬೆಳೆಯುವ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸವನ್ನು ಕೃಷಿ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ. ಹೀಗಾದರೆ ಹೇಗೆ, ಬೀದರ್‌ನಿಂದ ಕೋಲಾರದವರೆಗೂ ಒಂದೇ ಲೈನ್ ಬರೆದರೆ ಯಾವ ಕೆಲಸ ತಾನೆ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಚಿದಾನಂದಗೌಡ, ಬಿ.ಕೆ. ಮಂಜುನಾಥ್, ರವಿಶಂಕರ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಮುಖಂಡರಾದ ಬರಗೂರು ಶಿವಕುಮಾರ್  ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *